ರೈಲ್ವೇಸ್ ಹಳಿ ತಪ್ಪಿಸಿದ ರೋನಿತ್; ಕರ್ನಾಟಕಕ್ಕೆ ಬೋನಸ್ ತಂದ ನೋಲಾಸ್ ಜಯ, ಅಂತಿಮ ದಿನ ಮ್ಯಾಜಿಕ್

RONIT
Published on

ನವದೆಹಲಿ: ಮಧ್ಯಮ ವೇಗದ ಬೌಲರ್ ರೋನಿತ್ ಮೋರೆ (32ಕ್ಕೆ 6) ಜೀವನಶ್ರೇಷ್ಠ ನಿರ್ವಹಣೆ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 7ನೇ ಸುತ್ತಿನ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿತು.

ಮಂದ ಬೆಳಕು, ಮಳೆಯಿಂದಾಗಿ ಆರಂಭಿಕ ಎರಡು ದಿನ ಕೇವಲ ಒಂದು ಅವಧಿಯಾಟಕ್ಕಷ್ಟೇ ಸೀಮಿತವಾಗಿದ್ದರೆ, ಬುಧವಾರ ಕನಿಷ್ಠ ಇನಿಂಗ್ಸ್ ಮುನ್ನಡೆ ದಕ್ಕಿಸಿಕೊಳ್ಳಲು ಕರ್ನಾಟಕ ಪರದಾಡಿತ್ತು. ಅಂತಿಮ ದಿನದ ನಾಟಕೀಯ ಬೆಳವಣಿಗೆಯಲ್ಲಿ ರೈಲ್ವೇಸ್ ತಂಡ ದಿಢೀರ್ ಕುಸಿತ ಕಂಡರೆ, ಕರುಣ್ ನಾಯರ್ ಪಡೆ ಸುಲಭ ಸವಾಲನ್ನು ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿ ಬೋನಸ್ ಸಹಿತ 7 ಅಂಕ ಬಾಚಿಕೊಂಡಿತು.

ಈ ಮೂಲಕ 8 ಬಾರಿಯ ಚಾಂಪಿಯನ್ ಕರ್ನಾಟಕ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವ ಮೂಲಕ ಎಂಟರ ಘಟ್ಟಕ್ಕೆ ಸನಿಹವಾಯಿತು.

ಕಾರ್ನೆಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 9 ವಿಕೆಟ್​ಗೆ 199 ರನ್​ಗಳಿಂದ ಗುರುವಾರ ಆಟ ಆರಂಭಿಸಿದ ಕರ್ನಾಟಕ ತಂಡ 211 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ 29 ರನ್ ಮುನ್ನಡೆ ಸಾಧಿಸಿತು. ಬಳಿಕ 2ನೇ ಇನಿಂಗ್ಸ್ ಆರಂಭಿಸಿದ ರೈಲ್ವೇಸ್, ರೋನಿತ್ ಮೋರೆ ಮತ್ತು ಅನುಭವಿ ವೇಗಿ ಮಿಥುನ್ (17ಕ್ಕೆ 3) ಮಾರಕ ದಾಳಿಗೆ ಕುಸಿದು ಕೇವಲ 79 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ 51 ರನ್ ಗುರಿ ಪಡೆದ ಕರ್ನಾಟಕ ತಂಡ 8.2 ಓವರ್​ಗಳಲ್ಲೇ 10 ವಿಕೆಟ್ ಗೆಲುವು ದಾಖಲಿಸಿತು. -ಏಜೆನ್ಸೀಸ್

ಕದಂ-ಪಡಿಕಲ್ ಅಜೇಯ ಸಾಧನೆ

ರೈಲ್ವೇಸ್ ನೀಡಿದ 51 ರನ್ ಸವಾಲು ಬೆನ್ನಟ್ಟಿದ ಕರ್ನಾಟಕ ತಂಡ ಆರಂಭಿಕರಾದ ರೋಹನ್ ಕದಂ (27ರನ್, 31 ಎಸೆತ, 4 ಬೌಂಡರಿ) ಹಾಗೂ ದೇವದತ್ ಪಡಿಕಲ್ (24 ರನ್, 19 ಎಸೆತ, 3 ಬೌಂಡರಿ) ಜೋಡಿಯ ಸಾಹಸದಿಂದ 50 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಯಾವುದೇ ಅಪಾಯವಾಗದಂತೆ ಚಹಾ ವಿರಾಮಕ್ಕೂ ಮೊದಲೇ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿತು.

ರೋನಿತ್ ಮೋರೆ-ಮಿಥುನ್ ಅಬ್ಬರ

ದಿನದ ಆರಂಭದಲ್ಲೇ ಕರ್ನಾಟಕವನ್ನು ಕಟ್ಟಿಹಾಕಿ ಅಲ್ಪ ಹಿನ್ನಡೆ ಯೊಂದಿಗೆ 2ನೇ ಸರದಿ ಆರಂಭಿಸಿದ ರೈಲ್ವೇಸ್, ನಾಟಕೀಯ ಕುಸಿತ ಕಂಡಿತು. ಇನಿಂಗ್ಸ್​ನ 2ನೇ ಓವರ್ ಎಸೆದ ಪ್ರತೀಕ್ ಜೈನ್ ಆರಂಭಿಕ ಆಶಿಶ್ ಶೆರಾವತ್ (0) ಅವರನ್ನು 6ನೇ ಎಸೆತದಲ್ಲಿ ಪೆವಿಲಿಯನ್​ಗೆ

ಅಟ್ಟಿದರು. ಇದರೊಂದಿಗೆ ರೈಲ್ವೇಸ್ ಕುಸಿತಕ್ಕೂ ಮುನ್ನುಡಿ ಬರೆದು ರಾಜ್ಯ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಬಳಿಕ ರೋನಿತ್​- ಮಿಥುನ್ ಜೋಡಿ ಅಬ್ಬರದ ಎದುರು ರೈಲ್ವೇಸ್ ಮಂಕಾಯಿತು. ಭೋಜನ ವಿರಾಮದ ವೇಳೆಗೆ ರೈಲ್ವೇಸ್ ತಂಡ 30 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ರೈಲ್ವೇಸ್ ಕನಿಷ್ಠ ಪ್ರತಿರೋಧ ತೋರಲು ವಿಫಲವಾಗಿ ಸರ್ವಪತನ ಕಂಡಿತು. ರೈಲ್ವೇಸ್ ಪರ ಆರಂಭಿಕ ಮೃನಾಲ್ ದೇವದತ್ (38) ಮಾತ್ರ ಎರಡಂಕಿ ತಲುಪಿದರು.

ರೈಲ್ವೇಸ್ ಪ್ರಥಮ ಇನಿಂಗ್ಸ್: 182

ಕರ್ನಾಟಕ ಪ್ರಥಮ ಇನಿಂಗ್ಸ್: 71.1 ಓವರ್​ಗಳಲ್ಲಿ 211 (ಬುಧವಾರ 9 ವಿಕೆಟ್​ಗೆ 199)

ಶರತ್ ಶ್ರೀನಿವಾಸ್ ಬಿ ಟಿ. ಪ್ರದೀಪ್ 62

ಪ್ರತೀಕ್ ಜೈನ್ ಔಟಾಗದೆ 8

ಇತರ: 9. ವಿಕೆಟ್ ಪತನ: 9-177. ಬೌಲಿಂಗ್: ಅಮಿತ್ ಮಿಶ್ರಾ 20-4-70-5, ಟಿ. ಪ್ರದೀಪ್ 15.1-5-29-1, ಸಂಗ್ವಾನ್ 18-3-57-3, ಅವಿನಾಶ್ 12-0-36-1, ಹರ್ಷ್ ತ್ಯಾಗಿ 6-0-13-0.

  • ರೈಲ್ವೇಸ್ ದ್ವಿ. ಇನಿಂಗ್ಸ್: 30 ಓವರ್​ಗಳಲ್ಲಿ 79
  • ಎಂ ದೇವಧರ್ ಸಿ ಸಿದ್ಧಾರ್ಥ್ ಬಿ ಮಿಥುನ್ 38
  • ಶೆರಾವತ್ ಸಿ ಸಿದ್ಧಾರ್ಥ್ ಬಿ ಪ್ರತೀಕ್ ಜೈನ್ 0
  • ಸೌರಭ್ ಸಿಂಗ್ ಎಲ್​ಬಿಡಬ್ಲ್ಯು ಬಿ ಮಿಥುನ್ 0
  • ಅರಿಂದಮ್ ಘೋಷ್ ಸಿ ಶರತ್ ಬಿ ಮಿಥುನ್ 3
  • ಮಹೇಶ್ ರಾವತ್ ಸಿ ಶರತ್ ಬಿ ರೋನಿತ್ 5
  • ಹರ್ಷ್ ತ್ಯಾಗಿ ಸಿ ಶರತ್ ಬಿ ರೋನಿತ್ 8
  • ದಿನೇಶ್ ಮೋರ್ ಸಿ ಪಡಿಕಲ್ ಬಿ ರೋನಿತ್ 6
  • ಅವಿನಾಶ್ ಯಾದವ್ ಬಿ ರೋನಿತ್ ಮೋರೆ 0
  • ಟಿ ಪ್ರದೀಪ್ ಎಲ್​ಬಿಡಬ್ಲ್ಯು ಬಿ ರೋನಿತ್ 0
  • ಅಮಿತ್ ಮಿಶ್ರಾ ಸಿ ಪ್ರತೀಕ್ ಜೈನ್ ಬಿ ರೋನಿತ್ 8
  • ಹಿಮಾಂಶು ಸಂಗ್ವಾನ್ ಔಟಾಗದೆ 8

ಇತರ: 3. ವಿಕೆಟ್ ಪತನ: 1-0, 2-1, 3-15, 4-20, 5-43, 6-63, 7-63, 8-63, 9-63. ಬೌಲಿಂಗ್: ಅಭಿಮನ್ಯು ಮಿಥುನ್ 9-3-17-3, ಪ್ರತೀಕ್ ಜೈನ್ 10-4-28-1, ರೋನಿತ್ ಮೋರೆ 11-3-32-6. ಕರ್ನಾಟಕ ದ್ವಿತೀಯ ಇನಿಂಗ್ಸ್: 8.2 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51

  • ರೋಹನ್ ಕದಂ ಔಟಾಗದೆ 27
  • ದೇವದತ್ ಪಡಿಕಲ್ ಔಟಾಗದೆ 24

ಇತರ: 0. ಬೌಲಿಂಗ್: ಅಮಿತ್ ಮಿಶ್ರಾ 3-0-20-0, ಹಿಮಾಂಶು ಸಂಗ್ವಾನ್ 3-0-17-0, ಟಿ. ಪ್ರದೀಪ್ 1.2-0-9-0, ಅವಿನಾಶ್ ಯಾದವ್ 1-0-5-0.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net