ರಣಜಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಶ್ರೇಯಸ್​ ವಾಪಸ್​, ಮೊಹ್ಸಿನ್​ ಹೊಸಮುಖ; ಸ್ಪಿನ್​ ವಿಭಾಗಕ್ಕೆ ಬಲ!

web ranji
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮುಂಬರುವ 90ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಮೊದಲ 2 ಪಂದ್ಯಗಳಿಗೆ 8 ಬಾರಿಯ ಚಾಂಪಿಯನ್​ ಕರ್ನಾಟಕ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಮಯಾಂಕ್​ ಅಗರ್ವಾಲ್​ ಸಾರಥ್ಯದ 16 ಆಟಗಾರರ ತಂಡದಲ್ಲಿ ಯುವ ಸ್ಪಿನ್ನರ್​ ಮೊಹ್ಸಿನ್​ ಖಾನ್​ಗೆ ಅವಕಾಶ ಲಭಿಸಿದೆ. ಆಲ್ರೌಂಡರ್​ ಶ್ರೇಯಸ್​ ಗೋಪಾಲ್​ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದರೆ, ವೇಗಿ ವಿದ್ವತ್​ ಕಾವೇರಪ್ಪ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.

ಕರ್ನಾಟಕ ತಂಡ ಅಕ್ಟೋಬರ್​ 11ರಿಂದ 14ರವರೆಗೆ ಇಂದೋರ್​ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಎದುರಿಸಲಿದ್ದರೆ, ಅಕ್ಟೋಬರ್​ 18ರಿಂದ 21ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಕೇರಳ ವಿರುದ್ಧ ಆಡಲಿದೆ.

ಕಳೆದ ವರ್ಷ ಯುವ ಬ್ಯಾಟರ್​ ನಿಕಿನ್​ ಜೋಸ್​ ತಂಡದ ಉಪನಾಯಕರಾಗಿದ್ದರೆ, ಈ ಬಾರಿ ಮಾಜಿ ನಾಯಕ ಮನೀಷ್​ ಪಾಂಡೆ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಮಯಾಂಕ್​, ಮನೀಷ್​, ಪಡಿಕ್ಕಲ್​, ನಿಕಿನ್​ ಜತೆಗೆ ಸ್ಮರಣ್​, ಕಿಶನ್​ ಬಿದರೆ ತಂಡದ ತಜ್ಞ ಬ್ಯಾಟರ್​ಗಳಾಗಿದ್ದರೆ, ಸುಜಯ್​ ಸಾತೇರಿ ಮತ್ತು ಅನುಭವಿ ಲವನೀತ್​ ಸಿಸೋಡಿಯಾ ವಿಕೆಟ್​ ಕೀಪರ್​ಗಳಾಗಿದ್ದಾರೆ.

ರಾಜ್ಯದ 36 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದ ಅಭಿನವ್​ ಮನೋಹರ್​, ಶುಭಾಂಗ್​ ಹೆಗ್ಡೆ, ಅನೀಶ್​ ಕೆವಿ, ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್​, ಚೇತನ್​ ಎಲ್​ಆರ್​ ಪ್ರಧಾನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಕರ್ನಾಟಕ ತಂಡ: ಮಯಾಂಕ್​ ಅಗರ್ವಾಲ್​ (ನಾಯಕ), ಮನೀಷ್​ ಪಾಂಡೆ (ಉಪನಾಯಕ), ನಿಕಿನ್​ ಜೋಸ್​, ದೇವದತ್​ ಪಡಿಕ್ಕಲ್​, ಸ್ಮರಣ್​ ಆರ್​, ಶ್ರೇಯಸ್​ ಗೋಪಾಲ್​, ಸುಜಯ್​ ಸಾತೆರಿ (ವಿ.ಕೀ), ಹಾರ್ದಿಕ್​ ರಾಜ್​, ವೈಶಾಕ್​ ವಿಜಯ್​ಕುಮಾರ್​, ಪ್ರಸಿದ್ಧ ಕೃಷ್ಣ, ವಿ. ಕೌಶಿಕ್​, ಲವನೀತ್​ ಸಿಸೋಡಿಯಾ (ವಿ.ಕೀ), ಮೊಹ್ಸಿನ್​ ಖಾನ್​, ವಿದ್ಯಾಧರ್​ ಪಾಟೀಲ್​, ಕಿಶನ್​ ಎಸ್​. ಬಿದರೆ, ಅಭಿಲಾಷ್​ ಶೆಟ್ಟಿ; ಕೋಚ್​: ಯೆರೆಗೌಡ ಕೆ, ಬೌಲಿಂಗ್​ ಕೋಚ್​: ಮನ್ಸೂರ್​ ಅಲಿ ಖಾನ್​, ಫೀಲ್ಡಿಂಗ್​ ಕೋಚ್​: ಶಬರೀಶ್​ ಪಿ. ಮೋಹನ್​, ಮ್ಯಾನೇಜರ್​: ಎ. ರಮೇಶ್​ ರಾವ್​, ಫಿಸಿಯೋ: ಜಾಬ ಪ್ರಭು ಎ, ಕಂಡೀಷನಿಂಗ್​ ಕೋಚ್​: ಕಿರಣ್​ ಎ.

ಸ್ಪಿನ್​ ವಿಭಾಗಕ್ಕೆ ಬಲ

ಕಳೆದ ಋತುವಿನಲ್ಲಿ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯಲ್ಲಿ 30 ವಿಕೆಟ್​ ಕಬಳಿಸುವ ಮೂಲಕ ಕರ್ನಾಟಕ ತಂಡದ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ 20 ವರ್ಷದ ಆಫ್​-ಸ್ಪಿನ್ನರ್​ ಮೊಹ್ಸಿನ್​ ಖಾನ್​ ಈ ಬಾರಿ ಸೀನಿಯರ್​ ತಂಡಕ್ಕೆ ಪ್ರವೇಶ ಪಡೆದಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೇರಳಕ್ಕೆ ವಲಸೆ ಹೋಗಿದ್ದ 31 ವರ್ಷದ ಶ್ರೇಯಸ್​ ಗೋಪಾಲ್​ ಈ ಬಾರಿ ಮರಳಿರುವುದರಿಂದ ರಾಜ್ಯ ತಂಡದ ಸ್ಪಿನ್​ ಬೌಲಿಂಗ್​ ವಿಭಾಗ ಮತ್ತೆ ಬಲ ಪಡೆದುಕೊಂಡಿದೆ. ಕಳೆದ ಆವೃತ್ತಿಯಲ್ಲಿ ರಾಜ್ಯ ತಂಡಕ್ಕೆ ಸ್ಪಿನ್ನರ್​ಗಳ ವೈಫಲ್ಯ ತೀವ್ರ ಹಿನ್ನಡೆ ತಂದಿತ್ತು. ಎಡಗೈ ಸ್ಪಿನ್​ ದಾಳಿ ನಡೆಸುವ 18 ವರ್ಷದ ಆಲ್ರೌಂಡರ್​ ಹಾರ್ದಿಕ್​ ರಾಜ್ಯ ತಂಡದ 3ನೇ ಸ್ಪಿನ್ನರ್​ ಆಗಿದ್ದಾರೆ. ಜತೆ ಐವರು ವೇಗಿಗಳು ತಂಡದಲ್ಲಿದ್ದಾರೆ. ಅವರೆಂದರೆ ಅನುಭವಿ ಪ್ರಸಿದ್ಧ ಕೃಷ್ಣ, ವೈಶಾಕ್​, ವಿ. ಕೌಶಿಕ್​, ಎಡಗೈ ವೇಗಿ ಅಭಿಲಾಷ್​ ಶೆಟ್ಟಿ ಮತ್ತು ಆಲ್ರೌಂಡರ್​ ವಿದ್ಯಾಧರ್​ ಪಾಟೀಲ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net