

ಜೈಪುರ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿದ 4 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಲೀಗ್ ಹಂತದಿಂದ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ ಮನೀಷ್ ಪಾಂಡೆ ಬಳಗ, ದೇಶೀಯ ಕ್ರಿಕೆಟ್‌ನಲ್ಲಿ ಸತತ ಎರಡನೇ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೇರಿದ ಸಾಧನೆ ಮಾಡಿತು. ರಾಜ್ಯ ತಂಡ ಮಂಗಳವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.
ಕೆಎಲ್ ಸೈನಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ಮನೀಷ್ ಪಾಂಡೆ, ಆತಿಥೇಯ ರಾಜಸ್ಥಾನ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ವೇಗಿ ವೈಶಾಕ್ ವಿಜಯ್ ಕುಮಾರ್ (22ಕ್ಕೆ 4) ರಾಜಸ್ಥಾನ ತಂಡಕ್ಕೆ ಆಘಾತ ನೀಡಿದರು. ನಾಯಕ ದೀಪಕ್ ಹೂಡಾ (109 ರನ್, 109 ಎಸೆತ, 9 ಬೌಂಡರಿ, 5 ಸಿಕ್ಸರ್) ಏಕಾಂಗಿ ನಿರ್ವಹಣೆ ನಡುವೆಯೂ ರಾಜಸ್ಥಾನ ತಂಡ 41.4 ಓವರ್‌ಗಳಲ್ಲಿ 199 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಕರ್ನಾಟಕ ತಂಡ ಕೆವಿ ಸಿದ್ದಾರ್ಥ್ (85*ರನ್, 120 ಎಸೆತ, 6 ಬೌಂಡರಿ) ಜವಾಬ್ದಾರಿ ಬ್ಯಾಟಿಂಗ್ ನೆರವಿನಿಂದ 43.4 ಓವರ್‌ಗಳಲ್ಲಿ 2 ವಿಕೆಟ್‌ಗೆ 204 ರನ್‌ಗಳಿಸಿ ಜಯದ ನಗೆ ಬೀರಿತು.
ರಾಜಸ್ಥಾನ: 41.4 ಓವರ್‌ಗಳಲ್ಲಿ 199 (ದೀಪಕ್ ಹೂಡಾ 109, ಸಮರ್‌ಜಿತ್ ಜೋಷಿ 33, ರವಿ ಬಿಷ್ಣೋಯಿ 17, ವೈಶಾಕ್ ವಿಜಯ್‌ಕುಮಾರ್ 22ಕ್ಕೆ 4, ಕೆ.ಗೌತಮ್ 61ಕ್ಕೆ 2, ಪ್ರಸಿದ್ದ ಕೃಷ್ಣ 17ಕ್ಕೆ 1, ಪ್ರವೀಣ್ ದುಬೆ 39ಕ್ಕೆ 1, ಎಂ.ವೆಂಕಟೇಶ್ 56ಕ್ಕೆ 1), ಕರ್ನಾಟಕ: 43.4 ಓವರ್‌ಗಳಲ್ಲಿ 2 ವಿಕೆಟ್‌ಗೆ 204 (ಆರ್.ಸಮರ್ಥ್ 54, ಕೆವಿ ಸಿದ್ದಾರ್ಥ್ 85*, ಮನೀಷ್ ಪಾಂಡೆ 52*, ಅಂಕಿತ್ ಚೌಧರಿ 39ಕ್ಕೆ 1, ಕಮಲೇಶ್ ನಾಗರಕೋಟಿ 27ಕ್ಕೆ 1).
ಕ್ವಾರ್ಟರ್ ಫೈನಲ್
ಕರ್ನಾಟಕ-ತಮಿಳುನಾಡು
ಯಾವಾಗ: ಮಂಗಳವಾರ
ಆರಂಭ: ಬೆಳಗ್ಗೆ 9.00