ಸೇಡಿನ ತವಕದಲ್ಲಿ ಕರ್ನಾಟಕ ತಂಡ

cricket-1 jan 10 2020
Published on

ರಾಜ್​ಕೋಟ್: ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಗೆಲುವಿನ ಲಯಕ್ಕೆ ಮರಳಿದ ವಿಶ್ವಾಸದಲ್ಲಿ ರುವ ಕರ್ನಾಟಕ ತಂಡ ಶನಿವಾರ ಆರಂಭ ವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ 5ನೇ ಸುತ್ತಿನ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಕಳೆದ ವರ್ಷ ಸೌರಾಷ್ಟ್ರ ವಿರುದ್ಧ ಆಡಿದ 2 ಪಂದ್ಯಗಳಲ್ಲೂ ಸೋಲನುಭವಿಸಿದ್ದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಸೇಡಿನ ತವಕದಲ್ಲಿದೆ. ಸ್ಟಾರ್ ಹಾಗೂ ಅನುಭವಿಗಳ ಅನುಪಸ್ಥಿತಿಯಲ್ಲಿ ಶ್ರೇಯಸ್ ಗೋಪಾಲ್ ಪಡೆ ಶ್ರೇಷ್ಠ ನಿರ್ವಹಣೆಯ ಗುರಿಯಲ್ಲಿದೆ.

ಮಾಧವ್​ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ನಡೆಯಲಿರುವ ಬಿ ಗುಂಪಿನ ಪಂದ್ಯ ಕರ್ನಾಟಕದ ಯುವ ಪಡೆಗೆ ಸವಾಲಾಗಿದೆ. ಸ್ಟಾರ್​ಗಳಾದ ಕೆಎಲ್ ರಾಹುಲ್, ಕಾಯಂ ನಾಯಕ ಮನೀಷ್ ಪಾಂಡೆ, ಟೆಸ್ಟ್ ತಂಡದ ಸದಸ್ಯ ಮಯಾಂಕ್ ಅಗರ್ವಾಲ್ ರಾಷ್ಟ್ರೀಯ ತಂಡದ ಸೇವೆಯಲ್ಲಿದ್ದರೆ, ಮದುವೆ ನಿಮಿತ್ತ ಕರುಣ್ ನಾಯರ್ ಗೈರಿನಲ್ಲಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ತಂಡ ಮುನ್ನಡೆಸುತ್ತಿದ್ದಾರೆ.

ಸಿದ್ದಾರ್ಥ್, ಪವನ್ ಬಲ: ಕರುಣ್ ನಾಯರ್, ಅಭಿಷೇಕ್ ರೆಡ್ಡಿ ತಂಡದಿಂದ ಹೊರಗಿರುವ ಹಿನ್ನೆಲೆಯಲ್ಲಿ, ಗಾಯದಿಂದ ಚೇತರಿಸಿಕೊಂಡಿರುವ ಕೆವಿ ಸಿದ್ದಾರ್ಥ್ ಹಾಗೂ ಆಲ್ರೌಂಡರ್ ಪವನ್ ದೇಶಪಾಂಡೆ ತಂಡಕ್ಕೆ ವಾಪಸಾಗಿದ್ದಾರೆ. ತಮಿಳುನಾಡು ವಿರುದ್ಧ ಆಡಿದ ಬಳಿಕ ಗಾಯಗೊಂಡಿದ್ದ ಪವನ್ 3 ಪಂದ್ಯ ತಪ್ಪಿಸಿಕೊಂಡಿದ್ದರು. ಉಳಿದಂತೆ ಮುಂಬೈ ವಿರುದ್ಧ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ವೇಗಿಗಳಾದ ಮಿಥುನ್, ರೋನಿತ್ ಮೋರೆ, ಪ್ರತೀಕ್ ಜೈನ್, ವಿ.ಕೌಶಿಕ್ ಮುಂಬೈ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವೇಗದ ವಿಭಾಗಕ್ಕೆ ಒತ್ತು ನೀಡಿದರೆ ಮತ್ತೆ ನಾಲ್ವರು ಕಣಕ್ಕಿಳಿಯಲಿದ್ದಾರೆ. ಮತ್ತೊಂದೆಡೆ, ಆರಂಭಿಕ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿದ್ದ ಸೌರಾಷ್ಟ್ರ, ಹಿಂದಿನ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಇನಿಂಗ್ಸ್ ಹಾಗೂ 72 ರನ್ ಸೋಲು ಕಂಡಿತ್ತು. ರಾಷ್ಟ್ರೀಯ ಟೆಸ್ಟ್ ತಂಡದ ಸದಸ್ಯ ಚೇತೇಶ್ವರ ಪೂಜಾರ ಸೇವೆ ಕಳೆದುಕೊಂಡಿರುವ ಆತಿಥೇಯ ತಂಡ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ.

ಅಂಕಿ ಅಂಶ: ಚನ್ನಗಿರಿ ಕೇಶವಮೂರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net