ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯಕ್ಕೆ ಕನ್ನಡಿಗ ಕೆಎಲ್​ ರಾಹುಲ್​ಗೆ ಆಡುವ 11ರ ಬಳಗದಲ್ಲಿ ಸ್ಥಾನ ನಿಶ್ಚಿತ?

web rahul
Published on

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್​ ಪಂದ್ಯಕ್ಕೆ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಸ್ಥಾನಕ್ಕೆ ಕನ್ನಡಿಗ ಕೆಎಲ್​ ರಾಹುಲ್​ ಮತ್ತು ಮುಂಬೈ ಬ್ಯಾಟರ್​ ಸರ್ಫ್ರಾಜ್​ ಖಾನ್​ ನಡುವೆ ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆ ಇತ್ತು. ಆದರೆ ಈಗ ರಾಹುಲ್​ಗೆ ಅವಕಾಶ ಲಭಿಸುವುದು ಬಹುತೇಕ ಖಚಿತವೆನಿಸಿದೆ. ಸರ್ಫ್ರಾಜ್​ ಖಾನ್​ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದರೂ, ದುಲೀಪ್​ ಟ್ರೋಫಿಯ 2ನೇ ಲೀಗ್​ ಪಂದ್ಯಕ್ಕೆ ಭಾರತ ಬಿ ತಂಡದಲ್ಲಿ ಮುಂದುವರಿದಿರುವುದು ಈ ಬಗ್ಗೆ ಸ್ಪಷ್ಟ ಸೂಚನೆಯನ್ನು ನೀಡಿದೆ.

ಟೀಮ್​ ಮ್ಯಾನೇಜ್​ಮೆಂಟ್​ ಬರೀ ಬಾಂಗ್ಲಾ ಸರಣಿಯ ಬಗ್ಗೆ ಯೋಚಿಸದೆ ವರ್ಷಾಂತ್ಯದಲ್ಲಿ ನಡೆಯಲಿರುವ ಮಹತ್ವದ ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್​ ಸರಣಿಗೆ ತಂಡ ಸಂಯೋಜನೆ ರೂಪಿಸುವ ಚಿಂತನೆಯಲ್ಲಿದೆ. ಹೀಗಾಗಿ ಭರ್ತಿ 50 ಟೆಸ್ಟ್​ ಪಂದ್ಯ ಆಡಿರುವ ರಾಹುಲ್​ ಅನುಭವಕ್ಕೆ ಆದ್ಯತೆ ನೀಡಲಾಗಿದೆ.

ಕೆಎಲ್​ ರಾಹುಲ್​ ಕಳೆದ ದಣ ಆಫ್ರಿಕಾ ಪ್ರವಾಸದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ಗಾಯಗೊಳ್ಳುವುದಕ್ಕೆ ಮುನ್ನ ಹೈದರಾಬಾದ್​ನಲ್ಲಿ ತಾನಾಡಿದ ಕೊನೇ ಟೆಸ್ಟ್​ ಪಂದ್ಯದಲ್ಲಿ 86 ರನ್​ ಗಳಿಸಿ ಉಪಯುಕ್ತ ಕೊಡುಗೆ ನೀಡಿದ್ದರು. ಅಲ್ಲದೆ ದುಲೀಪ್​ ಟ್ರೋಫಿಯ ಮೊದಲ ಲೀಗ್​ ಪಂದ್ಯದಲ್ಲಿ ಭಾರತ ಎ ತಂಡದ ಪರ ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿರುವುದನ್ನು ನಿರೂಪಿಸಿದ್ದಾರೆ.

ಸರ್ಫ್ರಾಜ್ ಖಾನ್​ ಹಾಲಿ ವರ್ಷ ಇಂಗ್ಲೆಂಡ್​ ವಿರುದ್ಧ ರಾಜ್​ಕೋಟ್​ನಲ್ಲಿ ಟೆಸ್ಟ್​ ಪದಾರ್ಪಣೆಯ ವೇಳೆ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದ್ದರು. ಧರ್ಮಶಾಲಾದಲ್ಲಿ ಮತ್ತೊಂದು ಅರ್ಧಶತಕ ಬಾರಿಸಿದ್ದರು. ಆದರೂ ರಾಹುಲ್​ರ ಅನುಭವಕ್ಕೆ ಹೆಚ್ಚಿನ ಒತ್ತು ನೀಡಲು ಟೀಮ್​ ಮ್ಯಾನೇಜ್​ಮೆಂಟ್​ ಬಯಸಿದೆ ಎನ್ನಲಾಗಿದೆ.

ಕೆಎಲ್​ ರಾಹುಲ್​ 2014ರಲ್ಲಿ ಆಸ್ಟ್ರೆಲಿಯಾದಲ್ಲೇ ಟೆಸ್ಟ್​ ಪದಾರ್ಪಣೆ ಮಾಡಿದ್ದರು. ಆದರೆ ಗಾಯದಿಂದಾಗಿ ಕಳೆದೆರಡು ಆಸ್ಟ್ರೆಲಿಯಾ ಪ್ರವಾಸಗಳನ್ನು ತಪ್ಪಿಸಿಕೊಂಡಿದ್ದರು. ಟೆಸ್ಟ್​ನಲ್ಲಿ ರಾಹುಲ್​ರ 35 ರನ್​ ಸರಾಸರಿ ಸಾಧಾರಣ ನಿರ್ವಹಣೆ ಎನಿಸಿದರೂ, ಸಿಡ್ನಿ, ಲಾರ್ಡ್ಸ್​, ಓವಲ್​, ಸೆಂಚುರಿಯನ್​ನಂಥ ವಿದೇಶಿ ಮೈದಾನಗಳಲ್ಲಿ ಶತಕ ಸಿಡಿಸಿರುವುದು ಅವರಿಗೆ ಪ್ಲಸ್​ ಪಾಯಿಂಟ್​ ಆಗಿದೆ.

ಇಂಥದ್ದೇ ಅಂಶಗಳು ವಿಕೆಟ್​ ಕೀಪರ್​ ಆಯ್ಕೆಯಲ್ಲಿ ರಿಷಭ್​ ಪಂತ್​ಗೆ ಧ್ರುವ ಜುರೆಲ್​ ಎದುರು ಮೇಲುಗೈ ತಂದುಕೊಟ್ಟಿದೆ. ಜುರೆಲ್​ ಇಂಗ್ಲೆಂಡ್​ ವಿರುದ್ಧದ ಕಳೆದ ಪದಾರ್ಪಣೆಯ ಸರಣಿಯಲ್ಲಿ ಮಿಂಚಿದ್ದರೂ, ಪಂತ್​ ವಿದೇಶಿ ಟೆಸ್ಟ್​ಗಳಲ್ಲಿ ಹೊಂದಿರುವ ಬಲಿಷ್ಠ ದಾಖಲೆ ಅವರನ್ನೇ ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net