

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ, 16 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ. ಕ್ರೀಡಾಲೋಕವನ್ನೇ ಬೆಚ್ಚಿಬೀಳಿಸಿದ ಕೆಪಿಎಲ್ ಕಳ್ಳಾಟದ ಬಗ್ಗೆ 6 ತಿಂಗಳ ಕಾಲ ತನಿಖೆ ನಡೆಸಲಾಗಿದೆ. ಇದರಲ್ಲಿ 3 ಪ್ರಕರಣದಲ್ಲಿ 2 ತಂಡಗಳ ಮಾಲೀಕರು ಮತ್ತು 6 ಆಟಗಾರರ ಸೇರಿ 16 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಕಬ್ಬನ್ಪಾರ್ಕ್ ಠಾಣೆಯಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ತನಿಖೆ ಆರಂಭಿಸಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಆಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ ವೆಂಕಟೇಶ ರೆಡ್ಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ, ಬೆಳಗಾವಿ ಪ್ಯಾಂಥರ್ಸ್ ತರಬೇತುದಾರ ಸುಧೀಂದ್ರ ಶಿಂಧೆ, ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಸ್ಪಿನ್ನರ್ ಅಬ್ರಾರ್ ಕಾಜಿ ಮತ್ತು ಬುಕ್ಕಿ ಅಮಿತ್ ಮಾವಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಸಂದೀಪ್ ಪಾಟೀಲ್ ವಿವರಿಸಿದ್ದಾರೆ.
ಇದೇ ರೀತಿ ಭಾರತೀನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಬೌಲಿಂಗ್ ಕೋಚ್ ವಿನು ಪ್ರಸಾದ್, ಬ್ಯಾಟ್ಸ್ಮನ್ ಎಂ. ವಿಶ್ವನಾಥ್, ಆಟಗಾರರಾದ ನಿಶಾಂತ್ ಸಿಂಗ್ ಶೇಖಾವತ್, ಮೊಹಾಂತಿ, ಬುಕ್ಕಿಗಳಾದ ವೆಂಕಿ, ಕಿರಣ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಜೆ.ಪಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 8 ಜನ ಬುಕ್ಕಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಂತಾರಾಷ್ಟ್ರೀಯ ಬುಕ್ಕಿ ಜತಿನ್ ಸೇಥಿ, ಭವೇಶ್, ಬಫ್ನಾ, ಸನ್ಯಾಮ್ ಗುಲಾಟಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಎಲ್ಲ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಸದ್ಯಕ್ಕೆ ಜಾಮೀನಿನ ಮೇಲೆ ಎಲ್ಲರೂ ಬಿಡುಗಡೆಗೊಂಡಿದ್ದಾರೆ.
ಇದೊಂದು ಬಹುಕೋಟಿ ರೂಪಾಯಿ ಹಗರಣ ಆಗಿದ್ದು, ಪ್ರಾಥಮಿಕ ಹಂತದ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ವಿಚಾರಣೆ ಮತ್ತಷ್ಟು ಮುಂದುವರಿದಿದೆ. ಇನ್ನೂ ಕೆಲ ಪ್ರಕರಣಗಳು ತನಿಖಾ ಹಂತದಲ್ಲಿದ್ದು, ಆರೋಪಪಟ್ಟಿ ಸಲ್ಲಿಸಲಾಗುತ್ತದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪ್ರತಿ ಹೆಜ್ಜೆಗೂ ಬೆಟ್ಟಿಂಗ್: ಕೆಪಿಎಲ್ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಪ್ರತಿಯೊಂದು ಪಂದ್ಯದಲ್ಲಿ ಬೆಟ್ಟಿಂಗ್ ನಡೆಸಿದ್ದ. ಟಾಸ್ ಆಯ್ಕೆ, ಆಟಗಾರರನ್ನು ಮೈದಾನಕ್ಕೆ ಇಳಿಸುವುದು ಸೇರಿ ಪ್ರತಿಯೊಂದು ಹಂತದಲ್ಲಿ ಅಲಿ ಪಾತ್ರವಹಿಸಿದ್ದ. ಅಲಿ ಜತೆ 12 ಆಟಗಾರರು ಸಂಪರ್ಕ ಹೊಂದಿದ್ದರು. ಕೆಪಿಎಲ್ 8ನೇ ಆವೃತ್ತಿಯಲ್ಲಿ ಬೆಟ್ಟಿಂಗ್ಗೆ ಸಾಕ್ಷ್ಯ ಲಭಿಸಿವೆ. ಮೈದಾನಕ್ಕೆ ಆಟಗಾರರು ಇಳಿಯುವ ಮುನ್ನವೇ ಸೋಲು ಗೆಲುವುಗಳ ನಿರ್ಣಯವಾಗುತ್ತಿದ್ದವು. ಹಲವು ಮ್ಯಾಚ್ಗಳ ವಿಡಿಯೋವನ್ನು ಪರಿಶೀಲನೆ ನಡೆಸಿದ್ದು, ಸಾಕ್ಷ್ಯಗಳು ಸಹ ಲಭ್ಯವಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹನಿಟ್ರಾ್ಯಪ್ಗೆ ಸಾಕ್ಷ್ಯ ಸಿಕ್ಕಿಲ್ಲ: ಹನಿಟ್ರಾ್ಯಪ್ ಮೂಲಕ ಆಟಗಾರರನ್ನು ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ದಂಧೆಗೆ ಸೆಳೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಈ ಕುರಿತು ಇನ್ನೂ ಸಾಕ್ಷ್ಯ ಲಭ್ಯವಾಗಿಲ್ಲ ಎನ್ನಲಾಗಿದೆ.
ಕಳ್ಳಾಟ ಬೆಳಕಿಗೆ ತಂದಿದ್ದ ಆಟಗಾರ್ತಿ!
ಭಾರತ-ಇಂಗ್ಲೆಂಡ್ ನಡುವಿನ ಸೀಮಿತ ಓವರ್ಗಳ ಸರಣಿಗೂ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಮ್ಯಾಚ್ ಫಿಕ್ಸಿಂಗ್ ನಡೆಸುವಂತೆ ಇಬ್ಬರು ಬುಕ್ಕಿಗಳು ಕರೆ ಮಾಡಿದ್ದರು. ಈ ಬಗ್ಗೆ ಕಳೆದ ವರ್ಷ ಸೆ.16ರಂದು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಫಿಕ್ಸಿಂಗ್ ದಂಧೆ ಪತ್ತೆಗೆ ತನಿಖೆ ನಡೆಸುವಂತೆ ಸಂದೀಪ್ ಪಾಟೀಲ್ಗೆ ಆದೇಶಿಸಿದ್ದರು. ತನಿಖೆ ಕೈಗೊಂಡಾಗ 2 ತಿಂಗಳ ಹಿಂದೆ ನಡೆದಿದ್ದ ಕೆಪಿಎಲ್ 8ನೇ ಆವೃತ್ತಿಯಲ್ಲಿ ಅಶ್ಪಾಕ್ ಅಲಿ ತಾರ್ ಬೆಟ್ಟಿಂಗ್ನಲ್ಲಿ ತೊಡಗಿರುವ ಸುಳಿವು ಸಿಕ್ಕಿತ್ತು. ಇದಾದ ಮೇಲೆ ಒಂದರ ಹಿಂದೆ ಮತ್ತೊಂದು ಪ್ರಕರಣಗಳು ಬೆಳಕಿಗೆ ಬಂದಿವೆ.