

ಶಿವಮೊಗ್ಗ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಸಕ್ತ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಶಿವಮೊಗ್ಗದ ನವುಲೆ ಕೆಎಸ್‌ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಮೈದಾನದಲ್ಲಿ ಒಂದು ಪಂದ್ಯಕ್ಕೆ ಅವಕಾಶ ಕಲ್ಪಿಸಿದ್ದು, ಅ.25ರಿಂದ 28ರವರೆಗೆ ಕರ್ನಾಟಕ-ಗೋವಾ ನಡುವೆ ಪಂದ್ಯ ನಡೆಯಲಿದೆ ಎಂದು ಕೆಎಸ್‌ಸಿಎ ಮೂಲ ಸೌಕರ್ಯ ಸಮಿತಿ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಅಂತಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಪ್ರತಿಭಾನ್ವಿತ ಯುವ ಕ್ರಿಕೆಟಿಗರಿಗೆ ರಣಜಿ ಟ್ರೋಫಿ ಮುಖ್ಯ ವೇದಿಕೆ. ರಣಜಿ ಇತಿಹಾಸದಲ್ಲಿ 42 ಬಾರಿ ಗೆದ್ದಿರುವ ಮುಂಬೈ ತಂಡ ಅಗ್ರಸ್ಥಾನದಲ್ಲಿದೆ. ಎಂಟು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 1990ರ ದಶಕದಲ್ಲಿ ಕರ್ನಾಟಕದ ಕ್ರಿಕೆಟ್ ಉಜ್ವಲವಾಗಿತ್ತು. ಇತ್ತೀಚಿನ ಕಾಲದಲ್ಲಿ 2013-14 ಮತ್ತು 2014-15ರಲ್ಲಿ ಬ್ಯಾಕ್ ಟು ಬ್ಯಾಕ್ ಪುಶಸ್ತಿಗಳನ್ನು ಗೆದ್ದು ರಾಜ್ಯ ತಂಡ ತನ್ನ ಶ್ರೇಷ್ಠತೆಯನ್ನು ಮತ್ತೆ ತೋರಿಸಿತ್ತು. ತಲಾ ಎರಡು ಬಾರಿ ಪ್ರಶಸ್ತಿ ಗೆದ್ದುಕೊಟ್ಟ ಶ್ರೇಯಸ್ಸು ಇ.ಎ.ಎಸ್.ಪ್ರಸನ್ನ ಮತ್ತು ವಿನಯ್‌ಕುಮಾರ್‌ಗೆ ಸಲ್ಲುತ್ತದೆ. ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನೀಲ್ ಜೋಶಿ ನಾಯಕತ್ವದಲ್ಲಿ ತಲಾ ಒಂದು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ ಎಂದರು. ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಿ-20 ಪರಿಚಯದ ಬಳಿಕ ಟೆಸ್ಟ್ ಪಂದ್ಯಗಳಿಗೆ ಪ್ರೇಕ್ಷಕರ ಕೊರತೆ ಎದುರಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದರೂ ಪ್ರೇಕ್ಷಕರು ಬರುತ್ತಿಲ್ಲ. ಹಾಗಾಗಿ ಶಿವಮೊಗ್ಗದಲ್ಲಿ ರಣಜಿ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಡಿ.ಎಸ್.ಅರುಣ್ ಹೇಳಿದರು. ಶಿವಮೊಗ್ಗದಲ್ಲಿ ಸಾಕಷ್ಟು ಕ್ರಿಕೆಟ್ ಅಕಾಡೆಮಿಗಳಿದ್ದು, ಅವರಿಗೂ ಮಕ್ಕಳನ್ನು ಕರೆದುಕೊಂಡು ಬರುವಂತೆ ಸಲಹೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ, ವಿಐಪಿ, ವಿವಿಐಪಿಗಳಿಗೆ ಮೊದಲ ಮಹಡಿಯಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ, ಗ್ರೀನ್ ಎನರ್ಜಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ವಲಯ ಅಧ್ಯಕ್ಷ ರಾಜೇಶ್ ಕಾಮತ್, ಮಾಜಿ ವಲಯ ಸಂಚಾಲಕ ಡಿ.ಆರ್.ನಾಗರಾಜ್, ಐಡಿಯಲ್ ಗೋಪಿ, ಮನೋಹರ್ ಸುದ್ದಿಗೋಷ್ಠಿಯಲ್ಲಿದ್ದರು.
ಕರ್ನಾಟಕ-ಗೋವಾ ನಡುವೆ ಒಳ್ಳೆಯ ಪೈಪೋಟಿ ನಿರೀಕ್ಷೆ ಮಾಡಲಾಗುತ್ತಿದೆ. ಗೋವಾ ತಂಡ ಕೂಡ ಕಳೆದ ಪಂದ್ಯದಲ್ಲಿ 500ಕ್ಕೂ ಅಧಿಕ ರನ್ ಕಲೆಹಾಕಿತ್ತು. ಮಳೆ ಬಂದರೆ ನೀರು ತೆರವಿಗೆ ಎರಡು ಸೂಪರ್ ಸಾಫರ್‌ಗಳಿವೆ. 20 ಗ್ರೌಂಡ್‌ಮನ್‌ಗಳಿದ್ದಾರೆ. ಕವರ್ಸ್ ವ್ಯವಸ್ಥೆ ಕೂಡ ಇದೆ. - ಎಚ್.ಎಸ್.ಸದಾನಂದ, ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ