ಬೆಂಗಳೂರಿನಲ್ಲಿ ಕರ್ನಾಟಕ-ಬಂಗಾಳ ಕಾದಾಟ: ಫ್ರಾಂಚೈಸಿಗಳ ಗಮನ ಸೆಳೆಯಲು ಅವಕಾಶ!

New Project (2)
Published on

ಬೆಂಗಳೂರು: ಮಳೆ ಹಾಗೂ ಒದ್ದೆ ಮೈದಾನದ ಅಡಚಣೆಯ ನಡುವೆಯೂ ಪಟನಾದಲ್ಲಿ ಕಡಿಮೆ ಅವಧಿಯಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕರ್ನಾಟಕ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಪ್ರವಾಸಿ ಬಂಗಾಳ ಸವಾಲು ಎದುರಿಸಲಿದೆ. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಬಳಗ ಗೆಲುವಿನ ಲಯ ಕಾಯ್ದುಕೊಳ್ಳುವುದರ ಜತೆಗೆ ನಾಕೌಟ್ ಪ್ರವೇಶದ ಆಸೆಯನ್ನು ಜೀವಂತವಿರಿಸುವ ನಿರೀಕ್ಷೆಯಲ್ಲಿದೆ.

ಹಿಂದಿನ ಮುಖಾಮುಖಿಯಲ್ಲಿ ಬಿಹಾರ ಎದುರು ಎರಡೂವರೆ ದಿನಗಳಲ್ಲಿ ಗೆಲುವು ದಾಖಲಿಸಿರುವ ಕರ್ನಾಟಕ ತಂಡ ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 1 ಗೆಲುವು, 2 ಡ್ರಾದೊಂದಿಗೆ 8 ಅಂಕ ಕಲೆಹಾಕಿ ಸಿ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಂಗಾಳ ತಂಡ ಇಷ್ಟೇ ಪಂದ್ಯಗಳಲ್ಲಿ 2 ಡ್ರಾ ಸಾಧಿಸಿದರೆ, 1 ಪಂದ್ಯ ಒಂದೂ ಎಸೆತವಿಲ್ಲದೆ ರದ್ದುಗೊಂಡಿದೆ. 5 ಅಂಕ ಹೊಂದಿರುವ ಬಂಗಾಳ ಗುಂಪಿನ 4ನೇ ಸ್ಥಾನಿ ಎನಿಸಿದೆ. ಕಳೆದ 10 ವರ್ಷಗಳಲ್ಲಿ ರಣಜಿ ಟ್ರೋಫಿ ಗೆಲ್ಲದ ಕೊರಗನ್ನು ಹೊಂದಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಈ ಬಾರಿ ನಾಕೌಟ್‌ಗೇರಲು ಉಳಿದ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ರಾಜ್ಯ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವ ನಡುವೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಕರ್ನಾಟಕದ ಬ್ಯಾಟರ್‌ಗಳು ಎರಡನೇ ಸರದಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ನಾಯಕ ಮಯಾಂಕ್ ಬಿಹಾರ ವಿರುದ್ಧ ಶತಕ ಸಿಡಿಸಿದ್ದು, ಮನೀಷ್ ಪಾಂಡೆ ಸಹ ಅರ್ಧಶತಕ ಸಿಡಿಸಿ ಮಿಂಚಿದರು. ನಿಕಿನ್ ಜೋಸ್ ಉತ್ತಮ ಲಯದಲ್ಲಿದ್ದು, ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಬಿಗ್ ಹಿಟ್ಟರ್ ಅಭಿನವ್ ಮನೋಹರ್, ಆರ್. ಸ್ಮರಣ್ ಭರವಸೆ ಮೂಡಿಸಿದ್ದಾರೆ. ಸ್ಪಿನ್ನರ್‌ಗಳ ಸುಧಾರಿತ ನಿರ್ವಹಣೆ ಬಲ ಹೆಚ್ಚಿಸಿದ್ದು, ಅನುಭವಿ ಶ್ರೇಯಸ್ ಗೋಪಾಲ್ ಬ್ಯಾಟಿಂಗ್‌ನಲ್ಲೂ ನೆರವು ಒದಗಿಸಿದ್ದಾರೆ. ವೇಗಿ ವೈಶಾಕ್ ವಿಜಯ್ ಕುಮಾರ್ ಗೈರಿನಲ್ಲಿ ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ.

ವೇಗಿ ವೈಶಾಕ್ ಅಲಭ್ಯ: ಕರ್ನಾಟಕ ತಂಡಕ್ಕೆ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ನೆರವು ಒದಗಿಸಬಲ್ಲ ವೈಶಾಕ್ ವಿಜಯ್ ಕುಮಾರ್ ಬಂಗಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರೊಂದಿಗೆ ದೇವದತ್ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ವಿದ್ವತ್ ಕಾವೇರಪ್ಪ ಗೈರಿನಲ್ಲಿ ರಾಜ್ಯ ತಂಡ ಕಣಕ್ಕಿಲಿಯಲಿದೆ. ವೈಶಾಕ್ ಡರ್ಬನ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧ ಚತುರ್ದಿನ ಪಂದ್ಯದ ಸರಣಿಗೆ ಪಡಿಕ್ಕಲ್, ಪ್ರಸಿದ್ಧ ಕೃಷ್ಣ ಭಾರತ ಎ ತಂಡದ ಜತೆಗಿದ್ದಾರೆ. ಇವರಿಬ್ಬರು ಹಿಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದರು. ಇನ್ನು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಿದ್ವತ್ ಕಾವೇರಪ್ಪ ಹಾಲಿ ರಣಜಿಯಲ್ಲಿ ಇದುವರೆಗೆ 1 ಪಂದ್ಯವನ್ನೂ ಆಡಿಲ್ಲ.

ರಾಜ್ಯಕ್ಕೆ ಪೂರ್ಣ ಅಂಕ ಕಲೆಹಾಕುವ ಚಾನ್ಸ್!: ಬಿಹಾರ ವಿರುದ್ಧ ಸಂಪೂರ್ಣ ಅಂಕ ಕಲೆಹಾಕುವ ಅವಕಾಶ ತಪ್ಪಿಸಿಕೊಂಡ ಕರ್ನಾಟಕ ತಂಡ ತವರಿನಲ್ಲಿ ಬಂಗಾಳ ಎದುರು ಪೂರ್ಣ 7 ಅಂಕ ಪಡೆಯುವ ಅವಕಾಶ ಹೊಂದಿದೆ. ಕರ್ನಾಟಕಕ್ಕೆ ಪ್ರಮುಖ ಆಟಗಾರರ ಗೈರಿನಂತೆ ಬಂಗಾಳಕ್ಕೂ ಪ್ರಮುಖ ಆಟಗಾರರ ಅಲಭ್ಯತೆ ಹಿನ್ನಡೆ ಎನಿಸಿದೆ. ಇನ್ ಾರ್ಮ್ ಬ್ಯಾಟರ್ ಅಭಿಮನ್ಯು ಈಶ್ವರನ್, ವೇಗಿ ಮುಕೇಶ್ ಕುಮಾರ್, ಅನುಭವಿ ಮೊಹಮದ್ ಶಮಿ, ವಿಕೆಟ್ ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಹಾಗೂ ಭಾರತ ಟೆಸ್ಟ್ ವೇಗಿ ಆಕಾಶ್ ದೀಪ್ ಸೇವೆಯಿಂದ ಬಂಗಾಳ ತಂಡ ವಂಚಿತವಾಗಿದೆ. ಹಾಲಿ ಋತುವಿನಲ್ಲಿ ರನ್‌ಹೊಳೆ ಹರಿಸುತ್ತಿರುವ ಅಭಿಮನ್ಯು ಈಶ್ವರನ್ ಗೈರು ಕರ್ನಾಟಕಕ್ಕೆ ಪ್ಲಸ್ ಪಾಯಿಂಟ್ ಎನಿಸಿದೆ. ಆದರೆ ವೃದ್ಧಿಮಾನ್ ಸಾಹ, ವೇಗಿ ಇಶಾನ್ ಪೊರೆಲ್, ಸ್ಪಿನ್ನರ್ ಶಾಬಾಜ್ ಅಹ್ಮದ್ ಅವರ ಬಲವಿದೆ. ಮೊಹಮದ್ ಶಮಿ ಸಹೋದರ ಮೊಹಮದ್ ಕ್ೈ ಸಹ ಬಂಗಾಳ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಬಿಸಿಸಿಐ ವೆಬ್‌ಸೈಟ್

ಫ್ರಾಂಚೈಸಿಗಳ ಗಮನ ಸೆಳೆಯಲು ಅವಕಾಶ!

ರಣಜಿ ಟ್ರೋಫಿಯ 4ನೇ ಸುತ್ತಿನ ಪಂದ್ಯಗಳು ಬುಧವಾರ ಆರಂಭವಾಗಲಿದ್ದು, ಐಪಿಎಲ್ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ್ರಾಂಚೈಸಿಗಳ ಹಾಗೂ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯಲು ಯುವ ಆಟಗಾರರ ಜತೆಗೆ ಅನುಭವಿ ಆಟಗಾರರಿಗೆ ಉತ್ತಮ ಅವಕಾಶ ಎನಿಸಿದೆ. ರಿಟೇನ್ ಆಗದೆ ಹರಾಜಿಗೆ ತೆರಳುತ್ತಿರುವ ಶ್ರೇಯಸ್ ಅಯ್ಯರ್, ಆಯುಷ್ ಮಹಾತ್ರೆ (ಮುಂಬೈ), ಕೃನಾಲ್ ಪಾಂಡ್ಯ (ಬರೋಡ), ಮಯಾಂಕ್ ಅಗರ್ವಾಲ್, ಅಭಿನವ್ ಮನೋಹರ್, ಆರ್. ಸ್ಮರಣ್, ಹಾರ್ದಿಕ್ ರಾಜ್ (ಕರ್ನಾಟಕ), ಆಶುತೋಷ್ ಶರ್ಮ (ರೈಲ್ವೇಸ್) ಅವರಂಥ ಆಟಗಾರರಿಗೆ 4ನೇ ಸುತ್ತಿನ ಪಂದ್ಯಗಳು ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆ ಎನಿಸಿದೆ. ಇನ್ನು ಆರ್‌ಸಿಬಿ ತಂಡ ರಿಟೇನ್ ಮಾಡಿಕೊಂಡಿರುವ ಮಧ್ಯಪ್ರದೇಶದ ರಜತ್ ಪಾಟೀದಾರ್ ಹಿಂದಿನ ಪಂದ್ಯದಲ್ಲಿ ಕೇವಲ 68 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net