

ಬೆಂಗಳೂರು: ನಾಲ್ಕನೇ ಆವೃತ್ತಿಯ 14 ವಯೋಮಿತಿಯ ಕರ್ನಾಟಕ ಮಿನಿ ಕ್ರೀಡಾಕೂಟದ ಆರನೇ ದಿನವಾದ ಶುಕ್ರವಾರ ಕಬಡ್ಡಿ, ಫುಟ್‌ಬಾಲ್ ಮತ್ತು ಲಾನ್ ಟೆನಿಸ್ ಫೈನಲ್ ಪಂದ್ಯಗಳು ನಡೆದವು. ವಾಲಿಬಾಲ್‌ನಲ್ಲಿ ಗದಗ ಹಾಗೂ ದಕ್ಷಿಣ ಕನ್ನಡ ತಂಡಗಳು ಕ್ರಮವಾಗಿ ಬಾಲಕ, ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು. ಎರಡೂ ವಿಭಾಗದಲ್ಲಿ ಬೆಂಗಳೂರು ನಗರ ತಂಡ ರನ್ನರ್‌ಅಪ್‌ಗೆ ಸಮಾಧಾನ ಕಂಡಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಬಾಲಕಿಯ ವಾಲಿಬಾಲ್ ಫೈನಲ್‌ನಲ್ಲಿ ಗದಗ ತಂಡ 3-0 ಗೇಮ್‌ಗಳಿಂದ ಬೆಂಗಳೂರು ನಗರ ತಂಡವನ್ನು ಮಣಿಸಿದರೆ, ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ 3-0 ರಿಂದ ಬೆಂಗಳೂರು ಎದುರು ಜಯಿಸಿತು. ಬಾಲಕರ ಕಬಡ್ಡಿಯಲ್ಲಿ ಉತ್ತರ ಕನ್ನಡ ತಂಡ 55-26 ಅಂಕಗಳ ಅಂತರದಿಂದ ಬೆಂಗಳೂರು ತಂಡವನ್ನು ಮಣಿಸಿ ಚಿನ್ನ ಗೆದ್ದರೆ, ತೀವ್ರ ಹಣಾಹಣಿಯಿಂದ ಕೂಡಿದ್ದ ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ತಂಡ 33-25 ಅಂಕಗಳಿಂದ ದಕ್ಷಿಣ ಕನ್ನಡವನ್ನು ಮಣಿಸಿ ಚಾಂಪಿಯನ್ ಎನಿಸಿತು. ಬಾಲಕರ ಫುಟ್‌ಬಾಲ್‌ನಲ್ಲಿ ಬೆಳಗಾವಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ರಿಂದ ದಕ್ಷಿಣ ಕನ್ನಡ ಎದುರು ರೋಚಕ ಗೆಲುವಿನೊಂದಿಗೆ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು. ಉಭಯ ತಂಡಗಳು ನಿಗದಿತ ಸಮಯದಲ್ಲಿ 1-1 ರಿಂದ ಸಮಬಲ ಸಾಧಿಸಿದ್ದವು. ಬಾಲಕರ ನೆಟ್‌ಬಾಲ್‌ನಲ್ಲಿ ಚಾಮರಾಜನಗರ ತಂಡ 28-25 ರಿಂದ ಹಾಸನ ತಂಡವನ್ನು ಮಣಿಸಿ ಚಿನ್ನ ಪಡೆದರೆ, ಹಾಸನ ರಜತಕ್ಕೆ ತೃಪ್ತಿಪಟ್ಟಿತು. ಬಾಲಕಿಯರ ವಿಭಾಗದಲ್ಲೂ ಹಾಸನ ತಂಡ ರನ್ನರ್ ಅಪ್ ಆಗಿ ಬೆಳ್ಳಿ ಪದಕಕ್ಕೆ ಸಮಾಧಾನ ಕಂಡಿತು. 19-17 ರಿಂದ ರೋಚಕ ಗೆಲುವು ಒಲಿಸಿಕೊಂಡ ದಕ್ಷಿಣ ಕನ್ನಡ ಚಾಂಪಿಯನ್ ಆಯಿತು.
ಇತರ ಸ್ಪರ್ಧೆಗಳ ಚಿನ್ನ ವಿಜೇತರು: ಶೂಟಿಂಗ್: ಬಾಲಕಿಯರು: ಹೃದಯ್‌ಶ್ರೀ (ರಾಮನಗರ), ಸೃಷ್ಟಿ, ಐಶಾನಿ, ಲಿಶಾ (100 ಮೀ. ಏರ್ ರೈಲ್ ತಂಡ), ಬಾಲಕರು: ಸಂವೀದ್ (ಬೆಂಗಳೂರು), ಚಿರಾಗ್‌ಮ ದಿವ್ಯಾಂಶ್, ಅಧ್ಯುತಿಯ (10 ಮೀ. ಏರ್ ರೈಲ್);ಈಜು: ಬಾಲಕರು: ಅದ್ವೈತ ವಿಎಂ (50 ಮೀ. ಫ್ರೀಸ್ಟೈಲ್, 50 ಮೀ. ಬ್ಯಾಕ್‌ಸ್ಟ್ರೋಕ್ ಬೆಂಗಳೂರು), ಶರಣ್ ಎಸ್ (200 ಮೀ. 800 ಮೀ. ಫ್ರೀಸ್ಟೈಲ್, ಬೆಂಗಳೂರು), ರೆಯಾನ್ಶ್ ಕಂಠಿ ವೈ (200ಮೀ.ಬ್ರೆಸ್ಟ್‌ಸ್ಟ್ರೋಕ್,ಬೆಂಗಳೂರು), ಸುಬ್ರಮಣ್ಯ ಜೀವಾಂಶ್ (400 ಮೀ. ಮೆಡ್ಲೆ, 200, 50 ಮೀ. ಬಟರ್ ಪ್ಲೈ, ಬೆಂಗಳೂರು), ಬಸವನಗುಡಿ ಈಜು ಕೇಂದ್ರ (4/200 ಮೀ, 4/100 ಮೆಡ್ಲೆ ರಿಲೇ).ಬಾಲಕಿಯರು: ಮಾನ್ಯಾ ಆರ್ ಮಾಧ್ವ (50 ಮೀ. ಫ್ರೀಸ್ಟೈಲ್, 50 ಮೀ. 200 ಮೀ. ಬಟರ್ ಪ್ಲೈ ಬೆಂಗಳೂರು ಗ್ರಾಮಾಂತರ), ಸುಮನ್ವಿ (200 ಮೀ, 800 ಮೀ, ಫ್ರೀಸ್ಟೈಲ್, 400 ಮೀ ಮೆಡ್ಲೆ, ಬೆಂಗಳೂರು), ಇಂಚರಾ (200 ಬ್ಯಾಕ್‌ಸ್ಟ್ರೋಕ್, ಬೆಂಗಳೂರು), ಅವನಿ ಬೆಳ್ಳಿಯಪ್ಪ (50 ಮೀ, ಬ್ಯಾಕ್‌ಸ್ಟ್ರೋಕ್, ಬೆಂಗಳೂರು), ಡಿಕೆವಿ ಈಜು ಕೇಂದ್ರ (4*200 ಮೀಟರ್ ರಿಲೇ, ಬೆಂಗಳೂರು).
ಮಂಡ್ಯದ ಉನ್ನತಿಗೆ ಸ್ವರ್ಣ
ಲಾನ್ ಟೆನಿಸ್ ಸಿಂಗಲ್ಸ್ ಬಾಲಕಿಯರ ವಿಭಾಗದಲ್ಲಿ ಮಂಡ್ಯದ ಉನ್ನತಿ ವಿ ಮುರುಳೀಧರ್ ಹಾಗೂ ತನಯ್ ಬಾಬು ಪೈ ಸ್ವರ್ಣ ಪದಕ ಗೆದ್ದುಕೊಂಡರು. ಉನ್ನತಿ 6-0, 6-1 ರಿಂದ ಬೆಂಗಳೂರಿನ ಕಾಶ್ವಿ ವಿ ಕೋಣಂಕಿ ಅವರನ್ನು ಮಣಿಸಿದರೆ, ತನ್ಮಯ್ 6-2,6-2 ರಿಂದ ಬೆಂಗಳೂರಿನ ಮಾಧವ್ ದಾಧಿಚ್‌ರನ್ನು ಸೋಲಿಸಿದರು. ಬಾಲಕಿಯರ ಡಬಲ್ಸ್‌ನಲ್ಲಿ ಮೈಸೂರಿನ ಋತ್ವಿ ಎಂ ಮಹೇಶ್-ಸಾನ್ವಿ ಪ್ರಕಾಶ್ ರಾಜ್ ಪುರೋಹಿತ್ ಜೋಡಿ 6-0, 6-4 ರಿಂದ ಮಂಡ್ಯದ ಉನ್ನತಿ ವಿ ಮುರುಳೀಧರ್-ಗ್ರಂಥನಾ ಬಿ.ಎನ್ ಜೋಡಿಯನ್ನು ಮಣಿಸಿ ಚಿನ್ನ ಜಯಿಸಿದರು. ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಮಾಧವ್ ದಾಧಿಚ್-ತನಯ್ ಬಾಬು ಪೈ ಜೋಡಿ ನಿಹಾಲ್ ಎಸ್ ರೆಡ್ಡಿ ತನುಷ್‌ಶೇಖರ್ ಬಿ ಸಿ ಅವರನ್ನು ಸೋಲಿಸಿದರು.