

ಮುಂಬೈ: ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಪಂದ್ಯದಿಂದ ಪಂದ್ಯಕ್ಕೆ ಹಿನ್ನಡೆ ಅನುಭವಿಸುತ್ತಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಆತಿಥೇಯ ಮುಂಬೈ ತಂಡವನ್ನು ಎದುರಿಸಲಿದೆ. ದೇಶೀಯ ಕ್ರಿಕೆಟ್ನ ಬಲಿಷ್ಠ ತಂಡಗಳಾಗಿರುವ ಮುಂಬೈ ಹಾಗೂ ಕರ್ನಾಟಕ ತಂಡಗಳ ನಡುವಿನ ಕಾದಾಟ ಕುತೂಹಲ ಮೂಡಿಸಿದೆ. ಬಾಂದ್ರ ಕುರ್ಲಾ ಕಾಂಪ್ಲೆಕ್ಸ್ನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಶುಕ್ರವಾರದಿಂದ ಪಂದ್ಯ ನಡೆಯಲಿದ್ದು, ಕರ್ನಾಟಕ ತಂಡ ಈ ಪಂದ್ಯದಲ್ಲಾದರೂ ರಣಜಿ ಇತಿಹಾಸದ 200ನೇ ಪಂದ್ಯ ಗೆಲುವು ಒಲಿಸಿಕೊಳ್ಳುವ ನಿರೀಕ್ಷೆ ಇದೆ.
ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಗೆದ್ದ ಬಳಿಕ, ಉತ್ತರ ಪ್ರದೇಶ ವಿರುದ್ಧ ಮುನ್ನಡೆಗೆ ಸಮಾಧಾನ ಪಟ್ಟಿದ್ದ ಕರ್ನಾಟಕ, ಮೈಸೂರಿನಲ್ಲಿ ಹಿಮಾಚಲ ಪ್ರದೇಶ ಎದುರು ಇನಿಂಗ್ಸ್ ಹಿನ್ನಡೆ ಕಂಡಿತ್ತು. ಸ್ಟಾರ್ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಸೇವೆ ಕಡೇ ಕ್ಷಣದಲ್ಲಿ ಕೈತಪ್ಪಿದ್ದು, ಬ್ಯಾಟಿಂಗ್ ವಿಭಾಗದ ಬಲ ಕುಗ್ಗಿಸಿದೆ. ಆರ್. ಸಮರ್ಥ್, ಡಿ. ನಿಶ್ಚಲ್ ಫಾಮ್ರ್ ಕೊರತೆಯೂ ತಂಡದ ಪಾಲಿಗೆ ಬಿಸಿ ತುಪ್ಪವಾಗಿದೆ. ನಾಯಕ ಕರುಣ್ ನಾಯರ್ ಫಾಮರ್್ಗೆ ಮರಳಿರುವುದು ಸಮಾಧಾನಕರ ವಿಷಯ. ಮಯಾಂಕ್ ಗೈರಲ್ಲಿ ಡಿ. ನಿಶ್ಚಲ್ ಜತೆಗೆ ಭರ್ಜರಿ ಫಾಮರ್್ನಲ್ಲಿರುವ ದೇವದತ್ ಪಡಿಕಲ್ ಮತ್ತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಅನುಭವಿ ವೇಗಿ ಅಭಿಮನ್ಯು ಮಿಥುನ್ ಜತೆಗೆ ರೋನಿತ್ ಮೋರೆ, ವಿ. ಕೌಶಿಕ್ ಬೌಲಿಂಗ್ ವಿಭಾಗದಲ್ಲಿ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.
ಮತ್ತೊಂದೆಡೆ, ತವರು ನೆಲದಲ್ಲೇ ರೈಲ್ವೇಸ್ ಎದುರು 10 ವಿಕೆಟ್ ಸೋಲು ಕಂಡಿರುವ 41 ಬಾರಿಯ ಚಾಂಪಿಯನ್ ಮುಂಬೈ ಗೆಲ್ಲಲೇಬೇಕೆಂಬ ಛಲದಲ್ಲಿದೆ. ಅಜಿಂಕ್ಯ ರಹಾನೆ, ಪೃಥ್ವಿ ಷಾರಂಥ ಸ್ಟಾರ್ ಬ್ಯಾಟ್ಸ್ಮನ್ಗಳ ಬಲ ತಂಡಕ್ಕಿರುವುದು ಪ್ಲಸ್ ಪಾಯಿಂಟ್. ಆದರೆ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರೂ ವೈಫಲ್ಯ ಕಂಡಿದ್ದರು. ಆದರೆ 63 ಟೆಸ್ಟ್ ಆಡಿರುವ ಅನುಭವಿ ರಹಾನೆ ಉಪಸ್ಥಿತಿ ಸೂರ್ಯಕುಮಾರ್ ಯಾದವ್ ಬಳಗಕ್ಕೆ ಲಾಭದಾಯಕವೆನಿಸಿದೆ. ಆರ್ಸಿಬಿ ಮಾಜಿ ಆಟಗಾರ ಸರ್ಫ್ರಾಜ್ ಖಾನ್ ಮುಂಬೈ ತಂಡಕ್ಕೆ ಮರಳಿದ್ದರೂ, ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಸ್ಪಷ್ಟತೆ ಇಲ್ಲ. ಬೌಲಿಂಗ್ ವಿಭಾಗದಲ್ಲಿ ಮುಂಬೈ ತಂಡ ಕರ್ನಾಟಕಕ್ಕಿಂತ ದುರ್ಬಲವಾಗಿ ಕಾಣಿಸುತ್ತಿದೆ. ತುಷಾರ್ ದೇಶಪಾಂಡೆ, ಶಮ್ಸ್ ಮುಲಾನಿ ಹೊರತಾಗಿ ಈಗಾಗಲೆ ದೇಶೀಯ ಕ್ರಿಕೆಟ್ನಲ್ಲಿ ಛಾಪು ಮೂಡಿಸಿರುವ ಬೌಲರ್ಗಳು ತಂಡದಲ್ಲಿಲ್ಲ.
ಪಂದ್ಯ ಆರಂಭ: ಬೆಳಗ್ಗೆ 9.30
10 ಹಾಲಿ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ 1 ಜಯ, 2 ಡ್ರಾದೊಂದಿಗೆ 10 ಅಂಕ ಗಳಿಸಿರುವ ಕರ್ನಾಟಕ ಎ-ಬಿ ಗುಂಪಿನ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, 2 ಪಂದ್ಯವನ್ನಷ್ಟೇ ಆಡಿರುವ ಮುಂಬೈ ತಂಡ 1ಜಯ, 1 ಸೋಲಿನೊಂದಿಗೆ 6 ಅಂಕ ಗಳಿಸಿ 12ನೇ ಸ್ಥಾನದಲ್ಲಿದೆ.
10 ವರ್ಷಗಳಿಂದ ಮುಂಬೈಗೆ ಸೋತಿಲ್ಲ
ರಣಜಿ ಟ್ರೋಫಿ ಇತಿಹಾಸ ಅವಲೋಕಿಸಿದಾಗ ಕರ್ನಾಟಕ ತಂಡ ಮುಂಬೈಗೆ ಮೇಲುಗೈ ಬಿಟ್ಟುಕೊಟ್ಟಿದೆ. ಆದರೆ ಕಳೆದ 10 ವರ್ಷಗಳಲ್ಲಿ ಕರ್ನಾಟಕ ತಂಡವೇ ಮುಂಬೈ ವಿರುದ್ಧ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗುತ್ತದೆ. 2010ರ ರಣಜಿ ಫೈನಲ್ನಲ್ಲಿ ಮುಂಬೈಗೆ ಕೇವಲ 6 ರನ್ಗಳಿಂದ ಸೋತ ಬಳಿಕ, 2013-14, 2014-15 ಮತ್ತು 2017-18ರ ಮುಖಾಮುಖಿಗಳಲ್ಲಿ ಗೆದ್ದ ಸಾಧನೆ ಕರ್ನಾಟಕ ತಂಡದ್ದಾಗಿದೆ. ಅದರಲ್ಲೂ 2017-18ರಲ್ಲಿ ನಾಗ್ಪುರದಲ್ಲಿ ನಡೆದ ಕ್ವಾರ್ಟರ್ಫೈನಲ್ನಲ್ಲಿ ಇನಿಂಗ್ಸ್ ಮತ್ತು 20 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿತ್ತು.
ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ಗೈರು
ಪಂದ್ಯದಲ್ಲಿ ಉಭಯ ತಂಡಗಳೂ ಸ್ಟಾರ್ ಆಟಗಾರರ ಗೈರಿನ ಹಿನ್ನಡೆಯನ್ನು ಹೊಂದಿವೆ. ಮುಂಬರುವ ಭಾರತ-ಶ್ರೀಲಂಕಾ ಟಿ20 ಸರಣಿಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಕೆಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಅಲಭ್ಯರಾಗಿದ್ದರೆ, ಮುಂಬೈಗೆ ರೋಹಿತ್ ಶರ್ಮ, ಶ್ರೇಯಸ್ ಅಯ್ಯರ್, ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ಅಲಭ್ಯರಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಭಾರತ ಎ ತಂಡದ ಪರ ಆಡಲಿರುವ ಆರಂಭಿಕ ಮಯಾಂಕ್ ಅಗರ್ವಾಲ್ಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ಇದರಿಂದಾಗಿ ಅವರೂ ಕರ್ನಾಟಕ ತಂಡಕ್ಕೆ ಅಲಭ್ಯರಾಗಿದ್ದಾರೆ. ಮಯಾಂಕ್ ಜನವರಿ 10ರಂದು ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್ಗೆ ಪ್ರಯಾಣಿಸಲಿದ್ದಾರೆ. ಆದರೆ, ಉದ್ದೀಪನ ಪ್ರಕರಣದ ನಿಷೇಧದಿಂದ ಇತ್ತೀಚೆಗೆ ವಾಪಸಾಗಿರುವ ಪೃಥ್ವಿ ಷಾ ಇದೇ ಭಾರತ ಎ ತಂಡದ ಸದಸ್ಯರಾಗಿದ್ದರೂ, ಅವರಿಗೆ ಮುಂಬೈ ಪರ ಕಣಕ್ಕಿಳಿಯಲು ಅವಕಾಶ ನೀಡಲಾಗಿದೆ. ಅಜಿಂಕ್ಯ ರಹಾನೆ ಭಾರತ ಎ ಪರ ಚತುರ್ದಿನ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಷ್ಟೇ ಆಡಲಿದ್ದಾರೆ.
ಸಂಭಾವ್ಯ ತಂಡಗಳು
ಕರ್ನಾಟಕ: ಡಿ. ನಿಶ್ಚಲ್, ದೇವದತ್ ಪಡಿಕಲ್, ಆರ್. ಸಮರ್ಥ್, ಕರುಣ್ ನಾಯರ್ (ನಾಯಕ), ಅಭಿಷೇಕ್ ರೆಡ್ಡಿ/ರೋಹನ್ ಕದಂ, ಶ್ರೇಯಸ್ ಗೋಪಾಲ್, ಬಿಆರ್. ಶರತ್ (ವಿ.ಕೀ) ಜೆ. ಸುಚಿತ್/ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ರೋನಿತ್ ಮೋರೆ, ವಿ. ಕೌಶಿಕ್/ಪ್ರತೀಕ್ ಜೈನ್.
ಮುಂಬೈ: ಪೃಥ್ವಿ ಷಾ, ಜಯ್ ಬಿಷ್ಟಾ, ಅಜಿಂಕ್ಯ ರಹಾನೆ, ಸಿದ್ಧೇಶ್ ಲಾಡ್, ಸೂರ್ಯಕುಮಾರ್ ಯಾದವ್ (ನಾಯಕ), ಆದಿತ್ಯ ತಾರೆ (ವಿ.ಕೀ), ಆಕಾಶ್ ಪಾರ್ಕರ್/ಶಶಾಂಕ್ ಅಟರ್ಡೆ, ಶಮ್ಸ್ ಮುಲಾನಿ, ಶುಭಂ ರಂಜನ್, ತುಷಾರ್ ದೇಶಪಾಂಡೆ, ದೀಪಕ್ ಶೆಟ್ಟಿ.
ಮಯಾಂಕ್ ಅಗರ್ವಾಲ್ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆದು ರಾಷ್ಟ್ರೀಯ ತಂಡದ ಆಟಗಾರರಾಗಿದ್ದಾರೆ. ಅವರ ಗೈರಿನಲ್ಲಿ ತಂಡದ ಇತರ ಆಟಗಾರರು ಅವಕಾಶವನ್ನು ಬಾಚಿಕೊಳ್ಳಬಹುದಾಗಿದೆ. ನಾಯಕ ಮತ್ತು ಬ್ಯಾಟ್ಸ್ ಮನ್ ಆಗಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವತ್ತ ಗಮನಹರಿಸಿರುವೆ. ಈ ವರ್ಷ ರಣಜಿ ಟ್ರೋಫಿ ಗೆಲ್ಲುವುದು ನಮ್ಮ ಮುಖ್ಯ ಗುರಿ. | ಕರುಣ್ ನಾಯರ್, ಕರ್ನಾಟಕ ತಂಡದ ನಾಯಕ