

ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್‌ೈನಲ್‌ಗೆ ನೇರಅರ್ಹತೆ ಪಡೆದುಕೊಂಡಿದೆ. ನಾಯಕ ಮಯಾಂಕ್ ಅಗರ್ವಾಲ್ (116* ರನ್, 119 ಎಸೆತ, 9 ಬೌಂಡರಿ, 4 ಸಿಕ್ಸರ್) ಸಿಡಿಸಿದ ಟೂರ್ನಿಯ 4ನೇ ಶತಕ ಹಾಗೂ ಉಪನಾಯಕ ಶ್ರೇಯಸ್ ಗೋಪಾಲ್ (24ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ಸಿ ಗುಂಪಿನ ತನ್ನ 7ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ನಾಗಾಲ್ಯಾಂಡ್ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮಯಾಂಕ್ ಪಡೆ ಆಡಿರುವ 7 ಪಂದ್ಯಗಳಲ್ಲಿ 6ಗೆಲುವು, 1 ಸೋಲಿನೊಂದಿಗೆ 24 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.
ಜಿಸಿಸಿ ಗ್ರೌಂಡ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ನಾಗಾಲ್ಯಾಂಡ್, ಚೇತನ್ ಬಿಸ್ಟ್ (77* ರನ್, 73 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಆರ್. ಜೋನಾಥನ್ (51 ರನ್, 73 ಎಸೆತ, 4 ಬೌಂಡರಿ, 1 ಸಿಕ್ಸರ್) ಜತೆಯಾಟದ ನಡುವೆಯೂ ಸ್ಪಿನ್ನರ್ ಶ್ರೇಯಸ್ ದಾಳಿಗೆ ತತ್ತರಿಸಿ 48.3 ಓವರ್‌ಗಳಲ್ಲಿ 206 ರನ್‌ಗಳಿಗೆ ದಿಢೀರ್ ಕುಸಿತ ಕಂಡು ಆಲೌಟ್ ಆಯಿತು. ಸಾಧಾರಣ ಮೊತ್ತದ ಚೇಸಿಂಗ್‌ನಲ್ಲಿ ಆರಂಭಿಕ ನಿಕಿನ್ ಜೋಸ್ (1) ವಿಕೆಟ್ ಬೇಗನೆ ಕಳೆದುಕೊಂಡ ಕರ್ನಾಟಕ ಆಘಾತ ಎದುರಿಸಿತು. ಆಗ ಜತೆಯಾದ ಮಯಾಂಕ್ ಹಾಗೂ ಅನೀಶ್ ಕೆವಿ (82* ರನ್, 95 ಎಸೆತ, 10 ಬೌಂಡರಿ) ಮುರಿಯದ ಎರಡನೇ ವಿಕೆಟ್‌ಗೆ 205 ಎಸೆತಗಳಲ್ಲಿ 198 ರನ್ ಕಲೆಹಾಕಿದರು. ಅಂತಿಮವಾಗಿ ಕರ್ನಾಟಕ 37.5 ಓವರ್‌ಗಳಲ್ಲಿ 1 ವಿಕೆಟ್‌ಗೆ 207 ರನ್‌ಗಳಿಸಿ ಗೆಲುವಿನ ಸಂಭ್ರಮ ಕಂಡಿತು.
4.ಮಯಾಂಕ್ ಅಗರ್ವಾಲ್ ಹಾಲಿ ಟೂರ್ನಿಯಲ್ಲಿ 4ನೇ ಸೆಂಚುರಿ ಇದಾಗಿದೆ. ಒಂದೇ ಆವೃತ್ತಿಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಸೆಂಚುರಿ ಸಿಡಿಸಿದ 7ನೇ ಸಾಧಕ. ಎನ್.ಜಗದೀಶನ್ (5), ವಿರಾಟ್ ಕೊಹ್ಲಿ (4), ಕರುಣ್ ನಾಯರ್, ಪೃಥ್ವಿ ಷಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ಹಿಂದಿನ ಸಾಧಕರು.
1.ಮಯಾಂಕ್ ಅಗರ್ವಾಲ್ (613 ರನ್) ಹಾಲಿ ಆವೃತ್ತಿಯಲ್ಲಿ ಇದುವರೆಗೆ ಗರಿಷ್ಠ ರನ್‌ಗಳಿಸಿದ ಪಟ್ಟಿಯಲ್ಲಿ ವಿದರ್ಭ ನಾಯಕ ಕರುಣ್ ನಾಯರ್ (542) ಅವರನ್ನು ಹಿಂದಿಕ್ಕಿ, ಅಗ್ರಸ್ಥಾನಕ್ಕೇರಿದರು.
ನಾಕೌಟ್ ಪಂದ್ಯಗಳ ವೇಳಾಪಟ್ಟಿ
ಪ್ರಿ ಕ್ವಾರ್ಟರ್‌ಫೈನಲ್ಸ್
ಯಾವಾಗ ಎದುರಾಳಿ
ಜ.9 ಹರಿಯಾಣ-ಬಂಗಾಳ
ರಾಜಸ್ಥಾನ-ತಮಿಳುನಾಡು
ಕ್ವಾರ್ಟರ್‌ಫೈನಲ್ಸ್
ಜ.11 ಕರ್ನಾಟಕ-ಬರೋಡ
ಮಹಾರಾಷ್ಟ್ರ -ಪಂಜಾಬ್
ಜ.12 ವಿದರ್ಭ- ರಾಜಸ್ಥಾನ/ತಮಿಳುನಾಡು
ಗುಜರಾತ್- ಹರಿಯಾಣ/ಬಂಗಾಳ
ಎಲ್ಲ ಪಂದ್ಯ ಆರಂಭ: ಬೆಳಗ್ಗೆ 9
ನೇರಪ್ರಸಾರ: ಜಿಯೋ ಸಿನಿಮಾ
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ಬರೋಡ
ಯಾವಾಗ: ಶನಿವಾರ
ಆರಂಭ: ಬೆಳಗ್ಗೆ 9
ನೇರಪ್ರಸಾರ: ಜಿಯೋ ಸಿನಿಮಾ.