ನವೆಂಬರ್​ 14ರಿಂದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟ

ಬೆಂಗಳೂರಿನಲ್ಲಿ 8 ದಿನಗಳ ಕಾಲ ಆಯೋಜನೆ > 5 ಸಾವಿರ ಕ್ರೀಡಾಪಟುಗಳು ಭಾಗಿ
olympic
ಸುದ್ದಿಗೋಷ್ಠಿಯಲ್ಲಿ ಕೆ. ಗೋವಿಂದರಾಜ್​ ಮತ್ತು ಅನುಚೇತ್​ಏಜೆನ್ಸಿ
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕರ್ನಾಟಕ ಒಲಿಂಪಿಕ್​ ಸಂಸ್ಥೆ (ಕೆಒಎ) ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟ ನವೆಂಬರ್​ 14ರಿಂದ 21ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂ ಮತ್ತು ವಿವಿಧ ಕ್ರೀಡಾಂಗಣಗಳಲ್ಲಿ ಆಯೋಜನೆಗೊಳ್ಳಲಿದೆ.

ಕರ್ನಾಟಕ ಒಲಿಂಪಿಕ್​ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೆಒಎ ಅಧ್ಯಕ್ಷ ಡಾ. ಕೆ. ಗೋವಿಂದರಾಜ್​ ಅವರು ಕ್ರೀಡಾಕೂಟದ ಮಾಹಿತಿಯನ್ನು ವಿವರಿಸಿದರು. 27 ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. 2020ರಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. 14 ವಯೋಮಿತಿಯ ಸುಮಾರು 5 ಸಾವಿರ ಕ್ರೀಡಾಪಟುಗಳು ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕ್ರೀಡಾಪಟುಗಳಿಗೆ ಊಟ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಯೋಮಿತಿ ಮಕ್ಕಳಿಗೆ ಇಂಥ ಕ್ರೀಡಾಕೂಟ ಆಯೋಜಿಸುವ ಮೂಲಕ ತಯಾರು ಮಾಡಿದಾಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡಾಪಟುಗಳನ್ನು ಬೆಳೆಸುವುದಕ್ಕೆ ನಾಂದಿಯಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್​. ಅನುಚೇತ್​, ಕರ್ನಾಟಕ ರಾಜ್ಯದ ವಿವಿಧ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

27 ಕ್ರೀಡೆಗಳಲ್ಲಿ ಸ್ಪರ್ಧೆ

ಮಿನಿ ಕರ್ನಾಟಕ ಕ್ರೀಡಾಕೂಟದಲ್ಲಿ ಒಟ್ಟು 27 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿವೆ. ಅವುಗಳೆಂದರೆ ಅಥ್ಲೆಟಿಕ್ಸ್​, ಆರ್ಚರಿ, ಬಾಸ್ಕೆಟ್​ಬಾಲ್​, ಬ್ಯಾಡ್ಮಿಂಟನ್​, ಬಾಕ್ಸಿಂಗ್​, ಸೈಕ್ಲಿಂಗ್​, ಫೆನ್ಸಿಂಗ್​, ಕಯಾಕಿಂಗ್​ ಮತ್ತು ಕನೋಯಿಂಗ್​, ಗಾಲ್ಫ್​, ಫುಟ್​ಬಾಲ್​, ಜಿಮ್ನಾಸ್ಟಿಕ್ಸ್​, ಹ್ಯಾಂಡ್​ಬಾಲ್​, ಹಾಕಿ, ಜುಡೋ, ಖೋಖೋ, ಕಬಡ್ಡಿ, ಟೆನಿಸ್​, ವಾಲಿಬಾಲ್​, ನೆಟ್​ಬಾಲ್​, ಈಜು, ಟೇಬಲ್​ ಟೆನಿಸ್​, ಟೇಕ್ವಾಂಡೊ, ರೈಡಿಂಗ್​, ರೈಲ್​ ಶೂಟಿಂಗ್​, ಕುಸ್ತಿ, ವುಶು, ವೇಯ್ಟ್​ಲಿಫ್ಟಿಂಗ್​.

ಒಲಿಂಪಿಕ್ಸ್​ನಲ್ಲಿ ರಾಜ್ಯದ ಹೆಚ್ಚಿನ ಪ್ರಾತಿನಿಧ್ಯ ಕನಸು

ಮುಂಬರುವ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚಿನ ಕ್ರೀಡಾಪಟುಗಳು ಒಲಿಂಪಿಕ್ಸ್​ನಲ್ಲಿ ಪ್ರತಿನಿಧಿಸಬೇಕು ಎಂಬುದೇ ನನ್ನ ಕನಸು. ಇದಕ್ಕೆ ಮಿನಿ ಕರ್ನಾಟಕ ಕ್ರೀಡಾಕೂಟ ಯುವ ಕ್ರೀಡಾಪಟುಗಳ ಪಾಲಿಗೆ ಉತ್ತಮ ವೇದಿಕೆಯಾಗಿದೆ ಎಂದು ಫಿಬಾ ಏಷ್ಯಾ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್​ ಸದಸ್ಯ ಕೆ. ಗೋವಿಂದರಾಜ್​ ಹೇಳಿದರು. ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಈ ಮಿನಿ ಕರ್ನಾಟಕ ಕ್ರೀಡಾಕೂಟ ಆರಂಭಿಸಲಾಯಿತು. ಚಿಕ್ಕ ವಯಸ್ಸಿನಲ್ಲೇ ಪ್ರೋತ್ಸಾಹ ನೀಡುವುದು, ಸ್ಪರ್ಧಾತ್ಮಕತೆಗೆ ಒಗ್ಗಿಕೊಳ್ಳಲು ಈ ಕ್ರೀಡಾಕೂಟ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮಿಂಚಬೇಕು ಎಂಬುದು ನನ್ನ ಅಭಿಲಾಷೆ. ಭವಿಷ್ಯದ ತಾರೆಯರ ಅನಾವರಣಕ್ಕೆ ಕೂಡ ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರು.