

ಬೆಂಗಳೂರು: ಸರಿಸುಮಾರು ಒಂದೂವರೆ ದಶಕದ ಬಳಿಕ ಟೀಮ್ ಇಂಡಿಯಾದ ಸಾರಥ್ಯ ಕನ್ನಡಿಗರಿಗೆ ಒಲಿದು ಬಂದಿದೆ. ರೋಹಿತ್ ಶರ್ಮ ಗೈರಿನಲ್ಲಿ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋಚ್-ಕ್ಯಾಪ್ಟನ್ ಇಬ್ಬರೂ ಕನ್ನಡಿಗರು ಆದಂತಾಗಿದೆ. ದಿಗ್ಗಜ ರಾಹುಲ್ ದ್ರಾವಿಡ್ ಈಗಾಗಲೆ ಮುಖ್ಯ ಕೋಚ್ ಆಗಿ ತಂಡದ ಜತೆಗಿದ್ದಾರೆ.
ಸದ್ಯ ರಾಹುಲ್‌ಗೆ ಹಂಗಾಮಿ ನಾಯಕತ್ವ ಒಲಿದಿದ್ದರೂ, ಭವಿಷ್ಯದಲ್ಲಿ ಅವರೇ ಪೂರ್ಣಪ್ರಮಾಣದ ನಾಯಕರಾಗುವ ಸೂಚನೆಯನ್ನು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ನೀಡಿದ್ದಾರೆ. ‘ಕೆಎಲ್ ರಾಹುಲ್ ಅವರನ್ನು ತಂಡದ ಸಮರ್ಥ ನಾಯಕರನ್ನಾಗಿ ತಯಾರು ಮಾಡುವತ್ತ ಗಮನಹರಿಸಿದ್ದೇವೆ. ನಾಯಕತ್ವ ಗುಣವನ್ನು ಅವರು ಈಗಾಗಲೆ ಸಾಬೀತುಪಡಿಸಿದ್ದಾರೆ. ಅವರು ತಂಡವನ್ನು ನಿಭಾಯಿಸಲು ಅತ್ಯುತ್ತಮ ಆಯ್ಕೆಯಾಗಿದ್ದಾರೆ’ ಎಂದು ಚೇತನ್ ಶರ್ಮ ಹೇಳಿದ್ದಾರೆ.
29 ವರ್ಷದ ಕೆಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸಲಿರುವ 5ನೇ ಕನ್ನಡಿಗ. ಜಿಆರ್ ವಿಶ್ವನಾಥ್, ಸಯ್ಯದ್ ಕಿರ್ಮಾನಿ, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಹಿಂದಿನ ಸಾಧಕರು. ಜಿಆರ್ ವಿಶ್ವನಾಥ್ 1981ರಲ್ಲಿ ಏಕೈಕ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿ ಸೋಲು ಕಂಡಿದ್ದರು. ಬಳಿಕ 1983ರಲ್ಲಿ ಸಯ್ಯದ್ ಕಿರ್ಮಾನ್ ಕೂಡ ಏಕೈಕ ಏಕದಿನಕ್ಕೆ ನಾಯಕರಾಗಿ ಸೋತಿದ್ದರು. ದ್ರಾವಿಡ್ 2000ದಲ್ಲಿ ಮೊದಲ ಬಾರಿಗೆ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಿದ್ದರೆ, 2005ರಿಂದ 2007ರವರೆಗೆ ಪೂರ್ಣ ಪ್ರಮಾಣದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ 79 ಏಕದಿನ ಪಂದ್ಯ ಆಡಿ 41 ಜಯ, 33 ಸೋಲು ಮತ್ತು 4 ರದ್ದು ಕಂಡಿತ್ತು. ಈ ನಡುವೆ ಅನಿಲ್ ಕುಂಬ್ಳೆ 2002ರಲ್ಲಿ ಏಕೈಕ ಏಕದಿನ ಪಂದ್ಯದಲ್ಲಿ ನಾಯಕರಾಗಿ ಗೆಲುವು ಕಂಡಿದ್ದರು.
ಟೆಸ್ಟ್ ತಂಡಕ್ಕೆ ಜಿಆರ್ ವಿಶ್ವನಾಥ್, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ನಾಯಕರಾಗಿರುವ ಮೂವರು ಕನ್ನಡಿಗರು. ಭಾರತ ಟಿ20 ತಂಡವನ್ನು ಮಾತ್ರ ಕನ್ನಡಿಗರು ಇದುವರೆಗೂ ಮುನ್ನಡೆಸಿಲ್ಲ. 1980ರಲ್ಲಿ ಜಿಆರ್ ವಿಶ್ವನಾಥ್ ಸಾರಥ್ಯದ 2 ಟೆಸ್ಟ್‌ಗಳಲ್ಲಿ ಭಾರತ 1 ಸೋಲು ಮತ್ತು 1 ಡ್ರಾ ಕಂಡಿತ್ತು. 2003ರಲ್ಲಿ ಮೊದಲ ಬಾರಿ ಹಂಗಾಮಿ ಟೆಸ್ಟ್ ನಾಯಕರಾಗಿದ್ದ ದ್ರಾವಿಡ್, 2005ರಿಂದ 2007ರವರೆಗೆ ಪೂರ್ಣ ಪ್ರಮಾಣದ ಟೆಸ್ಟ್ ನಾಯಕರಾಗಿದ್ದರು. 25 ಟೆಸ್ಟ್‌ಗಳಲ್ಲಿ ಅವರು 8 ಜಯ, 6 ಸೋಲು ಮತ್ತು 11 ಡ್ರಾ ಕಂಡಿದ್ದರು. ಅನಿಲ್ ಕುಂಬ್ಳೆ 2007-08ರಲ್ಲಿ 14 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿ 3 ಜಯ, 5 ಸೋಲು ಮತ್ತು 6 ಡ್ರಾ ಕಂಡಿದ್ದರು.