ಮುಂಬೈಗೆ ಕರ್ನಾಟಕ ಸ್ಪೀಡ್​ಬ್ರೇಕ್

cricket jan 03 2020
Published on

ಮುಂಬೈ: ವೇಗದ ಬೌಲಿಂಗ್ ವಿಭಾಗದ ಮಾರಕ ದಾಳಿಯ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡಕ್ಕೆ ಕಡಿವಾಣ ಹಾಕಿದೆ. ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿರುವ ಕರುಣ್ ನಾಯರ್ ಪಡೆ ಮೊದಲ ದಿನವೇ ಇನಿಂಗ್ಸ್ ಮುನ್ನಡೆ ಸಾಧಿಸುವ ವಿಶ್ವಾಸ ಗಳಿಸಿಕೊಂಡಿದೆ.

ಬಾಂದ್ರಾ ಕುರ್ಲಾದಲ್ಲಿರುವ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ, ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ಕರುಣ್ ನಾಯರ್ ನಿರ್ಧಾರವನ್ನು ಕರ್ನಾಟಕದ ವೇಗಿಗಳು ಸಮರ್ಥಿಸಿಕೊಂಡರು. ವಿ.ಕೌಶಿಕ್ (45ಕ್ಕೆ 3), ಅಭಿಮನ್ಯು ಮಿಥುನ್ (48ಕ್ಕೆ 2), ರೋನಿತ್ ಮೋರೆ (47ಕ್ಕೆ 2) ಹಾಗೂ ಪ್ರತೀಕ್ ಜೈನ್ (20ಕ್ಕೆ 2) ವೇಗದ ದಾಳಿಗೆ ನಲುಗಿದ 41 ಬಾರಿಯ ಚಾಂಪಿಯನ್ ಮುಂಬೈ ತಂಡ, ನಾಯಕ ಸೂರ್ಯಕುಮಾರ್ ಯಾದವ್ (77 ರನ್, 94 ಎಸೆತ, 10 ಬೌಂಡರಿ, 2 ಸಿಕ್ಸರ್) ಹೋರಾಟದ ನಡುವೆಯೂ 194 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕರ್ನಾಟಕ ತಂಡ ಉತ್ತಮ ಆರಂಭದ ನಡುವೆಯೂ ದಿನದ ಕೊನೆಯಲ್ಲಿ ದಿಢೀರ್ ಆಘಾತ ಎದುರಿಸಿ 3 ವಿಕೆಟ್​ಗೆ 79 ರನ್​ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 115 ರನ್ ಗಳಿಸಬೇಕಿದೆ. -ಏಜೆನ್ಸೀಸ್

ರಾಜ್ಯದಿಂದ ಸಮರ್ಥ ಆರಂಭ

ಕರ್ನಾಟಕಕ್ಕೆ ಆರ್. ಸಮರ್ಥ್ (40*ರನ್, 76 ಎಸೆತ, 6 ಬೌಂಡರಿ) ಹಾಗೂ ದೇದವತ್ ಪಡಿಕಲ್ (32 ರನ್, 56 ಎಸೆತ, 5 ಬೌಂಡರಿ) ಜೋಡಿ ಉತ್ತಮ ಆರಂಭ ನೀಡಿತು. ಸತತ ವೈಫಲ್ಯದಿಂದಾಗಿ ತಂಡದಿಂದ ಹೊರಬಿದ್ದರೂ, ಮಯಾಂಕ್ ಅಗರ್ವಾಲ್ ಅಲಭ್ಯತೆಯಿಂದ 11ರ ಬಳಗ ಕೂಡಿಕೊಂಡ ಸಮರ್ಥ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಂಡರು. ಈ ಜೋಡಿ ಮೊದಲ ವಿಕೆಟ್​ಗೆ 68 ರನ್ ಪೇರಿಸಿದ್ದ ವೇಳೆ ಶಮ್್ಸ ಮುಲಾನಿ (13ಕ್ಕೆ 2) ಆಘಾತ ನೀಡಿದರು. ಪಡಿಕಲ್ ನಿರ್ಗಮಿಸಿದ 2 ಎಸೆತಗಳಲ್ಲೇ ಅಭಿಷೇಕ್ ರೆಡ್ಡಿ ಖಾತೆ ತೆರೆಯದೆ ಔಟಾದರು. ಬಳಿಕ ಬಂದ ರೋಹನ್ ಕದಂ (4) ಬೌಂಡರಿಯೊಂದಿಗೆ ಪದಾರ್ಪಣೆ ಇನಿಂಗ್ಸ್ ಆರಂಭಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶಶಾಂಕ್ ಎಸೆತದಲ್ಲಿ ಸರ್ಫ್ರಾಜ್ ಖಾನ್ ಕ್ಯಾಚ್ ನೀಡಿದರು. ಇದರಿಂದ ಕರ್ನಾಟಕ 9 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು. 4 ಎಸೆತ ಎದುರಿಸಿ ಖಾತೆ ತೆರೆಯದ ಕರುಣ್ ನಾಯರ್ ಜತೆಗೆ ಸಮರ್ಥ್ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಂದ ಬೆಳಕಿನಿಂದಾಗಿ ನಿಗದಿತ ಓವರ್ ಮುಕ್ತಾಯಕ್ಕೂ ಮುನ್ನವೇ ದಿನದಾಟ ಕೊನೆಗೊಳಿಸಲಾಯಿತು.

ವೇಗಿಗಳ ಅಬ್ಬರಕ್ಕೆ ಮಂಕಾದ ಸ್ಟಾರ್ಸ್

ಕಳೆದ ಪಂದ್ಯದಲ್ಲಿ ಹಿ. ಪ್ರದೇಶ ಎದುರು ಗಮನಾರ್ಹ ನಿರ್ವಹಣೆ ತೋರಿದ್ದ ವಿ. ಕೌಶಿಕ್ ಮತ್ತೊಮ್ಮೆ ಕರ್ನಾಟಕಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟರು. ಇನಿಂಗ್ಸ್ ನ 2ನೇ ಓವರ್​ನಲ್ಲೇ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಆದಿತ್ಯ ತಾರೆ (0), ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ ಬಿಆರ್ ಶರತ್​ಗೆ ಕ್ಯಾಚ್ ನೀಡಿದರು. ಬಳಿಕ ಬಂದ ಟೆಸ್ಟ್ ತಂಡದ ಸದಸ್ಯ ಅಜಿಂಕ್ಯ ರಹಾನೆ (7), ಸಿದ್ದೇಶ್ ಲಾಡ್​ಗೆ (4) ರೋನಿತ್ ಮೋರೆ ಪೆವಿಲಿಯನ್ ದಾರಿ ತೋರಿಸಿದರು. ಕೇವಲ 34 ರನ್​ಗಳಿಗೆ ಮುಂಬೈ 3 ವಿಕೆಟ್ ಕಳೆದುಕೊಂಡಿತು. ಒಂದೆಡೆ ಇನಿಂಗ್ಸ್ ಕಟ್ಟಲು ಯತ್ನಿಸಿದ ಪೃಥ್ವಿ ಷಾ (29) ಮಿಥುನ್ ಎಸೆತದಲ್ಲಿ ಬೌಲ್ಡ್ ಆದರೆ, ಸರ್ಫ್ರಾಜ್ ಖಾನ್ (8) ಹಾಗೂ ಶಮ್್ಸ ಮುಲಾನಿಗೆ (0) ಪ್ರತೀಕ್ ಜೈನ್ ತಡೆಯಾದರು. ಬೆಳಗಿನ ಅವಧಿಯಲ್ಲಿ ರಾಜ್ಯದ ವೇಗಿಗಳ ಅಬ್ಬರಕ್ಕೆ ನಲುಗಿದ ಮುಂಬೈ ಭೋಜನ ವಿರಾಮಕ್ಕೂ ಮೊದಲೇ 86 ರನ್​ಗೆ 6 ವಿಕೆಟ್ ಕಳೆದುಕೊಂಡಿತು.

ತಲಾ 3 ಬದಲಾವಣೆ

ಪಂದ್ಯಕ್ಕೆ ಕರ್ನಾಟಕ ತಂಡ 3 ಬದಲಾವಣೆ ಮಾಡಿಕೊಂಡಿತು. ನ್ಯೂಜಿಲೆಂಡ್ ಪ್ರವಾಸಕ್ಕೆ ಅಣಿಯಾಗಲು ಬಿಸಿಸಿಐ ವಿಶ್ರಾಂತಿ ಸೂಚಿಸಿರುವ ಹಿನ್ನೆಲೆಯಲ್ಲಿ ಮಯಾಂಕ್ ಅಗರ್ವಾಲ್, ಫಾಮ್ರ್ ಕೊರತೆ ಎದುರಿಸುತ್ತಿರುವ ಡೇಗಾ ನಿಶ್ಚಲ್, ಸ್ಪಿನ್ನರ್ ಜೆ.ಸುಚಿತ್ ಬದಲಿಗೆ ಅಭಿಷೇಕ್ ರೆಡ್ಡಿ, ರೋನಿತ್ ಮೋರೆ ಹಾಗೂ ಎಡಗೈ ಬ್ಯಾಟ್ಸ್​ಮನ್ ರೋಹನ್ ಕದಂ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು. ಮುಂಬೈ ತಂಡವೂ 3 ಬದಲಾವಣೆ ಮಾಡಿಕೊಂಡಿತು.

ಪೃಥ್ವಿ ಷಾಗೆ ಭುಜದ ನೋವು

ಫೀಲ್ಡಿಂಗ್ ಮಾಡುವ ವೇಳೆ ಪೃಥ್ವಿ ಷಾ ಭುಜದ ನೋವಿಗೆ ತುತ್ತಾಗಿದ್ದಾರೆ. ಓವರ್ ಥ್ರೋ ಹಿಡಿಯಲು ಹೋಗಿ ಡೈ ಬಿದ್ದ ಷಾ ಭುಜದ ನೋವು ಅನುಭವಿಸಿದರು. ತಕ್ಷಣವೇ ಅವರನ್ನು ಮೈದಾನದಿಂದ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.

ಆರಂಭಗೊಳ್ಳದ 7 ಪಂದ್ಯಗಳು

ಮಳೆ-ಮಂದ ಬೆಳಕಿನ ಕಾರಣದಿಂದ 7 ಪಂದ್ಯಗಳ ಮೊದಲ ದಿನದಾಟ ನಡೆಯಲಿಲ್ಲ. ಬಂಗಾಳ-ಗುಜರಾತ್ (ಕೋಲ್ಕತ), ಉ. ಪ್ರದೇಶ- ಕಾನ್ಪುರ (ಕಾನ್ಪುರ), ತ್ರಿಪುರ-ಒಡಿಶಾ (ಅಗರ್ತಲಾ), ಮೇಘಾಲಯ - ಪುದುಚೇರಿ (ಮಂಗಾಲ್ದಾಯಿ), ನಾಗಾಲ್ಯಾಂಡ್-ಚಂಢೀಗಢ (ಸೊವಿಮಾ), ಛತ್ತೀಸ್​ಗಢ - ಹರಿಯಾಣ (ರಾಯ್ಪುರ), ಸಿಕ್ಕಿಂ-ಅ. ಪ್ರದೇಶ (ಭುವನೇಶ್ವರ) ಪಂದ್ಯಗಳು ಒಂದೂ ಎಸೆತ ಕಂಡಿಲ್ಲ.

ಸೂರ್ಯಕುಮಾರ್ ನೆರವು

ರಾಜ್ಯದ ವೇಗಿಗಳ ದಾಳಿಗೆ ತತ್ತರಿಸಿ ಮುಂಬೈ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ, ಮತ್ತೊಂದೆಡೆ ಎದೆಗುಂದದ ನಾಯಕ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹಿಗ್ಗಿಸಿದರು. ಸೂರ್ಯಕುಮಾರ್ ಹಾಗೂ ಬಾಲಂಗೋಚಿ ಶಶಾಂಕ್ (35 ರನ್, 51 ಎಸೆತ, 6 ಬೌಂಡರಿ) ಜೋಡಿ 7ನೇ ವಿಕೆಟ್​ಗೆ ಉಪಯುಕ್ತ 88 ರನ್ ಪೇರಿಸಿತು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದ ಮುಂಬೈ ತಂಡವನ್ನು ಈ ಜೋಡಿ ಪಾರು ಮಾಡಿತು. ಕೊನೆಗೆ ಈ ಜೋಡಿಯನ್ನು ಕೌಶಿಕ್ ಬೇರ್ಪಡಿಸಿದರು. ಇದಾದ ಕೆಲಹೊತ್ತಿನಲ್ಲೇ ಸೂರ್ಯಕುಮಾರ್ ಕೂಡ ಮಿಥುನ್​ಗೆ ವಿಕೆಟ್ ನೀಡಿದರು. ತುಷಾರ್ ದೇಶಪಾಂಡೆ (10) ಹಾಗೂ ದೀಪಕ್ ಶೆಟ್ಟಿ (8) ಕಡೇ ಹಂತದಲ್ಲಿ ಹೋರಾಡಿದ ಪರಿಣಾಮ ಮುಂಬೈ ಮೊತ್ತ 190ರ ಗಡಿ ದಾಟಿತು.

ಮುಂಬೈ ಪ್ರಥಮ ಇನಿಂಗ್ಸ್:

55.5 ಓವರ್​ಗಳಲ್ಲಿ 194

ಪೃಥ್ವಿ ಷಾ ಬಿ ಅಭಿಮನ್ಯು ಮಿಥುನ್ 29

ಆದಿತ್ಯ ತಾರೆ ಸಿ ಶರತ್ ಬಿ ವಿ. ಕೌಶಿಕ್ 0

ಅಜಿಂಕ್ಯ ರಹಾನೆ ಸಿ ಶರತ್ ಬಿ ರೋನಿತ್ 7

ಸಿದ್ಧೇಶ್ ಲಾಡ್ ಬಿ ರೋನಿತ್ ಮೋರೆ 4

ಸೂರ್ಯಕುಮಾರ್ ಸಿ ಶರತ್ ಬಿ ಮಿಥುನ್ 77

ಸರ್ಫ್ರಾಜ್ ಖಾನ್ ಸಿ ಅಭಿಷೇಕ್ ಬಿ ಪ್ರತೀಕ್ 8

ಮುಲಾನಿ ಎಲ್​ಬಿಡಬ್ಲ್ಯು ಬಿ ಪ್ರತೀಕ್ ಜೈನ್ 0

ಶಶಾಂಕ್ ಸಿ ಅಭಿಷೇಕ್ ಬಿ ವಿ. ಕೌಶಿಕ್ 35

ತುಷಾರ್ ದೇಶಪಾಂಡೆ ಸಿ ಶರತ್ ಬಿ ವಿ. ಕೌಶಿಕ್ 10

ದೀಪಕ್ ಶೆಟ್ಟಿ ಬಿ ಶ್ರೇಯಸ್ ಗೋಪಾಲ್ 8

ರಾಯ್ಸ್ಟನ್ ಡಯಾಸ್ ಔಟಾಗದೆ 8

ಇತರ: 8. ವಿಕೆಟ್ ಪತನ: 1-4, 2-30, 3-34, 4-46, 5-59, 6-60, 7-148, 8-167 9-177. ಬೌಲಿಂಗ್: ಮಿಥುನ್ 16-5-48-2, ವಿ. ಕೌಶಿಕ್ 16-4-45-3, ರೋನಿತ್ ಮೋರೆ 9-1-47-2, ಪ್ರತೀಕ್ ಜೈನ್ 8-2-20-2, ಶ್ರೇಯಸ್ ಗೋಪಾಲ್ 3.5-1-24-1, ಕರುಣ್ ನಾಯರ್ 3-0-6-0.

ಕರ್ನಾಟಕ ಪ್ರಥಮ ಇನಿಂಗ್ಸ್:

24 ಓವರ್​ಗಳಲ್ಲಿ 3 ವಿಕೆಟ್​ಗೆ 79

ಆರ್. ಸಮರ್ಥ್ ಬ್ಯಾಟಿಂಗ್ 40

ದೇವದತ್ ಪಡಿಕಲ್ ಎಲ್​ಬಿಡಬ್ಲ್ಯು ಬಿ ಮುಲಾನಿ 32

ಅಭಿಷೇಕ್ ರೆಡ್ಡಿ ಸಿ ಸರ್ಫ್ರಾಜ್ ಬಿ ಮುಲಾನಿ 0

ರೋಹನ್ ಕದಂ ಸಿ ಸರ್ಫ್ರಾಜ್ ಬಿ ಶಶಾಂಕ್ 4

ಕರುಣ್ ನಾಯರ್ ಬ್ಯಾಟಿಂಗ್ 0

ಇತರ: 3 . ವಿಕೆಟ್ ಪತನ: 1-68, 2-68, 3-77. ಬೌಲಿಂಗ್: ತುಷಾರ್ ದೇಶಪಾಂಡೆ 5-1-22-0, ದೀಪಕ್ ಶೆಟ್ಟಿ 5-0-24-0, ರಾಯ್ಸ್ಟನ್ 2-1-5-0, ಶಶಾಂಕ್ 6-1-14-1, ಮುಲಾನಿ 6-1-13-2.

ಮಹಾರಾಷ್ಟ್ರ 44ಕ್ಕೆ ಆಲೌಟ್

ಮಹಾರಾಷ್ಟ್ರ ತಂಡ ದೆಹಲಿಯಲ್ಲಿ ನಡೆದ ಎಲೈಟ್ ಸಿ ಗುಂಪಿನ ಪಂದ್ಯದಲ್ಲಿ ಸರ್ವೀಸಸ್ ಎದುರು ಕೇವಲ 44 ರನ್​ಗಳಿಗೆ ಸರ್ವಪತನ ಕಂಡಿತು. ಇದು ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡ ದಾಖಲಿಸಿದ 2ನೇ ಕಡಿಮೆ ಮೊತ್ತವಾಗಿದೆ. 1941-42ರಲ್ಲಿ ನವಾನಗರದ ಎದುರು 39 ರನ್​ಗಳಿಗೆ ಔಟಾಗಿದ್ದು, ಕಡಿಮೆ ಮೊತ್ತವಾಗಿದೆ. ಗೋವಾ ವಿರುದ್ಧ ಮಣಿಪುರ ತಂಡ ಒಂದು ಹಂತದಲ್ಲಿ ಕೇವಲ 9 ರನ್​ಗೆ 6 ವಿಕೆಟ್ ಕಳೆದುಕೊಂಡಿತು. ಬಳಿಕ ಬಶಿದ್ (43) ಹೋರಾಟದಿಂದ 106 ರನ್ ಗಳಿಸುವಲ್ಲಿ ಸಫಲವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net