ಕ್ವಾರ್ಟರ್‌ಫೈನಲ್ ತವಕದಲ್ಲಿ ಕರ್ನಾಟಕ: ಇಂದು ನಾಗಾಲ್ಯಾಂಡ್ ಎದುರು ಅಂತಿಮ ಲೀಗ್ ಪಂದ್ಯ

New Project (2)
Published on

ವಡೋದರ: ಪ್ರತಿಷ್ಠಿತ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕರ್ನಾಟಕ ತಂಡ ನೇರವಾಗಿ ಕ್ವಾರ್ಟರ್‌ಫೈನಲ್ಗೇರುವ ಹಂಬಲದಲ್ಲಿದೆ. ಭಾನುವಾರ ನಡೆಯಲಿರುವ ಸಿ ಗುಂಪಿನ ತನ್ನ 7ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ನಾಗಾಲ್ಯಾಂಡ್ ಸವಾಲು ಎದುರಿಸಲಿದ್ದು, ಮಯಾಂಕ್ ಅಗರ್ವಾಲ್ ಪಡೆ ಟೂರ್ನಿಯ 6ನೇ ಗೆಲುವಿನ ತವಕದಲ್ಲಿದೆ. ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಕರ್ನಾಟಕ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವು, 1 ಸೋಲಿನೊಂದಿಗೆ 20 ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನದಲ್ಲಿದೆ. ಪ್ರತಿ ಗುಂಪಿನ ಅಗ್ರ ತಂಡ ನೇರವಾಗಿ ಕ್ವಾರ್ಟರ್‌ಫೈನಲ್ಗೆ ಅರ್ಹತೆ ಪಡೆಯಲಿದೆ.

ಮಯಾಂಕ್ ಪಡೆ ಕನಿಷ್ಠ ಜಯ ಸಾಧಿಸಿದೂ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿದ್ದು, ಈ ಪೈಕಿ ಪ್ರತಿ ಗುಂಪಿನ ಅಗ್ರ ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲಿವೆ. ಎರಡನೇ ಸ್ಥಾನ ಪಡೆದ 5 ತಂಡಗಳ ಪೈಕಿ ಒಂದು ಅತ್ಯುತ್ತಮ ತಂಡ ನೇರವಾಗಿ ಕ್ವಾರ್ಟರ್‌ಫೈನಲ್‌ಗೇರಲಿದೆ. ಉಳಿದ 4 ತಂಡಗಳು ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಆಡಲಿವೆ. ಕರ್ನಾಟಕ ತಂಡ ಅಂತಿಮ ಲೀಗ್ ಪಂದ್ಯದಲ್ಲಿ ಸೋಲು ಅನುಭವಿಸಿದರೂ, ಕನಿಷ್ಠ ನಾಕೌಟ್‌ಗೇರಲಿದೆ. ನಾಗಾಲ್ಯಾಂಡ್ ತಂಡ ಆಡಿರುವ 6 ಪಂದ್ಯಗಳಲ್ಲಿ 1 ಗೆಲುವು, 5 ಸೋಲು ಕಂಡಿದೆ. ವಲಸೆ ಹೋಗಿರುವ ಕನ್ನಡಿಗ ಡಿ.ನಿಶ್ಚಲ್, ಆರ್.ಜೋನಾಥನ್ ತಂಡದ ಪ್ರಮುಖ ಆಟಗಾರರೆನಿಸಿದ್ದಾರೆ.

ಮಯಾಂಕ್ ಅಗರ್ವಾಲ್ 497 ರನ್ ಕಲೆಹಾಕುವ ಮೂಲಕ ಟೂರ್ನಿಯ 2ನೇ ಗರಿಷ್ಠ ರನ್ ಸ್ಕೋರರ್ ಎನಿಸಿದ್ದು, ಸರಣಿಯಲ್ಲಿ ಭರ್ಜರಿ ಲಯದಲ್ಲಿದ್ದಾರೆ. ಸ್ಮರಣ್ (228), ಅನೀಶ್ ಕೆವಿ (208) ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಬೌಲಿಂಗ್‌ನಲ್ಲಿ ವಾಸುಕಿ ಕೌಶಿಕ್ 12 ವಿಕೆಟ್ ಕಬಳಿಸಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೇಯಸ್ ಗೋಪಾಲ್ (10) ಉತ್ತಮ ಸಾಥ್ ನೀಡಿದ್ದಾರೆ.

ಆರಂಭ: ಬೆಳಗ್ಗೆ 9

ನೇರಪ್ರಸಾರ ಇರುವುದಿಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net