

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಬೌಲರ್ಗಳ ಅಬ್ಬರದ ಎದುರು ನಲುಗಿದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡಕ್ಕೆ ನಾಕೌಟ್ ಹಂತಕ್ಕೇರಲು ಮಹತ್ವದ್ದಾಗಿರುವ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ 9ನೇ ಹಾಗೂ ಅಂತಿಮ ಸುತ್ತಿನ ಲೀಗ್ ಪಂದ್ಯದಲ್ಲಿ ಪ್ರವಾಸಿ ಬರೋಡ ತಂಡದೆದುರು ಮೊದಲ ದಿನವೇ ಇನಿಂಗ್ಸ್ ಮುನ್ನಡೆಯ ಸಮಾಧಾನ ದೊರೆತಿದೆ. ಇದರಿಂದ ಕರ್ನಾಟಕಕ್ಕೆ ಕ್ವಾರ್ಟರ್ಫೈನಲ್ ಟಿಕೆಟ್ ಬಹುತೇಕ ಖಚಿತವೆನಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬರೋಡ ತಂಡ, ಅನುಭವಿ ವೇಗಿ ಅಭಿಮನ್ಯು ಮಿಥುನ್ (26ಕ್ಕೆ 3), ಕೆ.ಗೌತಮ್ (25ಕ್ಕೆ 3) ಹಾಗೂ ಪ್ರಸಿದ್ಧ ಕೃಷ್ಣ (7ಕ್ಕೆ 2) ಮಾರಕ ದಾಳಿಗೆ ಮುಗ್ಗರಿಸಿ ಭೋಜನ ವಿರಾಮಕ್ಕೂ ಮೊದಲೇ 85 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಸೊಯೆಬ್ ಸಪೊರಿಯಾರಿಂದ (40ಕ್ಕೆ 3) ತಿರುಗೇಟು ಎದುರಿಸಿದ ನಡುವೆಯೂ ಕರ್ನಾಟಕ ತಂಡ ಸಂಘಟಿತ ಬ್ಯಾಟಿಂಗ್ ನಿರ್ವಹಣೆಯಿಂದ ದಿನದಂತ್ಯಕ್ಕೆ 7 ವಿಕೆಟ್ಗೆ 165 ರನ್ ಕಲೆಹಾಕಿ 80 ರನ್ ಮುನ್ನಡೆ ಸಾಧಿಸಿದೆ. ಮೊದಲ ದಿನದಾಟದಲ್ಲೇ ಒಟ್ಟು 17 ವಿಕೆಟ್ಗಳು ಪತನಗೊಂಡಿದ್ದು, ಪಂದ್ಯದಲ್ಲಿ ಅಂತಿಮ ದಿನದಾಟಕ್ಕೂ ಮೊದಲೇ ಸ್ಪಷ್ಟ ಫಲಿತಾಂಶ ನಿಶ್ಚಿತವೆನಿಸಿದೆ.
ಅಂತಿಮ ಎಂಟರ ಘಟ್ಟಕ್ಕೇರುವ ಲೆಕ್ಕಾಚಾರದಲ್ಲಿ ಕರ್ನಾಟಕಕ್ಕೆ ಕನಿಷ್ಠ ಇನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕ ಅಗತ್ಯವೆನಿಸಿದೆ. ಸದ್ಯ ಮುನ್ನಡೆ ಸಾಧ್ಯವಾಗಿದ್ದರೂ, ಪಂದ್ಯದಲ್ಲಿ ನಾಟಕೀಯ ತಿರುವಿನಿಂದಾಗಿ ಸೋಲು ಕಾಣದ ಹೊರತಾಗಿ ರಾಜ್ಯಕ್ಕೆ ನಾಕೌಟ್ ಟಿಕೆಟ್ ಖಚಿತವೆನ್ನಬಹುದಾಗಿದೆ.
ಬರೋಡ ತಂಡದ ಪ್ರತಿಹೋರಾಟ: ಪ್ರವಾಸಿ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದ ಬಳಿಕ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ತಂಡದ ಭರವಸೆಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದ ದೇವದತ್ ಪಡಿಕಲ್ (6) ಹಾಗೂ ಉಪನಾಯಕನ ಜವಾಬ್ದಾರಿ ಹೊತ್ತಿರುವ ಆರ್.ಸಮರ್ಥ್ (11) ಜೋಡಿ ಮಂದಗತಿಯಲ್ಲೇ ಆರಂಭ ಕಂಡರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಭಿಮನ್ಯುಸಿಂಗ್ ರಜಪೂತ್ ಎಸೆತವನ್ನು ಎದುರಿಸಲು ವಿಫಲರಾದ ದೇವದತ್ ಬೌಲ್ಡ್ ಆದರು. ಇದರೊಂದಿಗೆ ಕರ್ನಾಟಕ ಮೊದಲ ಆಘಾತ ಎದುರಿಸಿತು. ಬಳಿಕ ಸಮರ್ಥ್ ಕೂಡ ರಜಪೂತ್ಗೆ ವಿಕೆಟ್ ಒಪ್ಪಿಸಿದರು. ಇದರಿಂದ 27 ರನ್ಗಳಿಗೆ ಆರಂಭಿಕರನ್ನು ಕಳೆದುಕೊಂಡ ಕರ್ನಾಟಕ ತಂಡ ಆಘಾತ ಎದುರಿಸಿತು.
ಟಾಸ್ ಜಯಿಸಿದ ನಾಯಕ ಕರುಣ್ ನಾಯರ್ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಬಳಿಕ ರಾಜ್ಯದ ವೇಗಿಗಳು ಮಾರಕ ದಾಳಿ ಮೂಲಕ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು. ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ವೇಗಿ ಪ್ರಸಿದ್ಧ ಕೃಷ್ಣ ಆರಂಭದಲ್ಲೇ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು. ಇನಿಂಗ್ಸ್ನ 4ನೇ ಓವರ್ನಲ್ಲೇ ಕೇದಾರ್ ದೇವಧರ್ (3) ವಿಕೆಟ್ ಕಬಳಿಸುವ ಮೂಲಕ ಬರೋಡ ಕುಸಿತಕ್ಕೆ ಮುನ್ನುಡಿ ಬರೆದರು. ತವರು ನೆಲದ ಪಿಚ್ ಮರ್ಮ ಅರಿತಿದ್ದ ರಾಜ್ಯದ ವೇಗಿಗಳು ಬರೋಡ ಬ್ಯಾಟಿಂಗ್ ಪಡೆ ಸುಧಾರಿಸದಂತೆ ನೋಡಿಕೊಂಡರು. ಆರಂಭಿಕ ಅಹ್ಮದ್ನೂರ್ ಪಠಾಣ್ (45ರನ್, 83 ಎಸೆತ, 8 ಬೌಂಡರಿ) ಹಾಗೂ ದೀಪಕ್ ಹೂಡಾ (20ರನ್, 39 ಎಸೆತ, 3 ಬೌಂಡರಿ) ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು ಕನಿಷ್ಠ ಎರಡಂಕಿ ಮೊತ್ತ ಮುಟ್ಟಲು ವಿಫಲರಾದರು. ಪ್ರವಾಸಿದ ತಂಡದ ಐವರು ಬ್ಯಾಟ್ಸ್ಮನ್ಗಳು ಶೂನ್ಯ ಸುತ್ತಿದರು. ಭೋಜನ ವಿರಾಮನಕ್ಕೂ ಮೊದಲೇ ಬರೋಡ ತಂಡ ಸರ್ವಪತನ ಕಂಡಿತು. ಭೋಜನ ವಿರಾಮವನ್ನು 30 ನಿಮಿಷ ಮುಂದೂಡಿದ್ದರೂ ಆರಂಭ 12ನೇ ನಿಮಿಷಗಳಲ್ಲಿ ಬರೋಡ ತಂಡಕ್ಕೆ ಕಡಿವಾಣ ಹಾಕಿದರು.
ಪ್ರವಾಸಿ ತಂಡದ ವೇಗಿ ಸೊಯೆಬ್ ಸಪೊರಿಯಾ ನೀಡಿದ ಆಘಾತದಿಂದ ತತ್ತರಿಸಿದ್ದ ಆತಿಥೇಯ ತಂಡಕ್ಕೆ ಕೆ.ಗೌತಮ್ (27 ರನ್, 16 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಜೋಡಿ ಕೆಲಕಾಲ ಆಸರೆಯಾಯಿತು. 2 ಭರ್ಜರಿ ಸಿಕ್ಸರ್ ಸಿಡಿಸಿ ನೆರದಿದ್ದ ಅಭಿಮಾನಿಗಳನ್ನು ರಂಜಿಸಿದ ಗೌತಮ್ ಉತ್ತಮ ಲಯದಲ್ಲಿ ರುವಾಗಲೇ ಸೊಯೆಬ್ಗೆ ವಿಕೆಟ್ ನೀಡಿದರು. ಬಳಿಕ ಶರತ್ ಹಾಗೂ ಮಿಥುನ್ ಜೋಡಿ ಮುರಿಯದ 8ನೇ ವಿಕೆಟ್ಗೆ 23 ರನ್ ಕಲೆಹಾಕಿದೆ.
ಆರಂಭಿಕರ ನಿರ್ಗಮನದ ಬಳಿಕ ಜತೆಯಾಟ ಕೆವಿ ಸಿದ್ದಾರ್ಥ್ (29 ರನ್, 72 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಕರುಣ್ ನಾಯರ್ (47ರನ್, 75 ಎಸೆತ, 5 ಬೌಂಡರಿ) ಜೋಡಿ ಇನಿಂಗ್ಸ್ ಕಟ್ಟಲು ಯತ್ನಿಸಿತು. ತಂಡಕ್ಕೆ ಇನಿಂಗ್ಸ್ ಮುನ್ನಡೆ ದೊರಕಿದ ಬೆನ್ನಲ್ಲೇ ಭಾರ್ಗವ್ ಭಟ್ ಎಸೆತದಲ್ಲಿ ದುಡುಕಿದ ಸಿದ್ದಾರ್ಥ್, ಪಾರ್ಥ ಕೊಹ್ಲಿಗೆ ಕ್ಯಾಚ್ ನೀಡಿದರು. ಈ ವೇಳೆಗೆ ಸಿದ್ದಾರ್ಥ್ -ಕರುಣ್ ಜೋಡಿ 3ನೇ ವಿಕೆಟ್ಗೆ 61 ರನ್ ಕಲೆಹಾಕಿತ್ತು. ಟೂರ್ನಿಯುದ್ದಕ್ಕೂ ನಿರಾಸೆ ಮೂಡಿಸಿದ್ದ ಕರುಣ್ ನಾಯರ್ ಆಕರ್ಷಕ ಹೊಡೆತಗಳ ಮೂಲಕ ಕೆಲಕಾಲ ಗಮನಸೆಳೆದರು. ಪವನ್ ದೇಶಪಾಂಡೆ ಜತೆಗೂಡಿ ಉತ್ತಮ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿದ್ದ ಕರ್ನಾಟಕ ತಂಡದ ನಾಯಕನಿಗೆ ವೇಗಿ ಸೊಯೆಬ್ ಸಪೊರಿಯಾ ಆಘಾತ ನೀಡಿದರು. ಇದಾದ ಕೆಲಹೊತ್ತಿನಲ್ಲೇ ಸತತ 2 ಬೌಂಡರಿ ಸಿಡಿಸಿ ಗಮನಸೆಳೆದಿದ್ದ ಪವನ್ ದೇಶಪಾಂಡೆ ಕೂಡ ಸೊಯೆಬ್ ಎಸೆತದಲ್ಲಿ ವಿಕೆಟ್ ಕೀಪರ್ ವಿರಾಜ್ ಬೊಸಳೆಗೆ ಕ್ಯಾಚ್ ನೀಡಿದರು. ಬಳಿಕ ಮರು ಎಸೆತದಲ್ಲೇ ಶ್ರೇಯಸ್ ಗೋಪಾಲ್ ಕೂಡ ನಿರಾಸೆ ಕಂಡರು. ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡುವ ಮೂಲಕ ಗೋಲ್ಡನ್ ಡಕ್ ಆದರು. ಈ ವೇಳೆ ಕರ್ನಾಟಕ ತಂಡ 110 ರನ್ಗಳಿಗೆ 6 ವಿಕೆಟ್ ಕೈಚೆಲ್ಲಿತು.
33.5 ಓವರ್ಗಳಲ್ಲಿ 85ಕೇದಾರ್ ದೇವಧರ್ ಸಿ ಸಮರ್ಥ್ ಬಿ ಪ್ರಸಿದ್ಧ 3ಎ. ಪಠಾಣ್ ಸಿ ಪವನ್ ಬಿ ಕೆ. ಗೌತಮ್45ವಿ. ಸೋಲಂಕಿ ಸಿ ಸಮರ್ಥ್ ಬಿ ಪ್ರಸಿದ್ಧಕೃಷ್ಣ 0ದೀಪಕ್ ಹೂಡ ಸಿ ಪವನ್ ಬಿ ಮಿಥುನ್ 20ಕೃನಾಲ್ ಪಾಂಡ್ಯ ಸಿ ಪ್ರವೀಣ್ ಬಿ ಮಿಥುನ್ 0ಅಭಿಮನ್ಯು ರಜಪೂತ್ ಸಿ ಶರತ್ ಬಿ ಮಿಥುನ್ 0ಪಾರ್ಥ ಕೊಹ್ಲಿ ಸಿ ರೋನಿತ್ ಬಿ ಕೆ. ಗೌತಮ್0ವಿರಾಜ್ ಬೋಸಲೆ ಬಿ ಕೆ. ಗೌತಮ್3ಭಾರ್ಗವ್ ಭಟ್ ರನೌಟ್(ಶ್ರೇಯಸ್/ಶರತ್) 0ಸೋಪರಿಯಾ ಬಿ ಶ್ರೇಯಸ್ ಗೋಪಾಲ್ 6ಬಾಬಾಶಫಿ ಪಠಾಣ್ ಔಟಾಗದೆ 6
ಇತರ: 2. ವಿಕೆಟ್ ಪತನ: 1-7, 2-11, 3-38, 4-38, 5-38, 6-43, 7-51, 8-56, 9-73. ಬೌಲಿಂಗ್: ಅಭಿಮನ್ಯು ಮಿಥುನ್ 11-2-26-3, ಪ್ರಸಿದ್ಧಕೃಷ್ಣ 6-1-7-2, ರೋನಿತ್ ಮೋರೆ 7-1-22-0, ಕೆ. ಗೌತಮ್ 9-3-25-3, ಶ್ರೇಯಸ್ ಗೋಪಾಲ್ 0.5-0-4-1.
52 ಓವರ್ಗಳಲ್ಲಿ 7 ವಿಕೆಟ್ಗೆ 165 ಆರ್. ಸಮರ್ಥ್ ಸಿ ಬೋಸಲೆ ಬಿ ರಜಪೂತ್ 11 ದೇವದತ್ ಪಡಿಕಲ್ ಬಿ ರಜಪೂತ್ 6 ಕೆವಿ ಸಿದ್ಧಾರ್ಥ್ ಸಿ ಪಾರ್ಥ ಬಿ ಭಾರ್ಗವ್ 29 ಕರುಣ್ ನಾಯರ್ ಬಿ ಭಾರ್ಗವ್ ಭಟ್ 47 ಪವನ್ ದೇಶಪಾಂಡೆ ಸಿ ಬೋಸಲೆ ಬಿ ಸೋಪರಿಯ 15 ಶರತ್ ಶ್ರೀನಿವಾಸ್ ಬ್ಯಾಟಿಂಗ್ 19 ಶ್ರೇಯಸ್ ಸಿ ಬೋಸಲೆ ಬಿ ಸೋಪರಿಯಾ 0 ಕೆ. ಗೌತಮ್ ಸಿ ಪಾರ್ಥ ಬಿ ಸೋಪರಿಯಾ 27 ಅಭಿಮನ್ಯು ಮಿಥುನ್ ಬ್ಯಾಟಿಂಗ್ 9 ಇತರ: 2. ವಿಕೆಟ್ ಪತನ: 1-18, 2-27, 3-88, 4-102, 5-110, 6-110, 7-142. ಬೌಲಿಂಗ್: ಬಾಬಾಶಫಿ ಪಠಾಣ್ 3.5-1-10-0, ಸೊಯೆಬ್ ಸೋಪರಿಯಾ 14-4-40-3, ಅಭಿಮನ್ಯು ರಜಪೂತ್ 7.1-3-17-2, ಭಾರ್ಗವ್ ಭಟ್ 18-2-67-2, ವಿಷ್ಣು ಸೋಲಂಕಿ 8-0-30-0, ಕೃನಾಲ್ ಪಾಂಡ್ಯ 1-0-1-0.
| ರಘುನಾಥ್ ಡಿ.ಪಿ. ಬೆಂಗಳೂರು