ಕನ್ನಡಿಗ ರಘು ರಾಷ್ಟ್ರೀಯ ಬ್ಯಾಡ್ಮಿಂಟನ್​ ಚಾಂಪಿಯನ್​; ಕರ್ನಾಟಕದ 5ನೇ ಸಾಧಕ

web raghu
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆತಿಥೇಯ ಕರ್ನಾಟಕದ ಎಂ. ರಘು 86ನೇ ಸೀನಿಯರ್​ ರಾಷ್ಟ್ರೀಯ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಹರಿಯಾಣದ ದೇವಿಕಾ ಸಿಹಾಗ್​ ಚಾಂಪಿಯನ್​ ಪಟ್ಟವೇರಿದ್ದಾರೆ.

ಉದ್ಯಾನನಗರಿಯಲ್ಲಿ ಮಂಗಳವಾರ ಮುಕ್ತಾಯಗೊಂಡ ಟೂರ್ನಿಯ ಪುರುಷರ ಸಿಂಗಲ್ಸ್​ ವಿಭಾಗದ ಫೈನಲ್​ನಲ್ಲಿ ಕರ್ನಾಟಕದ ಇಬ್ಬರು ಆಟಗಾರರೇ ಮುಖಾಮುಖಿಯಾದರು. ರೈಲ್ವೇಸ್​ ಪ್ರತಿನಿಧಿಸಿದ ಕನ್ನಡಿಗ ಹಾಗೂ ಮಾಜಿ ಚಾಂಪಿಯನ್​ ಮಿಥುನ್​ ಮಂಜುನಾಥ್​ ವಿರುದ್ಧ ಮಂಡ್ಯದ ಎಂ. ರಘು 14-21, 21-14, 24-22 ಗೇಮ್​ಗಳಿಂದ ಗೆಲುವು ದಾಖಲಿಸಿದರು. ಮೊದಲ ಗೇಮ್​ ಸೋಲಿನ ಬಳಿಕ ದಿಟ್ಟ ತಿರುಗೇಟು ನೀಡಿದ ರಘು, ನಿರ್ಣಾಯಕ ಗೇಮ್​ನಲ್ಲಿ 3 ಬಾರಿ ಮ್ಯಾಚ್​ ಪಾಯಿಂಟ್​ ರಸಿಕೊಂಡು ಚೊಚ್ಚಲ ರಾಷ್ಟ್ರೀಯ ಪ್ರಶಸ್ತಿ ಒಲಿಸಿಕೊಂಡರು. ರಘು ಸೆಮೀಸ್​ನಲ್ಲಿ ಅಗ್ರ ಶ್ರೇಯಾಂಕಿತ ಸತೀಶ್​ ಕುಮಾರ್​ಗೆ ಆಘಾತ ನೀಡಿದ್ದರು.

19 ವರ್ಷದ ದೇವಿಕಾ ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ತೆಲಂಗಾಣದ ಶ್ರೀಯಾಂಶಿ ವಾಲಿಶೆಟ್ಟಿ ವಿರುದ್ಧ 21-15, 21-16ರಿಂದ ಗೆದ್ದರು. ಪುರುಷರ ಡಬಲ್ಸ್​ನಲ್ಲಿ ಯುಪಿಯ ಅರ್ಷ್​ ಮೊಹಮದ್​, ರಾಜಸ್ಥಾನದ ಸಂಸ್ಕಾರ್​ ಸಾರಸ್ವತ್​ ಜೋಡಿ ಪ್ರಶಸ್ತಿ ಗೆದ್ದರೆ, ಮಹಿಳಾ ಡಬಲ್ಸ್​ನಲ್ಲಿ ಕೇರಳದ ಆರತಿ ಸಾರಾ ಮತ್ತು ತಮಿಳುನಾಡಿನ ವರ್ಷಿಣಿ ವಿಎಸ್​ ಜೋಡಿ ಚಾಂಪಿಯನ್​ ಎನಿಸಿತು. ಮಿಶ್ರ ಡಬಲ್ಸ್​ನಲ್ಲಿ ಉತ್ತರ ಪ್ರದೇಶದ ಆಯುಷ್​ ಅಗರ್ವಾಲ್​-ಶ್ರುತಿ ಮಿಶ್ರಾ ಜೋಡಿ ಪ್ರಶಸ್ತಿ ಜಯಿಸಿತು.

5ನೇ ಕನ್ನಡಿಗ

ರಘು ಎಂ. ರಾಷ್ಟ್ರೀಯ ಬ್ಯಾಡ್ಮಿಂಟನ್​ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಗೆದ್ದ 5ನೇ ಕನ್ನಡಿಗರಾಗಿದ್ದಾರೆ. ಪ್ರಕಾಶ್​ ಪಡುಕೋಣೆ (9 ಬಾರಿ, 1971-1979), ಅನುಪ್​ ಶ್ರೀಧರ್​ (2 ಬಾರಿ, 2004-2005), ಅರವಿಂದ್​ ಭಟ್​ (2 ಬಾರಿ, 2008-2010), ಮಿಥುನ್​ ಮಂಜುನಾಥ್​ (2023) ಹಿಂದಿನ ಸಾಧಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net