

ನವದೆಹಲಿ: ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಂಟರಘಟ್ಟದ ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲಿದೆ. ಪಾಲಂನ ಏರ್ ಫೋರ್ಸ್ ಮೈದಾನದಲ್ಲಿ ಸೋಮವಾರ ಪಂದ್ಯ ನಡೆಯಲಿದೆ. ಬೆಂಗಳೂರಿನಲ್ಲಿ ನಡೆದ ಲೀಗ್ ಹಂತದಲ್ಲಿ ಹೋರಾಟದಲ್ಲಿ ಕರ್ನಾಟಕ ತಂಡ ಕೇರಳ ಎದುರು ಸುಲಭ ಜಯ ದಾಖಲಿಸಿತ್ತು. ಇದೀಗ ಮನೀಷ್ ಪಾಂಡೆ ಹಾಗೂ ಕೆ.ಗೌತಮ್ ಸೇರ್ಪಡೆಯಿಂದ ತಂಡದ ಬಲ ಹೆಚ್ಚಿಸಿದೆ. ಆದರೆ, ನಾಯಕ ಆರ್.ಸಮರ್ಥ್ ಹಾಗೂ ತಂಡದ ಆಡಳಿತ ಮಂಡಳಿಗೆ ಹನ್ನೊಂದರ ಬಳಗದ ಆಯ್ಕೆಯೇ ಗೊಂದಲ ಸೃಷ್ಟಿಸಿದೆ.
ಲೀಗ್‌ನಲ್ಲಿ ಉತ್ತರ ಪ್ರದೇಶ ಎದುರು ವಿಜೆಡಿ ನಿಯಮದನ್ವಯ ಸೋಲನುಭವಿಸಿದ ಬಳಿಕ ಸತತ 4 ಪಂದ್ಯಗಳಲ್ಲಿ ಜಯದಾಖಲಿಸಿದ್ದ ಕರ್ನಾಟಕ ತಂಡ ಎಲೈಟ್ ಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಾಯಕ ಆರ್.ಸಮರ್ಥ್ ಹಾಗೂ ದೇವದತ್ ಪಡಿಕಲ್ ಜೋಡಿ ರನ್‌ಹೊಳೆಯನ್ನೇ ಹರಿಸುತ್ತಿದೆ. ಕೆ.ವಿ.ಸಿದ್ಧಾರ್ಥ್ ಮೂರನೇ ಕ್ರಮಾಂಕದಲ್ಲಿ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದುವರೆಗೂ ಅಗ್ರಕ್ರಮಾಂಕದ ಬ್ಯಾಟಿಂಗ್ ವಿಭಾಗವೇ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಮಿಥುನ್, ಪ್ರಸಿದ್ಧ್ ಕೃಷ್ಣ, ಜೆ.ಸುಚಿತ್, ಶ್ರೇಯಸ್ ಗೋಪಾಲ್ ಒಳಗೊಂಡ ಬೌಲಿಂಗ್ ಪಡೆ ಉತ್ತಮ ನಿರ್ವಹಣೆ ತೋರುತ್ತಿದೆ. ಮತ್ತೊಂದೆಡೆ, ಕನ್ನಡಿಗ ರಾಬಿನ್ ಉತ್ತಪ್ಪ ಒಳಗೊಂಡ ಕೇರಳ ತಂಡ ಲೀಗ್ ಹಂತದಲ್ಲಿ ಕರ್ನಾಟಕ ಎದುರು ಏಕೈಕ ಸೋಲು ಕಂಡಿತ್ತು. ಉತ್ತಮ ರನ್‌ರೇಟ್ ಆದಾರದ ಮೇಲೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಕರ್ನಾಟಕದ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
* ಗುಜರಾತ್ ತಂಡಕ್ಕೆ ಆಂಧ್ರ ಎದುರಾಳಿ: ಅರುಣ್ ಜೇಟ್ಲೆ ಮೈದಾನದಲ್ಲಿ ನಡೆಯಲಿರುವ ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ ಗುಜರಾತ್ ಹಾಗೂ ಆಂಧ್ರ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ