ಮಹಾರಾಜ ಟ್ರೋಫಿಗೆ ನಾಯಕ, ಕೋಚ್​ ಹೆಸರು ಪ್ರಕಟಿಸಿದ ಮೈಸೂರು ವಾರಿಯರ್ಸ್​

my web
Published on

ಬೆಂಗಳೂರು: ಎನ್​ಆರ್​ ಗ್ರೂಪ್​ ಒಡೆತನ ಮತ್ತು ಸೈಕಲ್​ ಪ್ಯೂರ್​ ಅಗರ್​ಬತ್ತಿ ಸಹಯೋಗದ ಮೈಸೂರು ವಾರಿಯರ್ಸ್​ ತಂಡಕ್ಕೆ ಅನುಭವಿ ಬ್ಯಾಟರ್​ ಕರುಣ್​ ನಾಯರ್​ ನಾಯಕ ಮತ್ತು ಆರ್​ಎಕ್ಸ್​ ಮುರಳೀಧರನ್​ ಮುಖ್ಯ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಭಾನುವಾರದಿಂದ ನಡೆಯಲಿರುವ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯಲ್ಲಿ ಮೈಸೂರು ತಂಡ ಮೊದಲ ದಿನದ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​ ವಿರುದ್ಧ ಅಭಿಯಾನ ಆರಂಭಿಸಲಿದೆ.

ಕಳೆದ ತಿಂಗಳು ನಡೆದ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾದ ಆಟಗಾರರ ಜತೆಗೆ ಯುವ ಕ್ರಿಕೆಟಿಗರಾದ ಲಂಕೇಶ್​ ಮತ್ತು ಗೌತಮ್​ ಸಾಗರ್​ ಅವರನ್ನು ಪ್ರತಿಭಾಶೋಧದ ಮೂಲಕ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪ್ರಸಿದ್ಧಕೃಷ್ಣ, ಜೆ. ಸುಚಿತ್​, ಆರ್​ ಸಮರ್ಥ್​, ಮನೋಜ್​ ಭಾಂಡಗೆ ತಂಡದಲ್ಲಿರುವ ಇತರ ಪ್ರಮುಖ ಆಟಗಾರರಾಗಿದ್ದಾರೆ. ಆರ್​ಸಿಬಿ ತಂಡದ ಬ್ಯಾಟಿಂಗ್​ ಕೋಚ್​ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಆರ್​.ಎಕ್ಸ್​. ಮುರಳೀಧರನ್​, ಪ್ರತಿಭಾಶೋಧದ ನೇತೃತ್ವ ವಹಿಸಿದ್ದರು.

"ಮೈಸೂರು ವಾರಿಯರ್ಸ್​ ಈಗ ಕೇವಲ ಒಂದು ತಂಡವಲ್ಲ. ಕರ್ನಾಟಕ ಮತ್ತು ಭಾರತೀಯ ಕ್ರಿಕೆಟಿಗೆ ಹಲವು ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿದೆ. ರಾಜ್ಯಮಟ್ಟದಲ್ಲಿ ಪ್ರತಿಭಾನ್ವೇಷಣೆ ನಡೆಸಿ ಭರವಸೆಯ ಪ್ರತಿಭೆಗಳನ್ನು ಗುರುತಿಸುತ್ತಿದ್ದೇವೆ' ಎಂದು ತಂಡದ ಮಾಲೀಕ ಹಾಗೂ ಸೈಕಲ್​ ಪ್ಯೂರ್​ ಅಗರ್​ಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್​ ರಂಗ ಶುಕ್ರವಾರ ನಡೆದ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ತಿಳಿಸಿದರು.

ತಂಡದ ಸಹಾಯಕ ಕೋಚ್​ ಆಗಿ ವಿಜಯ್​ ಮಡ್ಯಾಳ್ಕರ್​, ಬೌಲಿಂಗ್​ ಕೋಚ್​ ಆಗಿ ಆದಿತ್ಯ ಸಾರ್​, ಫಿಸಿಯೋ ಆಗಿ ಶ್ರೀರಂಗ, ಫಿಟ್ನೆಸ್​ ಟ್ರೇನರ್​ ಆಗಿ ಅರ್ಜುನ್​ ಹೊಯ್ಸಳ ಮತ್ತು ಪಾರ್ಮೆನ್ಸ್​ ಅನಾಲಿಸ್ಟ್​ ಆಗಿ ಸಚ್ಚಿದಾನಂದ ಮತ್ತು ಶಣ್ಮುಗಂ ಮಸ್ಸರ್​ ನೇಮಕಗೊಂಡಿದ್ದಾರೆ.

ಮೈಸೂರು ವಾರಿಯರ್ಸ್​ ತಂಡದ ಭಾಗವಾಗಿ ಮುಂದುವರಿಯುತ್ತಿರುವುದು ಮತ್ತು ತಂಡದ ನಾಯಕತ್ವ ವಹಿಸುತ್ತಿರುವುದು ಅಪಾರ ಖುಷಿ ತಂದಿದೆ. ತಂಡದೊಂದಿಗೆ ಮೈದಾನಕ್ಕೆ ಕಾಲಿಡಲು ಉತ್ಸುಕನಾಗಿರುವೆ. ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಪ್ರಯತ್ನಿಸುವೆ ಎಂದು ನಾಯಕ ಕರುಣ್​ ನಾಯರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net