

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಾಲಿ ದೇಶೀಯ ಕ್ರಿಕೆಟ್ ಋತುವಿನ ಮೊದಲ ಅಂತರ ರಾಜ್ಯ ಕ್ರಿಕೆಟ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 15ರಿಂದ ನಡೆಯಲಿರುವ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಮಯಾಂಕ್ ಅಗರ್ವಾಲ್ ನಾಯಕರಾಗಿ ಮುಂದುವರಿದಿದ್ದರೆ, ಅನುಭವಿ ಬ್ಯಾಟರ್ ಕರುಣ್ ನಾಯರ್ ಮೂರು ವರ್ಷಗಳ ಬಳಿಕ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಹೆಸರಿಸಿರುವ 15 ಆಟಗಾರರ ತಂಡದಲ್ಲಿ ವಿಕೆಟ್ ಕೀಪರ್ ಕೃತಿಕ್ ಕೃಷ್ಣ ಮತ್ತು ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ಹೊಸಮುಖವಾಗಿದ್ದಾರೆ. ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಕೋಟ್ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಆತಿಥೇಯ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಮತ್ತು ವೇಗಿ ಪ್ರಸಿದ್ಧ ಕೃಷ್ಣ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿರುವ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಕಳೆದ ಮೂರು ವರ್ಷ ವಿದರ್ಭ ತಂಡದ ಪರ ಆಡಿದ್ದ 33 ವರ್ಷದ ಕರುಣ್ ನಾಯರ್, ಕಳೆದ ವರ್ಷ 863 ರನ್ ಸಿಡಿಸಿ ರಣಜಿ ಟ್ರೋಫಿ ಗೆಲುವಿಗೂ ನೆರವಾಗಿದ್ದರು. ಕಳೆದ ಜೂನ್ನಲ್ಲಿ ಭಾರತ ಟೆಸ್ಟ್ ತಂಡಕ್ಕೆ 8 ವರ್ಷಗಳ ಬಳಿಕ ಪುನರಾಗಮನ ಕಂಡ ಬೆನ್ನಲ್ಲೇ ಕರುಣ್, ಕರ್ನಾಟಕ ತಂಡಕ್ಕೂ ಮರಳಲು ನಿರ್ಧರಿಸಿದ್ದರು.
ಶ್ರೀಜಿತ್ ಕೆಎಲ್ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿದ್ದರೆ, ಮಂಡ್ಯದ ಕೃತಿಕ್ ಕೃಷ್ಣ ಎರಡನೇ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಶ್ರೇಯಸ್ ಗೋಪಾಲ್ ಮತ್ತು ಕಳೆದ ಋತುವಿನಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದ ಮೊಹ್ಸಿನ್ ಖಾನ್ ಜತೆಗೆ 20 ವರ್ಷದ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ತಂಡದ ಮೂರನೇ ಸ್ಪಿನ್ನರ್ ಆಗಿದ್ದಾರೆ. ಇತ್ತೀಚೆಗೆ ಕೆ. ತಿಮ್ಮಪ್ಪಯ್ಯ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿ ಮಿಂಚಿದ ಸಾಧನೆ ಶಿಖರ್ಗೆ ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ನೆರವಾಗಿದೆ. ಮೊಹ್ಸಿನ್ ಖಾನ್ ಕೂಡ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು.
ವೈಶಾಕ್ ವಿಜಯ್ಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ ಮತ್ತು ವೆಂಕಟೇಶ್ ಎಂ. ತಂಡದಲ್ಲಿರುವ ನಾಲ್ವರು ವೇಗಿಗಳಾಗಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಮಯಾಂಕ್, ಕರುಣ್ಗೆ ಯುವ ಬ್ಯಾಟರ್ಗಳಾದ ಸ್ಮರಣ್ ಆರ್, ಅನೀಶ್ ಕೆವಿ, ನಿಕಿನ್ ಜೋಸ್ ಸಾಥ್ ನೀಡಲಿದ್ದಾರೆ.
ಕಳೆದ ಆವೃತ್ತಿಯ ರಣಜಿ ತಂಡದಲ್ಲಿದ್ದ ಹಾರ್ದಿಕ್ ರಾಜ್, ಯಶೋವರ್ಧನ್ ಪರಂತಾಪ್, ಸುಜಯ್ ಸಾತೇರಿ ಮತ್ತು ವಿದ್ಯಾಧರ್ ಪಾಟೀಲ್ ಈ ಬಾರಿ ಹೊರಬಿದ್ದಿದ್ದಾರೆ. ವಿ. ಕೌಶಿಕ್ ಗೋವಾಗೆ ವಲಸೆ ಹೋಗಿದ್ದಾರೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್, ಸ್ಮರಣ್ ಆರ್. ಶ್ರೀಜಿತ್ ಕೆಎಲ್ (ವಿ.ಕೀ), ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್ಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ, ನಿಕಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ (ವಿ.ಕೀ), ಅನೀಶ್ ಕೆವಿ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ. ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಫೀಲ್ಡಿಂಗ್ ಕೋಚ್: ಶಬರೀಶ್ ಪಿ.ಮೋಹನ್.