

ಮುಂಬೈ: ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್, ಕರ್ನಾಟಕದ ಗದಗ್ನ ಸುನೀಲ್ ಜೋಶಿ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬುಧವಾರ ನೇಮಕಗೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಮದನ್ ಲಾಲ್ ನೇತೃತ್ವದ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಮಾಜಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಹಾಗೂ ಗಗನ್ ಖೋಡಾರಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಿತು. ಗಗನ್ ಖೋಡಾ ಸ್ಥಾನಕ್ಕೆ ಮಾಜಿ ವೇಗಿ ಹರ್ವಿಂದರ್ ಸಿಂಗ್ ಆಯ್ಕೆಯಾಗಿದ್ದಾರೆ.
ಮದನ್ಲಾಲ್, ಆರ್ಪಿ ಸಿಂಗ್, ಸುಲಕ್ಷಣಾ ನಾಯ್್ಕ ಇದ್ದ ಸಮಿತಿ, ಇಬ್ಬರು ಆಯ್ಕೆಗಾರರನ್ನು ಪ್ರಕಟಿಸುವುದರೊಂದಿಗೆ ನೂತನ ಆಯ್ಕೆ ಸಮಿತಿ ಐವರು ಸದಸ್ಯರ ಬಲ ಪಡೆದಂತಾಗಿದೆ. ಆಯ್ಕೆ ಸಮಿತಿಯ ಮುಂದಿನ ಒಂದು ವರ್ಷದ ಕಾರ್ಯವೈಖರಿಯನ್ನು ಸಿಎಸಿ ಪರಾಮರ್ಶೆ ಮಾಡಲಿದ್ದು, ಅದರಂತೆ ತನ್ನ ಶಿಫಾರಸುಗಳನ್ನು ಮಾಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ.
ಹರ್ವಿಂದರ್ ಸಿಂಗ್ ಸಮಿತಿಯಲ್ಲಿ ಕೇಂದ್ರ ವಲಯವನ್ನು ಪ್ರತಿನಿಧಿಸಲಿದ್ದಾರೆ. ಪ್ರಸ್ತುತ ಆಯ್ಕೆ ಸಮಿತಿಯಲ್ಲಿ ಜತಿನ್ ಪರಾಂಜಪೆ (ಪಶ್ಚಿಮ), ದೇವಾಂಗ್ ಗಾಂಧಿ (ಪೂರ್ವ) ಹಾಗೂ ಸರಣ್ದೀಪ್ ಸಿಂಗ್ (ಉತ್ತರ) ಸದಸ್ಯರಾಗಿದ್ದಾರೆ.
‘ಸುನೀಲ್ ಜೋಶಿ ಹಾಗೂ ಹರ್ವಿಂದರ್ ಸಿಂಗ್ರ ಆಲೋಚನೆಗಳು ಸ್ಪಷ್ಟವಾಗಿದ್ದ ಕಾರಣ ಅವರನ್ನು ಆಯ್ಕೆ ಮಾಡಿದ್ದೇವೆ. ಜೋಶಿ ಅವರಲ್ಲಿನ ನೇರವಾಗಿ ಹೇಳುವಂಥ ಗುಣ ನಮಗೆ ಇಷ್ಟವಾಗಿದೆ’ ಎಂದು ಮದನ್ ಲಾಲ್ ತಿಳಿಸಿದ್ದಾರೆ. ಆಯ್ಕೆ ಸಮಿತಿ ಹುದ್ದೆಗೆ ಬಂದಿದ್ದ 40 ಅರ್ಜಿಗಳ ಪೈಕಿ, ಸುನೀಲ್ ಜೋಶಿ, ಹರ್ವಿಂದರ್ ಸಿಂಗ್, ವೆಂಕಟೇಶ್ ಪ್ರಸಾದ್, ರಾಜೇಶ್ ಚೌಹಾಣ್ ಹಾಗೂ ಎಲ್ಎಸ್ ಶಿವರಾಮಕೃಷ್ಣನ್ ಹೆಸರನ್ನು ಅಂತಿಮ ಐವರು ಸದಸ್ಯರ ಪಟ್ಟಿಗೆ ಆಯ್ಕೆ ಮಾಡಲಾಗಿತ್ತು. ಅಜಿತ್ ಅಗರ್ಕರ್ ಹಾಗೂ ನಯನ್ ಮೋಂಗಿಯಾ ಹೆಸರು ಅಂತಿಮ ಪಟ್ಟಿಗೆ ಬರಲಿಲ್ಲ ಆದರೆ, ಮುಂದಿನ ಸೆಪ್ಟೆಂಬರ್ನಲ್ಲಿ ಜತಿನ್ ಪರಾಂಜಪೆ, ದೇವಾಂಗ್ ಗಾಂಧಿ ಹಾಗೂ ಸರಣ್ದೀಪ್ ಸಿಂಗ್ರ ಅವಧಿ ಅಂತ್ಯಗೊಳ್ಳಲಿದ್ದು, ಆ ಬಳಿಕ ಇವರು ಸಮಿತಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.
ಬಿಸಿಸಿಐ ಈಗಲೂ ಕೂಡ ಆಯ್ಕೆ ಸಮಿತಿಯಲ್ಲಿ ವಲಯವಾರು ನಿಯಮ ಮುಂದುವರಿಸಿರುವುದು ಖಚಿತಗೊಂಡಿದೆ. 42 ವರ್ಷದ ಹರ್ವಿಂದರ್ ಸಿಂಗ್, ಭಾರತ ಪರ 3 ಟೆಸ್ಟ್, 16 ಏಕದಿನ ಆಡಿದ್ದಾರೆ.
ಗದಗದ ಎಡಗೈ ಸ್ಪಿನ್ ಮಾಂತ್ರಿಕ ಜೋಶಿ
ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಪ್ಯಾಶನ್ ಬೆಳೆಸಿಕೊಂಡಿದ್ದ ಸುನೀಲ್ ಜೋಶಿ, ಪ್ರತಿನಿತ್ಯ ಅಭ್ಯಾಸಕ್ಕಾಗಿ 40 ಮೈಲಿ ಪ್ರಯಾಣ ಮಾಡಿ ಹುಬ್ಬಳ್ಳಿಗೆ ಬರುತ್ತಿದ್ದರು. ಬಳಿಕ ಮತ್ತೆ ಗದಗದ ಮನೆಗೆ ಹಿಂದಿರುಗಿ ಶಾಲೆಗೆ ಹೋಗುತ್ತಿ ದ್ದರು. 1995-96ರ ರಣಜಿ ಋತುವಿನಲ್ಲಿ 500 ರನ್, 50 ವಿಕೆಟ್ ಗಳಿಸಿ ಮಿಂಚಿದ್ದರು. ಇದರಿಂದ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದರು. 1999ರಲ್ಲಿ ದ. ಆಫ್ರಿಕಾ ವಿರುದ್ಧದ ನೈರೋಬಿ ಏಕದಿನದಲ್ಲಿ 10 ಓವರ್ ದಾಳಿ ನಡೆಸಿ 6 ಮೇಡನ್ ಸಹಿತ 6 ರನ್ಗೆ 5 ವಿಕೆಟ್ ಉರುಳಿಸಿದ್ದರು. ಆದರೆ, ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿದ್ದ ರಾಜ್ಯದ ಮತ್ತೋರ್ವ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಗೆ ಸವಾಲೊಡ್ಡುವಲ್ಲಿ ವಿಫಲರಾದ ಜೋಶಿ ತಂಡದಲ್ಲಿ ಬಹುಕಾಲ ಉಳಿದುಕೊಂಡಿರಲಿಲ್ಲ.
ರಾಜ್ಯದಿಂದ ನಾಲ್ಕನೇ ಅಧ್ಯಕ್ಷ
ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆ ಅಲಂಕರಿಸಿದ ರಾಜ್ಯದ ನಾಲ್ಕನೇ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ. ಇದಕ್ಕೂ ಮುನ್ನ ಜಿಆರ್ ವಿಶ್ವನಾಥ್, ಬ್ರಿಜೇಶ್ ಪಟೇಲ್ ಹಾಗೂ ಸಯ್ಯದ್ ಕಿರ್ವನಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 49 ವರ್ಷದ ಸುನೀಲ್ ಜೋಶಿ 1996ರಿಂದ 2001ರಲ್ಲಿ ಭಾರತ ತಂಡದ ಪರವಾಗಿ 15 ಟೆಸ್ಟ್, 69 ಏಕದಿನ ಪಂದ್ಯವಾಡಿದ್ದರು. ಆ ಮೂಲಕ ಕ್ರಮವಾಗಿ 41 ಹಾಗೂ 69 ವಿಕೆಟ್ ಉರುಳಿಸಿದ್ದರು.
ಸಂದರ್ಶನದಲ್ಲಿ ಧೋನಿ, ಕೊಹ್ಲಿ ಬಗ್ಗೆ ಪ್ರಶ್ನೆ!
ಆಯ್ಕೆ ಸಮಿತಿ ಸದಸ್ಯ ಸ್ಥಾನಕ್ಕೆ ರೇಸ್ನಲ್ಲಿದ್ದ ಐವರಿಗೂ ಸಿಎಸಿಯಿಂದ ಸವಾಲಿನ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಅದುವೇ, ‘ಭಾರತ ತಂಡದಲ್ಲಿ ಧೋನಿಯ ಭವಿಷ್ಯದ ಬಗ್ಗೆ ನಿಮ್ಮ ತೀರ್ವನವೇನು? ಎಂಬುದು! ಅವರನ್ನು ಮುಂದಿನ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾಗುತ್ತದೆಯೇ ಎಂದೂ ಕೇಳಲಾಗಿತ್ತು. ಆ ಮೂಲಕ ಧೋನಿ ವಿಚಾರದ ಬಗ್ಗೆ ಆಯ್ಕೆ ಸಮಿತಿ ಸ್ಪಷ್ಟವಾಗಿರಬೇಕು ಎಂದು ಬಿಸಿಸಿಐ ಬಯಸಿದೆ. ಅದರೊಂದಿಗೆ ನಾಯಕ ವಿರಾಟ್ ಕೊಹ್ಲಿಯ ಪ್ರಭಾವಳಿಯ ಬಗ್ಗೆಯೂ ಪ್ರಶ್ನೆ ಮಾಡಲಾಯಿತು. ತಂಡದ ಆಯ್ಕೆ ವೇಳೆ ನಾಯಕನ ಮಾತುಗಳು ಮಹತ್ವ ಪಡೆದುಕೊಳ್ಳುತ್ತವೆ. ಇದನ್ನು ಹೇಗೆ ನಿಭಾಯಿಸುತ್ತೀರಿ ಎನ್ನುವ ಪ್ರಶ್ನೆಗೆ ಸುನೀಲ್ ಜೋಶಿ ಹಾಗೂ ಹರ್ವಿಂದರ್ ನೀಡಿದ ಉತ್ತರಗಳು ಸಿಎಸಿಗೆ ತೃಪ್ತಿ ನೀಡಿವೆ. ಸುನೀಲ್ ಜೋಶಿ ಸಮಿತಿಯಲ್ಲಿ ಕೇವಲ ಆಯ್ಕೆಗಾರನಾಗಿ ಅಥವಾ ಅಧ್ಯಕ್ಷರಾಗಿ ಕೆಲಸ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದಿದ್ದರು.
ನನಗೆ ವಹಿಸಿರುವ ದೊಡ್ಡ ಜವಾಬ್ದಾರಿಗಾಗಿ ಬಿಸಿಸಿಐಗೆ ಧನ್ಯವಾದಗಳು. ಎಂದಿನಂತೆಯೇ ನನ್ನ ಶ್ರೇಷ್ಠ ನಿರ್ವಹಣೆಯನ್ನು ತೋರಲು ಪ್ರಯತ್ನಿಸುತ್ತೇನೆ. | ಸುನೀಲ್ ಜೋಶಿ