ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ ಸುಲಭ ತುತ್ತಾದ ಬಿಹಾರ

samarth and padikal for web
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಾಯಕ ಆರ್. ಸಮರ್ಥ್ (158*ರನ್, 144 ಎಸೆತ, 15 ಬೌಂಡರಿ, 1 ಸಿಕ್ಸರ್) ಅಜೇಯ ಶತಕದಾಟದ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಹಳಿಗೇರಿತು. ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 267 ರನ್‌ಗಳಿಂದ ಬಿಹಾರ ತಂಡವನ್ನು ಮಣಿಸಿತು. ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ದಾಖಲಿಸಿದ ದಾಖಲೆ ಅಂತರದ ಗೆಲುವು ಇದಾಗಿದೆ. ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ಎದುರು ಮಳೆಯಿಂದಾಗಿ ವಿಜೆಡಿ ನಿಯಮದನ್ವಯ 9 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿದ್ದ ಕರ್ನಾಟಕ ತಂಡ ಭರ್ಜರಿ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ಸಮರ್ಥ್ ಜತೆಗೆ ದೇವದತ್ ಪಡಿಕಲ್ (97 ರನ್, 98 ಎಸೆತ, 8ಬೌಂಡರಿ, 2 ಸಿಕ್ಸರ್) ಹಾಗೂ ಕೆವಿ ಸಿದ್ಧಾರ್ಥ್ (76ರನ್, 55 ಎಸೆತ, 5 ಬೌಂಡರಿ, 4 ಸಿಕ್ಸರ್) ತೋರಿದ ಬಿರುಸಿನ ಬ್ಯಾಟಿಂಗ್ ಬಲದಿಂದ 3 ವಿಕೆಟ್‌ಗೆ 354 ರನ್ ಕಲೆಹಾಕಿತು. ಪ್ರತಿಯಾಗಿ ವೇಗಿ ಪ್ರಸಿದ್ಧ್ ಕೃಷ್ಣ (17ಕ್ಕೆ 4) ಮಾರಕ ದಾಳಿಗೆ ನಲುಗಿದ ಬಿಹಾರ ತಂಡ 27.2 ಓವರ್‌ಗಲ್ಲಿ 87 ರನ್‌ಗಳಿಗೆ ಸರ್ವಪತನ ಕಂಡಿತು.

ಕರ್ನಾಟಕ: 3 ವಿಕೆಟ್‌ಗೆ 354 (ಸಮರ್ಥ್ 158, ದೇವದತ್ ಪಡಿಕಲ್ 97, ಸಿದ್ಧಾರ್ಥ್ 76, ಅನುಜ್ ರಾಜ್ 68ಕ್ಕೆ 2, ರಾಹುಲ್ ಕುಮಾರ್ 69ಕ್ಕೆ 1), ಬಿಹಾರ: 27.2 ಓವರ್‌ಗಳಲ್ಲಿ 87 (ಸಬಿಕುಲ್ ಗಾನಿ 37, ಅಶುತೋಷ್ ಅಮಾನ್ 11, ಅಭಿಮನ್ಯು ಮಿಥುನ್ 7ಕ್ಕೆ 2, ಪ್ರಸಿದ್ಧ್ ಕೃಷ್ಣ 17ಕ್ಕೆ 4, ಶ್ರೇಯಸ್ ಅಯ್ಯರ್ 22ಕ್ಕೆ 2).

ಕರ್ನಾಟಕಕ್ಕೆ ಮುಂದಿನ ಪಂದ್ಯ

ಎದುರಾಳಿ: ಒಡಿಶಾ

ಯಾವಾಗ: ಬುಧವಾರ

ಎಲ್ಲಿ: ಆಲೂರಿನ ಕೆಎಸ್‌ಸಿಎ ಮೈದಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net