

ಬೆಂಗಳೂರು: ಕರ್ನಾಟಕದ ಅಥ್ಲೀಟ್ಗಳಾದ ಉನ್ನತಿ ಅಯ್ಯಪ್ಪ ಬೊಳ್ಳಂಡ ಮತ್ತು ಚೇತನ್ ಬಿ. ಅವರು ಭುವನೇಶ್ವರದಲ್ಲಿ ನಡೆಯುತ್ತಿರುವ 27ನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.
ಕಳಿಂಗಾ ಸ್ಟೇಡಿಯಂನಲ್ಲಿ ಕೂಟದ 2ನೇ ದಿನವಾದ ಸೋಮವಾರ ನಡೆದ ಮಹಿಳೆಯರ 200 ಮೀಟರ್ ಸ್ಪರ್ಧೆಯಲ್ಲಿ ಉನ್ನತಿ ಅಯ್ಯಪ್ಪ 23.85 ಸೆಕೆಂಡ್ಗಳಲ್ಲಿ ಓಟ ಮುಗಿಸಿದರು. ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಚೇತನ್ 2.09 ಮೀ. ಹಾರುವ ಮೂಲಕ ಅಗ್ರಸ್ಥಾನ ಪಡೆದರು. ಕೂಟದ ಮೊದಲ ದಿನ ರಾಜ್ಯದ ಕರಿಶ್ಮಾ ಎಸ್. ಸನಿಲ್ ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿದ್ದರು.
ಅಭಾ ರಾಷ್ಟ್ರೀಯ ದಾಖಲೆ: ಮಹಿಳೆಯರ ಶಾಟ್ಪುಟ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಅಭಾ ಖತುವಾ 18.41 ಮೀ. ದೂರದ ಎಸೆತದೊಂದಿಗೆ ರಾಷ್ಟ್ರೀಯ ದಾಖಲೆ ಬರೆದರು. ಅವರು ಇದಕ್ಕೆ ಮುನ್ನ 18.06 ಮೀ. ಎಸೆತದೊಂದಿಗೆ ಮನ್ಪ್ರೀತ್ ಕೌರ್ ಜತೆಗೆ ದಾಖಲೆ ಹಂಚಿಕೊಂಡಿದ್ದರು.