

ಗುವಾಹಟಿ: ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ 15 ಆವೃತ್ತಿಗಳ ನಂತರ ರಣಜಿ ಟ್ರೋಫಿ ರೆಡ್ಬಾಲ್ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಇನಿಂಗ್ಸ್ ಗೆಲುವಿನ ಸಾಧನೆ ಮಾಡಿದೆ. ಸತತ ಎರಡನೇ ಪಂದ್ಯದಲ್ಲಿ ಆಲ್ರೌಂಡರ್ ಮನ್ವಂತ್ ಕುಮಾರ್ (100* ರನ್, 108 ಎಸೆತ, 8 ಬೌಂಡರಿ, 5 ಸಿಕ್ಸರ್) ಭರ್ಜರಿ ಶತಕದಾಟ ಜತೆಗೆ ನಾಯಕ ಶ್ರೇಯಸ್ ಗೋಪಾಲ್ (34ಕ್ಕೆ 4) ಹಾಗೂ ಶಿಖರ್ ಶೆಟ್ಟಿ (33ಕ್ಕೆ 3) ಸ್ಪಿನ್ ಮೋಡಿಯ ನೆರವಿನಿಂದ ಹಾಲಿ ರನ್ನರ್ ಅಪ್ ಕರ್ನಾಟಕ ತಂಡ 92ನೇ ಆವೃತ್ತಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಸ್ಸಾಂ ಎದುರು ಇನಿಂಗ್ಸ್ ಹಾಗೂ 314 ರನ್ ಬೃಹತ್ ಅಂತರದ ಜಯಭೇರಿ ಕಂಡಿದೆ. ಇದರೊಂದಿಗೆ ಕರ್ನಾಟಕ (16 ಅಂಕ) ಸತತ 2ನೇ ಪಂದ್ಯದಲ್ಲಿ ಬೋನಸ್ ಸಹಿತ 7 ಅಂಕ ಸಂಪಾದಿಸಿದ್ದು, ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.