

ಅಗರ್ತಲ: ವೇಗಿ ವಾಸುಕಿ ಕೌಶಿಕ್ (34ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ತ್ರಿಪುರ ತಂಡಕ್ಕೆ ನಿಯಂತ್ರಣ ಹೇರಿದ್ದು, ಇನಿಂಗ್ಸ್ ಮುನ್ನಡೆಯ ಸನಿಹದಲ್ಲಿದೆ. ಎಂಬಿಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದ ಎರಡನೇ ದಿನವಾದ ಶನಿವಾರ ಆಟ ಆರಂಭಿಸಿದ ಕರ್ನಾಟಕ ತಂಡ, ಶುಕ್ರವಾರದ 241 ರನ್‌ಗಳಿಗೆ ಒಂದೂ ರನ್ ಪೇರಿಸದೆ ಮೊದಲ ಇನಿಂಗ್ಸ್‌ನಲ್ಲಿ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ತ್ರಿಪುರ ದಿನದಂತ್ಯಕ್ಕೆ 79 ಓವರ್‌ಗಳಲ್ಲಿ 9 ವಿಕೆಟ್‌ಗೆ 198 ರನ್‌ಗಳಿಸಿದ್ದು, ಇನ್ನೂ 43 ರನ್ ಹಿನ್ನಡೆಯಲ್ಲಿದೆ. ಅರ್ಧಶತಕ ಬಾರಿಸಿ ಪ್ರತಿರೋಧ ತೋರಿರುವ ಬಿಕ್ರಮ್‌ಜೀತ್ ದೇಬನಾಥ್ (57* ರನ್, 131 ಎಸೆತ, 7 ಬೌಂಡರಿ) ಜತೆಗೆ ಅಭಿಜೀತ್ ಸರ್ಕಾರ್ (5*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕರ್ನಾಟಕ: 78.4 ಓವರ್‌ಗಳಲ್ಲಿ 241. ತ್ರಿಪುರ: 79 ಓವರ್‌ಗಳಲ್ಲಿ 9 ವಿಕೆಟ್‌ಗೆ 198 (ಬಿಶಾಲ್ 44, ಗಣೇಶ್ ಸತೀಶ್ 6, ವೃದ್ಧಿಮಾನ್ ಸಾಹ 28, ಬಿಕ್ರಮ್‌ಜೀತ್ 57*, ಮಣಿಶಂಕರ್ 39, ವಿದ್ವತ್ 38ಕ್ಕೆ 2, ವಾಸುಕಿ ಕೌಶಿಕ್ 34ಕ್ಕೆ 4, ವೈಶಾಕ್ 64ಕ್ಕೆ 2).
ಕೌಶಿಕ್ ಬಿಗಿ ಬೌಲಿಂಗ್: ದಿನದ ಮೊದಲ ಓವರ್‌ನಲ್ಲಿ ಪ್ರವಾಸಿ ಕರ್ನಾಟಕ ತಂಡವನ್ನು ಆಲೌಟ್ ಬಲೆಗೆ ಕೆಡವಿದ ತ್ರಿಪುರ ತಂಡಕ್ಕೆ ವೇಗಿ ವಾಸುಕಿ ಕೌಶಿಕ್ ನಿಯಂತ್ರಣ ಹೇರಿದರು. ಆರಂಭಿಕ ಬಿಕ್ರಮ್ ಕುಮಾರ್ ದಾಸ್ (4), ಶ್ರೀದಮ್ ಪೌಲ್ (1) ವಿಕೆಟ್ ಉರುಳಿಸಿದ ಕೌಶಿಕ್ ಕರ್ನಾಟಕಕ್ಕೆ ಮೇಲುಗೈ ತಂದರು. ಇವರಿಗೆ ವೇಗಿಗಳಾದ ವೈಶಾಕ್ ವಿಜಯ್ ಕುಮಾರ್ (64ಕ್ಕೆ 2), ವಿದ್ವತ್ ಕಾವೇರಪ್ಪ (38ಕ್ಕೆ 2) ತಲಾ ಒಂದು ವಿಕೆಟ್ ಪಡೆದು ಸಾಥ್ ನೀಡಿದರು. 96 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ತ್ರಿಪುರ ಪರ ಆರನೇ ವಿಕೆಟ್‌ಗೆ ಜತೆಯಾದ ಬಿಕ್ರಮ್‌ಜೀತ್ ಹಾಗೂ ಮುರ‌್ರಾ ಸಿಂಗ್ (39) ಜೋಡಿ 76 ರನ್‌ಗಳಿಸಿ ಚೇತರಿಕೆ ನೀಡಿತು.