

ಬೆಂಗಳೂರು: ಪಂಜಾಬ್ ವಿರುದ್ಧ ಇನಿಂಗ್ಸ್ ಗೆಲುವಿನೊಂದಿಗೆ ಬೋನಸ್ ಸಹಿತ 7 ಅಂಕ ಕಲೆಹಾಕಿ ನಾಕೌಟ್ ಹಂತಕ್ಕೇರುವ ಆಸೆಗೆ ಹೆಚ್ಚಿನ ಬಲ ತುಂಬಿಸಿಕೊಂಡಿರುವ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಟೂರ್ನಿ ರಣಜಿ ಟ್ರೋಫಿಯ ತನ್ನ ಏಳನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಹರಿಯಾಣ ಎದುರು ಸೆಣಸಲಿದೆ. ಗುರುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಿರ್ಣಾಯಕ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆ ಬೋನಸ್ ಅಂಕದ ಒತ್ತಡದಲ್ಲಿ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾ ಬ್ಯಾಟರ್ ಕೆಎಲ್ ರಾಹುಲ್ ಸೇರ್ಪಡೆ ರಾಜ್ಯ ತಂಡದ ಬಲ ಹೆಚ್ಚಿಸಿದೆ.
ಟೂರ್ನಿಯ ಸಿ ಗುಂಪಿನ ಕ್ವಾರ್ಟರ್ಫೈನಲ್ ರೇಸ್ನಲ್ಲಿ ಕರ್ನಾಟಕ, ಹರಿಯಾಣ ಹಾಗೂ ಕೇರಳ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ರಣಜಿ ಟ್ರೋಫಿಯ ಮೊದಲ ಚರಣದಲ್ಲಿ ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡದ ನಿರ್ವಹಣೆ ತೃಪ್ತಿದಾಯಕವಾಗಿರಲಿಲ್ಲ. ಆದರೆ ವಿಜಯ್ ಹಜಾರೆ ಟ್ರೋಫಿ ಜಯಿಸುವ ಮೂಲಕ ಲಯ ಕಂಡುಕೊಂಡಿರುವ ಕರ್ನಾಟಕ ತಂಡ ಭರ್ಜರಿ ಕಂಬ್ಯಾಕ್ ಮಾಡಿದ್ದು, ಜತೆಗೆ ಎರಡನೇ ಚರಣದಲ್ಲಿ ಆತ್ಮವಿಶ್ವಾಸ ವೃದ್ದಿಸಿಕೊಂಡಿದೆ. ಯುವ&ಅನುಭವಿ ಆಟಗಾರರ ಕಾಂಬಿನೇಷನ್ನಲ್ಲಿ ಮಯಾಂಕ್ ಪಡೆ ಸದ್ಯ ಭರ್ಜರಿ ಾಮ್ರ್ನಲ್ಲಿರುವುದು ನಾಕೌಟ್ ರೇಸ್ನಲ್ಲಿ ಸವಾಲು ಜೀವಂತವಿರಿಸಿದೆ. ಗುಂಪಿನ ಅಗ್ರಸ್ಥಾನಿ ಹರಿಯಾಣ ಎದುರು ಬೋನಸ್ ಅಂಕ ಕಲೆಹಾಕುವುದು ಕರ್ನಾಟಕ ತಂಡಕ್ಕೆ ನೈಜ ಸವಾಲೆನಿಸಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಸತತ ಎರಡು ಶತಕ ಬಾರಿಸಿರುವ ಆರ್.ಸ್ಮರಣ್ ಕರ್ನಾಟಕ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ.
ಮಯಾಂಕ್ ಅಗರ್ವಾಲ್ ವಿಜಯ್ ಹಜಾರೆ ಟ್ರೋಫಿಯ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಎಲ್ ಶ್ರೀಜಿತ್, ನಿಕಿನ್ ಜೋಸ್ ಸಹ ಉತ್ತಮ ಲಯದಲ್ಲಿರುವುದು ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಿದೆ. ಬೌಲಿಂಗ್ನಲ್ಲಿ ವಿ. ಕೌಶಿಕ್, ಅಭಿಲಾಷ್ ಶೆಟ್ಟಿ, ಶ್ರೇಯಸ್ ಗೋಪಾಲ್ ಜತೆಗೆ ವಿದ್ವತ್ ಕಾವೇರಪ್ಪ ವೈವಿಧ್ಯತೆ ತುಂಬಿದ್ದಾರೆ.
ಇತ್ತ ಹರಿಯಾಣ ತಂಡ ಹಿಂದಿನ ಲೀಗ್ ಪಂದ್ಯದಲ್ಲಿ ಬಂಗಾಳ ಎದುರು 280 ರನ್ಗಳ ಗೆಲುವಿನೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಸಂಪಾದಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಹರಿಯಾಣ ಪರ ಹಿಮಾಂಶು ರಾಣಾ ಆಡಿರುವ ಆರು ಪಂದ್ಯಗಳಲ್ಲಿ 419 ರನ್ ಕಲೆಹಾಕಿದ್ದು, ಜಯಂತ್ ಯಾದವ್ 23 ವಿಕೆಟ್ ಕಬಳಿಸಿ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಿದ್ದಾರೆ. ಸಂಟಿತ ನಿರ್ವಹಣೆ ತಂಡದ ಯಶಸ್ಸಿಗೆ ಪ್ರಮುಖ ಕಾರಣ ಎನಿಸಿದೆ.
ಮೂರನೇ ಕ್ರಮಾಂಕದಲ್ಲಿ ರಾಹುಲ್!
ದೇಶೀಯ ಕ್ರಿಕೆಟ್ನಲ್ಲಿ ಕಡ್ಡಾಯವಾಗಿ ಆಡಬೇಕೆಂಬ ಬಿಸಿಸಿಐ ಮಾರ್ಗಸೂಚಿಯನ್ವಯ ಬ್ಯಾಟರ್ ಕೆಎಲ್ ರಾಹುಲ್ 5 ವರ್ಷಗಳ ಬಳಿಕ ರಣಜಿ ಟ್ರೋಫಿ ಪಂದ್ಯ ಆಡಲು ಸಜ್ಜಾಗಿದ್ದಾರೆ. 2020 ೆಬ್ರವರಿಯಲ್ಲಿ ಕೊನೆಯದಾಗಿ ರಣಜಿ ಪಂದ್ಯ ಆಡಿದ್ದ 32 ವರ್ಷದ ರಾಹುಲ್, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯಲಿದ್ದಾರೆ ಎಂದು ಕೋಚ್ ಯರೇ ಗೌಡ ಖಾತ್ರಿಪಡಿಸಿದ್ದಾರೆ.
ರಾಜ್ಯ ತಂಡದ ಪರ ಕಣಕ್ಕಿಳಿಯಲು ರಾಹುಲ್ಗೆ ಇದಕ್ಕಿಂತ ಸೂಕ್ತ ಸಮಯ ಬರಲು ಸಾಧ್ಯವಿಲ್ಲ. ಹರಿಯಾಣ ವಿರುದ್ಧ ಮೂರನೇ ಕ್ರಮಾಂಕದಲ್ಲಿ ರಾಹುಲ್ ಆಡಲಿದ್ದು, ಬ್ಯಾಟಿಂಗ್ ಕ್ರಮಾಂಕ್ಕೆ ಸಾಕಷ್ಟು ಅನುಭವವನ್ನು ತುಂಬಲಿದ್ದಾರೆ. ಜತೆಗೆ ಪಂದ್ಯದ ಪರಿಸ್ಥಿತಿ ತಕ್ಕಂತೆ ಯಾವ ಬ್ಯಾಟರ್ ಯಾವ ಕ್ರಮಾಂಕದಲ್ಲಿ ಸರಿ ಹೊಂದುತ್ತಾರೆ ಎಂಬುದನ್ನು ನಿರ್ಧರಿಸಲಾಗುವುದು ಎಂದು ಯರೇ ಗೌಡ ಮಾಹಿತಿ ನೀಡಿದರು. ಜತೆಗೆ ಗಾಯದಿಂದಾಗಿ ಕಳೆದ ಕೆಲ ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗಿದ್ದ ವಿದ್ವತ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು.
ಆರಂಭ: ಬೆಳಗ್ಗೆ 9.30
ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು (ಉಚಿತ ಪ್ರವೇಶ)
ನಾಕೌಟ್ ಲೆಕ್ಕಾಚಾರ
ಕರ್ನಾಟಕ ತಂಡ ನಾಕೌಟ್ ಹಂತಕ್ಕೇರಲು ಕೊನೇ ಪಂದ್ಯದಲ್ಲಿ ಬೋನಸ್ ಅಂಕ ಗಳಿಸಬೇಕಾದ ಒತ್ತಡದಲ್ಲಿ ಸಿಲುಕಿದೆ. ಅಂದರೆ ಇನಿಂಗ್ಸ್ ಅಥವಾ 10 ವಿಕೆಟ್ ಗೆಲುವು ಒಲಿಸಿಕೊಂಡರೆ ಅಷ್ಟೇ ಕ್ವಾರ್ಟರ್ೈನಲ್ ರೇಸ್ನಲ್ಲಿ ಉಳಿಯಲಿದ್ದು, ಜತೆಗೆ ಕೇರಳ ಹಾಗೂ ಬಿಹಾರ ನಡುವಿನ ಪಂದ್ಯದ ಲಿತಾಂಶದ ಮೇಲೆ ಭವಿಷ್ಯ ನಿರ್ಧರಿತವಾಗಲಿದೆ. ಕರ್ನಾಟಕ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು, 4ಡ್ರಾ ಸಾಧಿಸಿ 19 ಅಂಕದೊಂದಿಗೆ ಗುಂಪಿನ ಮೂರನೇ ಸ್ಥಾನದಲ್ಲಿದೆ. ಹರಿಯಾಣ 3 ಗೆಲುವು, 3 ಡ್ರಾ ಸಾಧಿಸಿ 26 ಪಾಯಿಂಟ್ಸ್ನೊಂದಿಗೆ ಅಗ್ರಸ್ಥಾನ, ಕೇರಳ 2 ಗೆಲುವು, 4 ಡ್ರಾದೊಂದಿಗೆ ಒಟ್ಟು 21 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಕೇರಳ ತಂಡ ತನ್ನ ಕೊನೇ ಪಂದ್ಯದಲ್ಲಿ ಸೋತರೆ ಅಥವಾ ಡ್ರಾಕ್ಕೆ ತೃಪ್ತಿಪಟ್ಟರಷ್ಟೇ ಕರ್ನಾಟಕ, ಹರಿಯಾಣ ಎದುರು ಸಾಮಾನ್ಯ ಗೆಲುವು ಕಂಡು ನಾಕೌಟ್ಗೇರಬಹುದಾಗಿದೆ. ಕೇರಳ ಗೆದ್ದರೆ ಕರ್ನಾಟಕ, ಹರಿಯಾಣ ಎದುರು 7 ಅಂಕ ಪಡೆಯಲೇಬೇಕು. ಆಗ ಹರಿಯಾಣ&ಕರ್ನಾಟಕ ಎರಡೂ ತಂಡಗಳು 26 ಅಂಕಗಳ ಸಮಬಲ ಸಾಧಿಸಲಿವೆ. ಹೆಚ್ಚಿನ ಬೋನಸ್ ಅಂಕ ಪಡೆದ ಆಧಾರದಲ್ಲಿ ಕರ್ನಾಟಕ ತಂಡ ಮುಂದಿನ ಸುತ್ತಿಗೇರುವ ಅವಕಾಶ ಹೊಂದಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್ೈನಲ್ಗೇರಲಿವೆ.