

ನವದೆಹಲಿ: ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಕೊಹ್ಲಿಯ ಕಳಪೆ ನಿರ್ವಹಣೆಗೆ ಅವರ ಹೆಚ್ಚುತ್ತಿರುವ ವಯಸ್ಸು ಕೂಡ ಕಾರಣವಾಗಿರಬಹುದು ಎಂದಿರುವ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್, ‘ವಯಸ್ಸಿನ ಹಿನ್ನಡೆಯಿಂದ ತಪ್ಪಿಸಿಕೊಳ್ಳಲು ಈ ವೇಳೆಯಲ್ಲಿ ಹೆಚ್ಚಿನ ಅಭ್ಯಾಸ ಮಾಡುವುದು ಅಗತ್ಯ’ ಎಂದು ಸಲಹೆ ನೀಡಿದ್ದಾರೆ.
ಕಿವೀಸ್ ಪ್ರವಾಸದಲ್ಲಿ ಆಡಿದ 2 ಟೆಸ್ಟ್ನಿಂದ 9.50ರ ಸರಾಸರಿಯಲ್ಲಿ 31 ವರ್ಷದ ಕೊಹ್ಲಿ ಕೇವಲ 38 ರನ್ ಬಾರಿಸಿದ್ದರು. ಇದಕ್ಕೂ ಮುನ್ನ ನಡೆದಿದ್ದ ಸೀಮಿತ ಓವರ್ಗಳ ಸರಣಿಯಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ 180 ರನ್ ಬಾರಿಸಿದ್ದರು. ‘ಎಲ್ಲ ಶ್ರೇಷ್ಠ ಬ್ಯಾಟ್ಸ್ಮನ್ಗಳಿಗೂ ಈ ಹಂತ ಬಂದಿತ್ತು. ಈ ವಯಸ್ಸಿನಲ್ಲಿ ಅಂದರೆ, 30 ವರ್ಷ ದಾಟಿದ ಬಳಿಕ, ದೃಷ್ಟಿ ಸ್ವಲ್ಪ ಕುಗ್ಗುತ್ತದೆ.
ಇದಕ್ಕೆ ನಾವು ಹೊಂದಿಕೊಳ್ಳಲು 6ರಿಂದ ಒಂದು ವರ್ಷ ಬೇಕಾಗುತ್ತದೆ’ ಎಂದು ಕಪಿಲ್ ದೇವ್ ಹೇಳಿದ್ದಾರೆ. ಕೊಹ್ಲಿ ದೃಷ್ಟಿಯನ್ನು ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದು ನನ್ನ ಯೋಚನೆ. ಪಂದ್ಯದ ವೇಳೆ ಸ್ಟಂಪ್ನತ್ತ ಬರುವ ಚೆಂಡಿನಲ್ಲಿ ಎಲ್ಬಿಡಬ್ಲ್ಯು ಅಥವಾ ಬೌಲ್ಡ್ ಆಗುತ್ತಿದ್ದರೆ, ಆ ಆಟಗಾರನಿಗೆ ಹೆಚ್ಚಿನ ಅಭ್ಯಾಸ ನಡೆಸುವಂತೆ ಸೂಚಿಸಬೇಕು ಎಂದಿದ್ದಾರೆ. ಕೊಹ್ಲಿ ಕೊನೇ ಟೆಸ್ಟ್ನ ಎರಡೂ ಇನಿಂಗ್ಸ್ಗಳಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದರು.
ಸೆಹ್ವಾಗ್, ದ್ರಾವಿಡ್, ರಿಚರ್ಡ್ಸ್ ಕೂಡ ಸಮಸ್ಯೆ ಎದುರಿಸಿದ್ದರು!
ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಹಾಗೂ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಕೂಡ ಇಂಥದ್ದೇ ಕಷ್ಟಗಳನ್ನು ಎದುರಿಸಿದ್ದರು ಎಂದು ಕಪಿಲ್ ದೇವ್ ಹೇಳಿದ್ದಾರೆ. ‘ನಿಮ್ಮ ಕಣ್ಣುಗಳು ಹಾಗೂ ಅದರ ಪ್ರತಿಫಲನದ ಕೆಲಸ ನಿಧಾನವಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ. ಕೆಲವೇ ಸಮಯದಲ್ಲಿ ನಮ್ಮ ಶಕ್ತಿಗಳೆಲ್ಲವೂ, ದೌರ್ಬಲ್ಯಗಳಾಗಿ ಕಾಣಿಸುತ್ತದೆ. 18ರಿಂದ 24 ವರ್ಷದ ಅವಧಿಯಲ್ಲಿ ದೃಷ್ಟಿಯೂ ಗರಿಷ್ಠ ಮಟ್ಟದಲ್ಲಿರುತ್ತದೆ.
ಆ ಬಳಿಕ, ನಮ್ಮ ದಿನನಿತ್ಯದ ಕೆಲಸ ಹೇಗಿರುತ್ತದೆಯೋ ಆ ರೀತಿಯಲ್ಲಿ ಅದರ ಮಟ್ಟ ಇಳಿಕೆಯಾಗುತ್ತದೆ. ಸೆಹ್ವಾಗ್, ದ್ರಾವಿಡ್ ಹಾಗೂ ರಿಚರ್ಡ್ಸ್ ಕೂಡ ತಮ್ಮ ಕ್ರೀಡಾ ಜೀವನದಲ್ಲಿ ಈ ಸಮಸ್ಯೆ ಎದುರಿಸಿದ್ದರು. ಆದ್ದರಿಂದ ಕೊಹ್ಲಿ ಹೆಚ್ಚಿನ ಅಭ್ಯಾಸ ನಡೆಸಬೇಕು ಎಂದು ಕಪಿಲ್ ಹೇಳಿದ್ದಾರೆ. ಐಪಿಎಲ್ನಲ್ಲಿ ಆಡುವ ವೇಳೆ ಕೊಹ್ಲಿ, ಈ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂದಿದ್ದಾರೆ. ದೃಷ್ಟಿ ದುರ್ಬಲವಾಗುತ್ತಿದ್ದಾಗ, ನಿಮ್ಮ ತಂತ್ರಗಾರಿಕೆಯಲ್ಲಿ ಕೊಂಚ ಬದಲಾವಣೆ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. (ಪಿಟಿಐ)