ಪೊರೆಲ್ ದಾಳಿಗೆ ಕರ್ನಾಟಕ ಧೂಳೀಪಟ

Ranaji 1 Mrch 20
Published on

ಕೋಲ್ಕತ: ವಿಶ್ವ ದರ್ಜೆ ಬ್ಯಾಟ್ಸ್​ಮನ್​ಗಳು ಬತ್ತಳಿಕೆಯಲ್ಲಿದ್ದರೂ ಕನಿಷ್ಠ ಪೈಪೋಟಿ ನೀಡಲು ವಿಫಲವಾದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಬಂಗಾಳ ಎದುರು ಭಾರಿ ಹಿನ್ನಡೆ ಅನುಭವಿಸಿತು. ಬಂಗಾಳ ತಂಡದ ವೇಗಿಗಳಾದ ಇಶಾನ್ ಪೊರೆಲ್ (39ಕ್ಕೆ 5) ಹಾಗೂ ಆಕಾಶ್ ದೀಪ್ (30ಕ್ಕೆ 3) ಮಾರಕ ದಾಳಿಗೆ ನಲುಗಿದ 8 ಬಾರಿಯ ಚಾಂಪಿಯನ್ ತಂಡ 2ನೇ ದಿನದಾಟದಲ್ಲೇ ಒತ್ತಡಕ್ಕೆ ಸಿಲುಕಿದೆ. ಪಿಚ್​ನ ಲಾಭಗಿಟ್ಟಿಸಿಕೊಂಡ ಉಭಯ ತಂಡಗಳ ಬೌಲರ್​ಗಳು ದಿನದಾಟದಲ್ಲಿ 15 ವಿಕೆಟ್ ಹಂಚಿಕೊಂಡರು.

ಈಡನ್ ಗಾರ್ಡನ್ ನಡೆಯುತ್ತಿರುವ ಪಂದ್ಯದ 2ನೇ ದಿನದಾಟ ವೀಕ್ಷಿಸಲು ನೆರೆದಿದ್ದ ಸುಮಾರು 4 ಸಾವಿರ ಪ್ರೇಕ್ಷಕರ ಎದುರು ಆತಿಥೇಯ ಬೌಲರ್​ಗಳು ಮಿಂಚುತ್ತಿದ್ದರೆ, ಪ್ರವಾಸಿ ಕರ್ನಾಟಕದ ಬ್ಯಾಟ್ಸ್ ಮನ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. 9 ವಿಕೆಟ್​ಗೆ 275 ರನ್​ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಂಗಾಳ ತಂಡ, ದಿನದಾಟದಲ್ಲಿ 37 ರನ್ ಕಲೆಹಾಕಿ 312 ರನ್​ಗಳಿಗೆ ಸರ್ವಪತನ ಕಂಡಿತು. ಶತಕ ಸಾಧಕ ಅನುಷ್ಟಪ್ ಮಜುಮ್ದಾರ್ (149* ರನ್, 207 ಎಸೆತ, 21 ಬೌಂಡರಿ, 3 ಸಿಕ್ಸರ್) ಹಾಗೂ ಇರಾನ್ ಪೊರೆಲ್ 10ನೇ ವಿಕೆಟ್​ಗೆ 54 ರನ್ ಕಲೆಹಾಕಿದರು. ಬಳಿಕ ಕರ್ನಾಟಕ ತಂಡ ಕೇವಲ 122 ರನ್​ಗಳಿಗೆ ಸರ್ವಪತನ ಕಂಡು 190 ರನ್​ಗಳಿಂದ ಭಾರಿ ಹಿನ್ನಡೆ ಅನುಭವಿಸಿತು. ಕರ್ನಾಟಕ ತಂಡ ಕೂದಲೆಳೆ ಅಂತರದಿಂದ ಫಾಲೋಆನ್​ನಿಂದ ಪಾರಾಯಿತು. ಬಳಿಕ ಎರಡನೇ ಸರದಿ ಆರಂಭಿಸಿರುವ ಬಂಗಾಳ ತಂಡ, ಅಭಿಮನ್ಯು ಮಿಥುನ್ (9ಕ್ಕೆ 3) ಮಾರಕ ದಾಳಿಗೆ ನಲುಗಿ ದಿನದಂತ್ಯಕ್ಕೆ 4 ವಿಕೆಟ್​ಗೆ 72 ರನ್ ಗಳಿಸಿದ್ದು, ಒಟ್ಟಾರೆ 262 ರನ್ ಮುನ್ನಡೆ ಸಾಧಿಸಿದೆ.

ಬಂಗಾಳ ತಂಡಕ್ಕೆ ಮಿಥುನ್ ಆಘಾತ: ಭಾರೀ ಮುನ್ನಡೆ ಸಾಧಿಸಿದ ಬಳಿಕ 2ನೇ ಇನಿಂಗ್ಸ್ ಆರಂಭಿಸಿರುವ ಬಂಗಾಳ ತಂಡ ಆರಂಭಿಕ ಆಘಾತದ ನಡುವೆಯೂ ಉತ್ತಮ ಸ್ಥಿತಿಯಲ್ಲಿದೆ. ಆರಂಭಿಕರಾದ ನಾಯಕ ಅಭಿಮನ್ಯು ಈಶ್ವರನ್ (11) ಹಾಗೂ ಅಭಿಷೇಕ್ ರಾಮನ್ (1) ಜೋಡಿಗೆ ಮಿಥುನ್ ಪೆವಿಲಿಯನ್ ದಾರಿ ತೋರಿದರು. ಮಿಥುನ್ ನೀಡಿದ ಆಘಾತದಿಂದ ಕೇವಲ 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡ ಬಂಗಾಳ ಆರಂಭಿಕ ಆಘಾತ ಎದುರಿಸಿತು. ಸುದೀಪ್ ಚಟರ್ಜಿ (40* ರನ್, 67 ಎಸೆತ, 8 ಬೌಂಡರಿ) ಹಾಗೂ ಮನೋಜ್ ತಿವಾರಿ (13) ಜೋಡಿ 4ನೇ ವಿಕೆಟ್​ಗೆ 38 ರನ್ ಕಲೆಹಾಕಿ ಬೇರ್ಪಟ್ಟಿತು. ರೋನಿತ್ ಮೋರೆ ಎಸೆದ ದಿನದ ಕೊನೇ ಓವರ್​ನಲ್ಲಿ ಮೊದಲ ಇನಿಂಗ್ಸ್ ಶತಕ ಸಾಧಕ ಅನುಷ್ಟಪ್ ಮಜುಮ್ದಾರ್ (1) ಹ್ಯಾಂಡ್​ಗ್ಲೌಸ್​ಗೆ ತಾಗಿದ ಚೆಂಡು ಸ್ಲಿಪ್​ನಲ್ಲಿದ್ದ ಮನೀಷ್ ಪಾಂಡೆ ಕೈಸೇರಿತು. ಆದರೆ ತೃತೀಯ ಅಂಪೈರ್ ಪರಿಶೀಲನೆ ವೇಳೆ ಆ ಎಸೆತ ನೋಬಾಲ್ ಆಗಿದ್ದರಿಂದ ಅನುಷ್ಟಪ್ ಜೀವದಾನದೊಂದಿಗೆ 3ನೇ ದಿನಕ್ಕೆ ಸುದೀಪ್ ಜತೆಗೆ ಬ್ಯಾಟಿಂಗ್ ಕಾಯ್ದುಕೊಂಡರು.

ಮುಖಭಂಗ ತಪ್ಪಿಸಿದ ಗೌತಮ್​ವಿುಥುನ್

ರಾಜ್ಯ ತಂಡ ಮೂರಂಕಿ ತಲುಪುವುದೇ ಅನುಮಾನವೆನಿಸಿದ ಸಮಯದಲ್ಲಿ ಕೆ.ಗೌತಮ್ (31 ರನ್, 24 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಅಭಿಮನ್ಯು ಮಿಥುನ್ (24 ರನ್, 27 ಎಸೆತ, 4 ಬೌಂಡರಿ) ಜೋಡಿ ಆಘಾತವನ್ನು ಲೆಕ್ಕಿಸದೆ ಜೋಡಿ ಬಿರುಸಿನ ಬ್ಯಾಟಿಂಗ್​ಗೆ ಮುಂದಾಯಿತು. ಈ ಜೋಡಿಯ ಹೋರಾಟದ ಫಲವಾಗಿ ಕರ್ನಾಟಕ ಮೂರಂಕಿ ಮೊತ್ತ ಮುಟ್ಟಿದ್ದಲ್ಲದೆ, ಫಾಲೋಆನ್ ಭೀತಿಯಿಂದಲೂ ಪಾರಾಯಿತು. ಈ ಜೋಡಿ 8 ವಿಕೆಟ್​ಗೆ 56 ರನ್​ಗಳಿಸಿದ್ದ ವೇಳೆ ಇಶಾನ್ ಪೊರೆಲ್ ಬೇರ್ಪಡಿಸಿದರು. ಇವರ ಬೆನ್ನಲ್ಲೇ ಗೌತಮ್ ಹಾಗೂ ರೋನಿತ್ ಮೋರೆ ವಿಕೆಟ್ ಪಡೆದ ಆಕಾಶ್ ದೀಪ್ ಕರ್ನಾಟಕ ತಂಡವನ್ನು ಆಲೌಟ್ ಖೆಡ್ಡಾಗೆ ಬೀಳಿಸಿದರು.

ಕನ್ನಡಿಗರ ಪೆವಿಲಿಯನ್ ಪರೇಡ್

ಇನಿಂಗ್ಸ್ ಮುನ್ನಡೆಯ ವಿಶ್ವಾಸದೊಂದಿಗೆ ಕಣಕ್ಕಿಳಿದ ಕರ್ನಾಟಕ ತಂಡಕ್ಕೆ ಇಶಾನ್ ಪೊರೆಲ್ ಹಾಗೂ ಆಕಾಶ್ ದೀಪ್ ಜೋಡಿ ಸುಧಾರಿಸದಂತೆ ನೋಡಿಕೊಂಡಿತು. ಎರಡು ವರ್ಷಗಳ ಬಳಿಕ ರಣಜಿ ಟ್ರೋಫಿ ಆಡಲಿಳಿದ ಕೆಎಲ್ ರಾಹುಲ್ (26) ಹಾಗೂ ಆರ್. ಸಮರ್ಥ್ (0) ಜೋಡಿಗೆ ಮೊದಲ ಓವರ್​ನಲ್ಲೇ ಇಶಾನ್ ಪೊರೆಲ್ ಆಘಾತ ನೀಡಿದರು. ಇನಿಂಗ್ಸ್​ನ 4ನೇ ಎಸೆತದಲ್ಲೇ ಸಮರ್ಥ್ ವಿಕೆಟ್ ಕಬಳಿಸುವುದರೊಂದಿಗೆ ಕರ್ನಾಟಕದ ಕುಸಿತಕ್ಕೆ ಮುನ್ನುಡಿ ಬರೆದರು. ಬಳಿಕ ಬಂದ ನಾಯಕ ಕರುಣ್ ನಾಯರ್ (3) ಇಶಾನ್ ಮರು ಓವರ್​ನಲ್ಲೇ ಔಟಾದರೆ, ಬಳಿಕ ಬಂದ ಭರವಸೆಯ ಬ್ಯಾಟ್ಸ್​ಮನ್​ಗಳಾದ ಕೆವಿ ಸಿದ್ದಾರ್ಥ್ (14), ಮನೀಷ್ ಪಾಂಡೆ (12), ದೇವದತ್ ಪಡಿಕಲ್ (4) ಬಂದಷ್ಟೇ ವೇಗವಾಗಿ ವಾಪಸಾದರು. ಒಂದೆಡೆ, ಇನಿಂಗ್ಸ್ ಕಟ್ಟಲು ಯತ್ನಿಸುತ್ತಿದ್ದ ರಾಹುಲ್ ಹಾಗೂ ಶರತ್ ಶ್ರೀನಿವಾಸ್ (1) ನಿರ್ಗಮನದೊಂದಿಗೆ ಕರ್ನಾಟಕ ಕೇವಲ 65 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡ ಫಾಲೋಆನ್ ಭೀತಿ ಎದುರಿಸಿತು.

ಬಂಗಾಳ ಪ್ರಥಮ ಇನಿಂಗ್ಸ್: 92 ಓವರ್​ಗಳಲ್ಲಿ 312 (ಶನಿವಾರ 9 ವಿಕೆಟ್​ಗೆ 275)

ಅನುಷ್ಟಪ್ ಮಜುಮ್ದಾರ್ ಅಜೇಯ 149

ಇಶಾನ್ ಪೊರೆಲ್ ಬಿ ರೋನಿತ್ ಮೋರೆ 7

ಇತರ: 10. ವಿಕೆಟ್ ಪತನ: 9-258. ಬೌಲಿಂಗ್: ಅಭಿಮನ್ಯು ಮಿಥುನ್ 21-4-77-3, ಪ್ರಸಿದ್ಧಕೃಷ್ಣ 21-6-78-2, ರೋನಿತ್ ಮೋರೆ 17-3-52-3, ಕೆ.ಗೌತಮ್ 28-1-90-2, ಕರುಣ್ 5-0-12-0.

ಕರ್ನಾಟಕ ಪ್ರಥಮ ಇನಿಂಗ್ಸ್: 36.2 ಓವರ್​ಗಳಲ್ಲಿ 122

ಕೆಎಲ್ ರಾಹುಲ್ ಸಿ ಅಭಿಷೇಕ್ ಬಿ ಮುಕೇಶ್ 26

ಸಮರ್ಥ್ ಆರ್. ಸಿ ಮನೋಜ್ ಬಿ ಪೊರೆಲ್ 0

ಕರುಣ್ ಸಿ ಅನುಷ್ಟಪ್ ಬಿ ಪೊರೆಲ್ 3

ಕೆವಿ ಸಿದ್ಧಾರ್ಥ್ ಸಿ ಮನೋಜ್ ಬಿ ಅಕಾಶ್​ದೀಪ್ 14

ಮನೀಷ್ ಪಾಂಡೆ ಬಿ ಮುಕೇಶ್ ಕುಮಾರ್ 12

ದೇವದತ್ ಪಡಿಕಲ್ ಸಿ ಅನುಷ್ಟಪ್ ಬಿ ಪೊರೆಲ್ 4

ಶರತ್ ಶ್ರೀನಿವಾಸ್ ಸಿ ಈಶ್ವರನ್ ಬಿ ಪೊರೆಲ್ 1

ಕೆ. ಗೌತಮ್ ಸಿ ಪನ್ (ಸಬ್) ಬಿ ಆಕಾಶ್​ದೀಪ್ 31

ಮಿಥುನ್ ಸಿ ಆಕಾಶ್​ದೀಪ್ ಬಿ ಪೊರೆಲ್ 24

ರೋನಿತ್ ಮೋರೆ ಸಿ ಶ್ರೀವತ್ಸ ಬಿ ಆಕಾಶ್ 1

ಪ್ರಸಿದ್ಧ ಕೃಷ್ಣ ಔಟಾಗದೆ 0

ಇತರ: 6. ವಿಕೆಟ್ ಪತನ: 1-1, 2-5, 3-35, 4-56, 5-63, 6-65, 7-65, 8-121, 9-121. ಬೌಲಿಂಗ್: ಇಶಾನ್ ಪೊರೆಲ್ 13-2-39-5, ಮುಕೇಶ್ ಕುಮಾರ್ 14-3-46-2, ಶಾಬಾಜ್ 1-0-3-0, ಆಕಾಶ್​ದೀಪ್ 8.2-1-30-3.

ಬಂಗಾಳ ದ್ವಿತೀಯ ಇನಿಂಗ್ಸ್: 22 ಓವರ್​ಗಳಲ್ಲಿ 4 ವಿಕೆಟ್​ಗೆ 72

ಅಭಿಷೇಕ್ ಕುಮಾರ್ ಸಿ ಶರತ್ ಬಿ ಮಿಥುನ್ 1

ಅಭಿಮನ್ಯು ಈಶ್ವರನ್ ಬಿ ಮಿಥುನ್ 11

ಸುದೀಪ್ ಚಟರ್ಜಿ ಬ್ಯಾಟಿಂಗ್ 40

ಅರ್ನಬ್ ನಂದಿ ಎಲ್​ಬಿಡಬ್ಲ್ಯು ಬಿ ಮಿಥುನ್ 0

ಮನೋಜ್ ತಿವಾರಿ ಸಿ ಶರತ್ ಬಿ ಪ್ರಸಿದ್ಧಕೃಷ್ಣ 13

ಅನುಷ್ಟಪ್ ಮಜುಮ್ದಾರ್ ಬ್ಯಾಟಿಂಗ್ 1

ಇತರ: 6. ವಿಕೆಟ್ ಪತನ: 1-2, 2-23, 3-23, 4-61. ಬೌಲಿಂಗ್: ಮಿಥುನ್ 6-2-9-3, ಪ್ರಸಿದ್ಧಕೃಷ್ಣ 9-2-31-1, ರೋನಿತ್ ಮೋರೆ 7-1-27-0.

ಸಂಕಷ್ಟದಲ್ಲಿ ಗುಜರಾತ್ ತಂಡ

ದಿಢೀರ್ ಕುಸಿತ ಅನುಭವಿಸಿದ ಮಾಜಿ ಚಾಂಪಿಯನ್ ಗುಜರಾತ್ ತಂಡ ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಎದುರು ಸಂಕಷ್ಟದ ಸ್ಥಿತಿಯಲ್ಲಿದೆ. 5 ವಿಕೆಟ್​ಗೆ 217 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಸೌರಾಷ್ಟ್ರ, ಅನುಭವಿ ಶೆಲ್ಟನ್ ಜಾಕ್ಸನ್ (103) ಶತಕದ ನೆರವಿನಿಂದ 304 ರನ್​ಗಳಿಸಿತು. ಗುಜರಾತ್ ತಂಡ ದಿನದಂತ್ಯಕ್ಕೆ 6 ವಿಕೆಟ್​ಗೆ 119 ರನ್ ಗಳಿಸಿದ್ದು, 185 ರನ್ ಹಿನ್ನಡೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net