ಮತ್ತೊಮ್ಮೆ ರಾಜ್ಯ ವೇಗಿಗಳ ಮಿಂಚು, ಚಿಗುರೊಡೆದ ಗೆಲುವಿನ ಆಸೆ; ಕರ್ನಾಟಕ ತಂಡಕ್ಕೆ ಅಮೂಲ್ಯ ಇನಿಂಗ್ಸ್ ಮುನ್ನಡೆ

KARNATAKA
Published on

ಮುಂಬೈ: ಆರಂಭಿಕ ಆರ್.ಸಮರ್ಥ್ (86 ರನ್, 139 ಎಸೆತ, 13 ಬೌಂಡರಿ) ಜವಾಬ್ದಾರಿಯುತ ಇನಿಂಗ್ಸ್ ಹಾಗೂ ಅನುಭವಿ ವೇಗಿ ಅಭಿಮನ್ಯು ಮಿಥುನ್ (52ಕ್ಕೆ 3) ಮಾರಕ ದಾಳಿ ನೆರವಿನಿಂದ ಪ್ರವಾಸಿ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಮುಂಬೈ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಸಮರ್ಥ್ ಜತೆಗೆ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಬಿಆರ್ ಶರತ್ (46 ರನ್, 54 ಎಸೆತ, 7 ಬೌಂಡರಿ, 1 ಸಿಕ್ಸರ್) ಅಲ್ಪ ಕಾಣಿಕೆ ನೆರವಿನಿಂದ 24 ರನ್​ಗಳ ಅಮೂಲ್ಯ ಇನಿಂಗ್ಸ್ ಮುನ್ನಡೆ ದಕ್ಕಿಸಿಕೊಂಡಿರುವ ಕರ್ನಾಟಕ ತಂಡ, 2ನೇ ಸರದಿಯಲ್ಲೂ ಮುಂಬೈ ತಂಡಕ್ಕೆ ಕಡಿವಾಣ ಹೇರುವ ಮೂಲಕ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದೆ.

ಬಾಂದ್ರಾ ಕುರ್ಲಾದಲ್ಲಿರುವ ಶರದ್ ಪವಾರ್ ಮೈದಾನದಲ್ಲಿ 3 ವಿಕೆಟ್​ಗೆ 79 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಕರ್ನಾಟಕ, ಶಶಾಂಕ್ (58ಕ್ಕೆ 5) ಮಾರಕ ದಾಳಿಗೆ ನಲುಗಿ 218 ರನ್​ಗಳಿಗೆ ಸರ್ವಪತನ ಕಂಡಿತು. ಬಳಿಕ 2ನೇ ಸರದಿ ಬ್ಯಾಟಿಂಗ್ ಆರಂಭಿಸಿದ ಮುಂಬೈ, ದಿನದಂತ್ಯಕ್ಕೆ 5 ವಿಕೆಟ್​ಗೆ 109 ರನ್ ಪೇರಿಸಿದ್ದು, ಒಟ್ಟಾರೆ 85 ರನ್ ಮುನ್ನಡೆಯಲ್ಲಿದೆ. ಮುಂಬೈ ಮೊದಲ ಇನಿಂಗ್ಸ್​ನಲ್ಲಿ 194 ರನ್​ಗಳಿಸಿತ್ತು.

ಮುಂಬೈಗೆ ಮತ್ತೆ ಕಾಡಿದ ವೇಗಿಗಳು: ಇನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಸರದಿ ಆರಂಭಿಸಿದ ಆತಿಥೇಯ ತಂಡಕ್ಕೆ ಕರ್ನಾಟಕದ ವೇಗಿಗಳು ಮತ್ತೊಮ್ಮೆ ಕಂಟಕವಾದರು. ಪೃಥ್ವಿ ಷಾ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಇಳಿದ ರಾಷ್ಟ್ರೀಯ ಟೆಸ್ಟ್ ತಂಡದ ಬ್ಯಾಟ್ಸ್​ಮನ್ ಅಜಿಂಕ್ಯ ರಹಾನೆ (1) ಮಿಥುನ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಮಿಥುನ್ ಮರು ಓವರ್​ನಲ್ಲೇ ಸಿದ್ದೇಶ್ ಲಾಡ್​ಗೂ (4) ಪೆವಿಲಿಯನ್ ದಾರಿ ತೋರಿದರು. ಮಿಥುನ್​ಗೆ ಮತ್ತೋರ್ವ ವೇಗಿ ವಿ.ಕೌಶಿಕ್ ಅಗತ್ಯ ಸಾಥ್ ನೀಡಿದರು. ಮೊದಲ ಇನಿಂಗ್ಸ್​ನಲ್ಲಿ ಬಿರುಸಿನ ಅರ್ಧಶತಕ ಸಿಡಿಸಿದ್ದ ನಾಯಕ ಸೂರ್ಯಕುಮಾರ್ ಯಾದವ್ (10) ಕೂಡ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಈ ಜೋಡಿಯ ಮಾರಕ ದಾಳಿ ಫಲವಾಗಿ ಮುಂಬೈ ತಂಡ 26 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಸರ್ಫ್ರಾಜ್, ಮುಲಾನಿ ಆಸರೆ: ಅಗ್ರ ಕ್ರಮಾಂಕದ ವೈಫಲ್ಯದಿಂದ ತತ್ತರಿಸಿದ್ದ ಆತಿಥೇಯ ತಂಡಕ್ಕೆ ಯುವ ಬ್ಯಾಟ್ಸ್​ಮನ್​ಗಳಾದ ಸರ್ಫ್ರಾಜ್ ಖಾನ್ (53*ರನ್) ಹಾಗೂ ಶಮ್್ಸ ಮುಲಾನಿ (31) ಜೋಡಿ ಆಸರೆಯಾಯಿತು. ಸಂಪೂರ್ಣ ಮಂದಗತಿ ಬ್ಯಾಟಿಂಗ್​ಗೆ ಮುಂದಾದ ಈ ಜೋಡಿ ಸುಮಾರು ಒಂದೂವರೆ ಅವಧಿ ಕ್ರೀಸ್​ನಲ್ಲಿ ನಿಲ್ಲುವ ಮೂಲಕ ಕರ್ನಾಟಕದ ಬೌಲರ್​ಗಳಿಗೆ ಸವಾಲಾಯಿತು. ಈ ಜೋಡಿ 5ನೇ ವಿಕೆಟ್​ಗೆ 83 ರನ್ ಜತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಕೌಶಿಕ್ ಎಸೆದ ದಿನದಾಟದ ಅಂತಿಮ ಓವರ್​ನ ಅಂತಿಮ ಎಸೆತದಲ್ಲಿ ಮುಲಾನಿ ವಿಕೆಟ್ ನೀಡಿದರು.

ಎರಡನೇ ದಿನದಾಟವೂ ರದ್ದು

ಮಳೆ, ಮಂದ ಬೆಳಕಿನಿಂದಾಗಿ ಅಗರ್ತಲಾದಲ್ಲಿ ನಿಗದಿಯಾಗಿರುವ ತ್ರಿಪುರಾ-ಒಡಿಶಾ ಹಾಗೂ ಕಟನ್​ನಲ್ಲಿ ನಡೆಯಬೇಕಿರುವ ಸಿಕ್ಕಿ- ಅರುಣಾಚಲ ಪ್ರದೇಶ ನಡುವಿನ ಪ್ಲೇಟ್ ಹಂತದ 4ನೇ ಸುತ್ತಿನ 2ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಮೇಘಾಲಯದ ಸಂಜಯ್ ಯಾದವ್ (31ಕ್ಕೆ 8), ಹರಿಯಾಣದ ಅಜಿತ್ ಚಾಹಲ್ (25ಕ್ಕೆ 5), ಮಹಾರಾಷ್ಟ್ರದ ಮನೋಜ್ ಇಂಗಳೆ (73ಕ್ಕೆ 5) ಐದು ವಿಕೆಟ್ ಗೊಂಚಲು ಪಡೆದರು.

ಪೃಥ್ವಿ ಷಾಗೆ ಎನ್​ಸಿಎ ಬುಲಾವ್

ಭುಜದ ನೋವಿಗೆ ತುತ್ತಾಗಿರುವ ಪೃಥ್ವಿ ಷಾಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ಬುಲಾವ್ ನೀಡಿದೆ. ಭುಜದ ನೋವಿನ ಪ್ರಮಾಣ ಪರಿಶೀಲಿಸುವ ಸಲುವಾಗಿಯೇ ಎನ್​ಸಿಎ ಷಾ ಅವರನ್ನು ಕರೆಸಿದೆ ಎಂದು ತಿಳಿದು ಬಂದಿದೆ. ಮುಂಬೈ ತಂಡದ ಫಿಸಿಯೋ ಉಪಸ್ಥಿತಿಯಲ್ಲಿ ಷಾ ಎಂಆರ್​ಐ ಸ್ಕಾ್ಯನಿಂಗ್​ಗೆ ಒಳಗಾಗಿದ್ದರು. ಪೃಥ್ವಿ ಷಾ ಅವರಿಗೆ ಕನಿಷ್ಠ ಭುಜ ಮೇಲೆತ್ತಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಎನ್​ಸಿಎ ಅವರನ್ನು ಕರೆಸಿಕೊಂಡಿದೆ ಎಂದು ತಂಡದ ಮ್ಯಾನೇಜರ್ ಅಜಿಂಕ್ಯ ನಾಯ್್ಕ ತಿಳಿಸಿದ್ದಾರೆ. ಅವರೀಗ ಬ್ಯಾಟಿಂಗ್ ಮಾಡುವ ಸ್ಥಿತಿಯಲ್ಲೂ ಇಲ್ಲ ಎಂದರು. ಮೊದಲ ದಿನದಾಟದ ಫೀಲ್ಡಿಂಗ್ ವೇಳೆ ಭುಜದ ನೋವಿಗೆ ತುತ್ತಾಗಿರುವ ಪೃಥ್ವಿ ಷಾ ಶನಿವಾರ 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಇಳಿಯಲಿಲ್ಲ. ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಷಾ ಜನವರಿ 10ರಂದು ನ್ಯೂಜಿಲೆಂಡ್​ಗೆ ಪ್ರಯಾಣಿಸಬೇಕಿದೆ.

ಸಮರ್ಥ್ ಏಕಾಂಗಿ ಹೋರಾಟ

ಶನಿವಾರ ಬೆಳಗ್ಗೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ರಾಯ್ಸ್ಟನ್ ಡಯಾಸ್ ಆಘಾತ ನೀಡಿದರು. ನಾಯಕ ಕರುಣ್ ನಾಯರ್ ಖಾತೆ ತೆರೆಯುವ ಮುನ್ನವೇ ರಾಯ್ಸ್ಟನ್ ಎಸೆತದಲ್ಲಿ ವಿಕೆಟ್ ಕೀಪರ್ ಆದಿತ್ಯ ತಾರೆಗೆ ಕ್ಯಾಚ್ ನೀಡಿದರು. ದಿನದ 2ನೇ ಓವರ್​ನಲ್ಲೇ ಶಾಕ್ ಅನುಭವಿಸಿದ ಕರ್ನಾಟಕ ಇನಿಂಗ್ಸ್ ಹಿನ್ನಡೆ ಆತಂಕ ಎದುರಿಸಿತು. ಈ ವೇಳೆ ಜತೆಯಾದ ಸಮರ್ಥ್ ಹಾಗೂ ಉಪನಾಯಕ ಶ್ರೇಯಸ್ ಗೋಪಾಲ್ (31ರನ್, 85 ಎಸೆತ, 3 ಬೌಂಡರಿ) ಜೋಡಿ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿತು.

40 ರನ್​ಗಳಿಂದ ದಿನದಾಟ ಆರಂಭಿಸಿದ ಸಮರ್ಥ್ ಪ್ರಸಕ್ತ ಟೂರ್ನಿಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಮುಂಬೈ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಪ್ರವಾಸಿಗರಿಗೆ ಆಸರೆಯಾಯಿತು. ಈ ಜೋಡಿ 5ನೇ ವಿಕೆಟ್​ಗೆ 78 ರನ್ ಪೇರಿಸಿದ್ದ ವೇಳೆ ಶ್ರೇಯಸ್ ಗೋಪಾಲ್ ಶಶಾಂಕ್​ಗೆ ವಿಕೆಟ್ ನೀಡಿದರು. ಇದರಿಂದ ಕರ್ನಾಟಕದ ಕುಸಿತಕ್ಕೆ ಮುನ್ನುಡಿ ಬರೆದರು. ಇದಾದ ಕೆಲ ಹೊತ್ತಿನಲ್ಲೇ ಶತಕದಂಚಿನಲ್ಲಿದ್ದ ಸಮರ್ಥ್, ಮಿಥುನ್ (2) ಹಾಗೂ ರೋನಿತ್ ಮೋರೆ (4) ಕೇವಲ 14 ರನ್​ಗಳ ಅಂತರದಲ್ಲಿ ನಿರ್ಗಮಿಸಿದರು. ಭೋಜನ ವಿರಾಮದ ವೇಳೆಗೆ 179 ರನ್​ಗಳಿಗೆ 8 ವಿಕೆಟ್ ಕಳೆದುಕೊಂಡ ಕರ್ನಾಟಕ ಇನಿಂಗ್ಸ್ ಹಿನ್ನಡೆ ಭೀತಿ ಎದುರಿಸಿತು. ಬಿಆರ್ ಶರತ್ (46 ರನ್, 54 ಎಸೆತ, 7 ಬೌಂಡರಿ, 1 ಸಿಕ್ಸರ್), ವಿ.ಕೌಶಿಕ್ (4) ಜತೆಗೂಡಿ 9ನೇ ವಿಕೆಟ್​ಗೆ 42 ರನ್ ಜತೆಯಾಟವಾಡಿ ತಂಡಕ್ಕೆ ಇನಿಂಗ್ಸ್ ಮುನ್ನಡೆ ತಂದುಕೊಟ್ಟರು.

  • ಮುಂಬೈ ಪ್ರಥಮ ಇನಿಂಗ್ಸ್: 194
  • ಕರ್ನಾಟಕ ಪ್ರಥಮ ಇನಿಂಗ್ಸ್: 68.5 ಓವರ್​ಗಳಲ್ಲಿ 218 (ಶುಕ್ರವಾರ 3 ವಿಕೆಟ್​ಗೆ 79)
  • ಆರ್. ಸಮರ್ಥ್ ಸಿ ಸರ್ಫ್ರಾಜ್ ಬಿ ಶಶಾಂಕ್ 86
  • ಕರುಣ್ ನಾಯರ್ ಸಿ ತಾರೆ ಬಿ ಡಯಾಸ್ 0
  • ಶ್ರೇಯಸ್ ಸಿ ಸೂರ್ಯ ಬಿ ಶಶಾಂಕ್ 31
  • ಬಿಆರ್ ಶರತ್ ಸಿ ತಾರೆ ಬಿ ತುಷಾರ್ 46
  • ಮಿಥುನ್ ಬಿ ಶಶಾಂಕ್ 2
  • ರೋನಿತ್ ಮೋರೆ ಸಿ ಸೂರ್ಯ ಬಿ ಮುಲಾನಿ 4
  • ವಿ. ಕೌಶಿಕ್ ಸಿ ಮುಲಾನಿ ಬಿ ಶಶಾಂಕ್ 4
  • ಪ್ರತೀಕ್ ಜೈನ್ ಔಟಾಗದೆ 0

ಇತರ: 9. ವಿಕೆಟ್ ಪತನ: 3-77, 4-79, 5-157, 6-158, 7-166, 8-171, 9-213. ಬೌಲಿಂಗ್: ತುಷಾರ್ ದೇಶಪಾಂಡೆ 11-2-40-1, ದೀಪಕ್ ಶೆಟ್ಟಿ 11-2-38-0, ರಾಯ್ಸ್ಟನ್ 7-3-22-1, ಶಶಾಂಕ್ 18.5-3-58-5, ಮುಲಾನಿ 21-4-55-3.

  • ಮುಂಬೈ ದ್ವಿತೀಯ ಇನಿಂಗ್ಸ್:
  • 36 ಓವರ್​ಗಳಲ್ಲಿ 5 ವಿಕೆಟ್​ಗೆ 109
  • ಆದಿತ್ಯ ತಾರೆ ಸಿ ಸಮರ್ಥ್ ಬಿ ವಿ. ಕೌಶಿಕ್ 6
  • ಅಜಿಂಕ್ಯ ರಹಾನೆ ಎಲ್​ಬಿಡಬ್ಲ್ಯು ಬಿ ಮಿಥುನ್ 1
  • ಸಿದ್ಧೇಶ್ ಲಾಡ್ ಸಿ ಮತ್ತು ಬಿ ಮಿಥುನ್ 4
  • ಸೂರ್ಯಕುಮಾರ್ ಸಿ ಶರತ್ ಬಿ ಮಿಥುನ್ 10
  • ಸರ್ಫ್ರಾಜ್ ಖಾನ್ ಬ್ಯಾಟಿಂಗ್ 53
  • ಮುಲಾನಿ ಸಿ ಅಭಿಷೇಕ್ ಬಿ ವಿ. ಕೌಶಿಕ್ 31

ಇತರ: 4. ವಿಕೆಟ್ ಪತನ: 1-8, 2-12, 3-12, 4-26, 5-109. ಬೌಲಿಂಗ್: ಮಿಥುನ್ 11-2-52-3, ವಿ. ಕೌಶಿಕ್ 9-5-11-2, ಪ್ರತೀಕ್ ಜೈನ್ 5-2-3-0, ರೋನಿತ್ ಮೋರೆ 6-1-10-0, ಕರುಣ್ ನಾಯರ್ 2-0-7-0, ಶ್ರೇಯಸ್ ಗೋಪಾಲ್ 2-0-20-0, ಸಮರ್ಥ್ 1-0-5-0.

ಮಹಿಳೆಯರ ಪಂದ್ಯಕ್ಕೆ ಮಳೆ ಅಡ್ಡಿ

ಕಟಕ್: ಭಾರತ ಎ ಹಾಗೂ ಬಿ ತಂಡಗಳ ನಡುವಿನ ಮಹಿಳಾ ಟಿ20ಚಾಲೆಂಜರ್ ಟ್ರೋಫಿಯ ಮೊದಲ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರಿಂದ ತಲಾ 2 ಅಂಕ ಹಂಚಲಾಯಿತು. ಭಾನುವಾರ ಕನ್ನಡತಿ ವೇದಾ ಕೃಷ್ಣಮೂರ್ತಿ ಸಾರಥ್ಯದ ಭಾರತ ಸಿ ಹಾಗೂ ಭಾರತ ಬಿ ತಂಡಗಳು ಎದುರಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net