ಈಶ ಗ್ರಾಮೋತ್ಸವಕ್ಕೆ ಕರ್ನಾಟಕ ತಂಡ, ಆದಿಯೋಗಿ ಕೇಂದ್ರದಲ್ಲಿ ಫೈನಲ್ ಪಂದ್ಯ

5-2.jpg
Published on

ಚಿಕ್ಕಬಳ್ಳಾಪುರ: ಭಾರತದಲ್ಲಿ ವಿವಿಧೆಡೆ ಯಶಸ್ವಿಯಾಗಿ ನಡೆಯುತ್ತಿರುವ ದೇಶದ ಅತಿ ದೊಡ್ಡ ಗ್ರಾಮೀಣ ಈಶ ಗ್ರಾಮೋತ್ಸವದಲ್ಲಿ 8100 ಕ್ಕೂ ಹೆಚ್ಚು ಗ್ರಾಮೀಣ ಕರ್ನಾಟಕದ ಆಟಗಾರರು ಭಾಗವಹಿಸಲಿದ್ದಾರೆ.
ಪ್ರಸಕ್ತ ಸಾಲಿನ 17 ನೇ ಆವೃತ್ತಿಯ ಕ್ರೀಡಾಕೂಟಕ್ಕೆ ಈಗಾಗಲೇ ಕರ್ನಾಟಕದಾದ್ಯಂತ 700ಕ್ಕೂ ಹೆಚ್ಚು ತಂಡಗಳು ಆಯ್ಕೆಯಾಗಿವೆ. ಇದರಲ್ಲಿ ೮೧೦೦ ಕ್ಕೂ ಹೆಚ್ಚು ಆಟಗಾರರು ಸೇರಿದ್ದಾರೆ. ಕಳೆದ 2024ರಲ್ಲಿ 5,000 ಕ್ಕೂ ಹೆಚ್ಚು ಆಟಗಾರರು ಉತ್ಸಾಹದಿಂದ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

"೧೯ ಕ್ಲಸ್ಟರ್‌ ಗಳಲ್ಲಿ ಸ್ಪರ್ಧೆ
ಈಶ ಗ್ರಾಮೋತ್ಸವ ಕರ್ನಾಟಕದ 18 ಜಿಲ್ಲೆಗಳಲ್ಲಿ 19 ಕ್ಲಸ್ಟರ್‌ಗಳಲ್ಲಿ ನಡೆಯುತ್ತಿದೆ. ಈ ಪೈಕಿ ೮ ಕ್ಲಸ್ಟರ್‌ಗಳಲ್ಲಿ ಥ್ರೋಬಾಲ್ ಪಂದ್ಯಾವಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಉಳಿದ ಕಡೆ ಪುರುಷರ ವಿಭಾಗದಲ್ಲಿ ವಾಲಿಬಾಲ್ ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಫೈನಲ್‌ನಲ್ಲಿ ಪ್ಯಾರಾ-ವಾಲಿಬಾಲ್‌ ಪಂದ್ಯ ನಡೆಯಲಿದ್ದು ಈಗಾಗಲೇ ರಾಜ್ಯದಲ್ಲಿ ಕ್ಲಸ್ಟರ್ ಪಂದ್ಯಗಳು (ಆ.೧೦ ರಿಂದ) ಆರಂಭವಾಗಿದ್ದು, ವಿಭಾಗೀಯ ಪಂದ್ಯಾವಳಿಗಳು ಆ.31ರಂದು ಉಡುಪಿ ಮತ್ತು ಸೆ.7ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ.

ದೇಶದಲ್ಲಿ ಗ್ರಾಮೀಣ ಆಟ
ದೇಶದಾದ್ಯಂತ ಈಶ ಗ್ರಾಮೋತ್ಸವವು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ 35,000 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಡೆಯುತ್ತಿವೆ. ಪ್ರಸಕ್ತ ಸಾಲಿನಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ 50,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದು, 6,000ಕ್ಕೂ ಹೆಚ್ಚು ತಂಡಗಳು ರಚನೆಯಾಗಿವೆ.
ಕ್ಲಸ್ಟರ್ ಹಂತ, ವಿಭಾಗೀಯ ಹಂತ ಮತ್ತು ಫೈನಲ್ ಸೇರಿದಂತೆ ಮೂರು ಹಂತಗಳಲ್ಲಿ ಗ್ರಾಮೋತ್ಸವವನ್ನು ಕೈಗೊಳ್ಳಲಾಗಿದೆ. ಸೆ.೨೧ ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಗ್ರಾಂಡ್ ಫೈನಲ್ ನಡೆಯಲಿದೆ.

*ಗ್ರಾಮೋತ್ಸವದ ಉದ್ದೇಶ
ಗ್ರಾಮೀಣ ಜನರು ವ್ಯಸನಗಳಿಂದ ಮುಕ್ತರಾಗಲು, ಸಮುದಾಯ ಜೀವನದಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಹೆಚ್ಚಿಸಿ, ಗ್ರಾಮೀಣ ಚೇತನವನ್ನು ಪುನರುಜ್ಜೀವನಗೊಳಿಸಲು ಸದ್ಗುರುಗಳು ಕಳೆದ 2004ರಲ್ಲಿ ಈಶ ಗ್ರಾಮೋತ್ಸವವನ್ನು ಪ್ರಾರಂಭಿಸಿದರು. ಇದರಲ್ಲಿ ವೃತ್ತಿಪರ ಕ್ರೀಡಾಪಟುಗಳನ್ನು ಹೊರತುಪಡಿಸಿದಂತೆ ರೈತರು, ಸ್ವಚ್ಛತಾ ಕಾರ್ಯಕರ್ತರು, ಮೀನುಗಾರರು, ದಿನಗೂಲಿ ಕೆಲಸಗಾರರು ಮತ್ತು ಗೃಹಿಣಿಯರು ಸೇರಿದಂತೆ ಗ್ರಾಮೀಣ ಭಾಗದವರು ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಈ ಕ್ರೀಡಾಕೂಟಕ್ಕೆ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ‘ನ್ಯಾಷನಲ್ ಸ್ಪೋರ್ಟ್ಸ್ ಪ್ರಮೋಷನ್ ಆರ್ಗನೈಸೇಷನ್ (NSPO)’ ಮಾನ್ಯತೆ ನೀಡಿದೆ. 2018ರಲ್ಲಿ ತಳಮಟ್ಟದಿಂದ ಕ್ರೀಡಾ ಪ್ರೋತ್ಸಾಹದಾಯಕ ಕೊಡುಗೆಗಾಗಿ ಪ್ರತಿಷ್ಠಿತ 'ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್' ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net