ಸಿಕೆ ನಾಯ್ಡು ಟ್ರೋಫಿಯಲ್ಲಿ ಕನ್ನಡಿಗ ಮ್ಯಾಕ್ನೀಲ್​ ನೊರೊನ್ಹಾ ಭರ್ಜರಿ ತ್ರಿಶತಕ; 25 ಸಿಕ್ಸರ್​ ಸಹಿತ 345 ರನ್​ ಸಾಧನೆ!

web 300
Published on

ಬೆಂಗಳೂರು: ಕರ್ನಾಟಕದ ಯುವ ಬ್ಯಾಟರ್​ ಮ್ಯಾಕ್ನೀಲ್​ ನೊರೊನ್ಹಾ, ಸಿಕೆ ನಾಯ್ಡು ಟ್ರೋಫಿ 23 ವಯೋಮಿತಿಯ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಆತಿಥೇಯ ತ್ರಿಪುರ ವಿರುದ್ಧ ಭರ್ಜರಿ ತ್ರಿಶತಕ ಸಿಡಿಸಿ ಗಮನಸೆಳೆದಿದ್ದಾರೆ. 99.14ರ ಸ್ಟ್ರೆ$ಕ್​ರೇಟ್​ನಲ್ಲಿ ಅವರು ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಅಗರ್ತಲದ ಪೊಲೀಸ್​ ಟ್ರೇನಿಂಗ್​ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಸೋಮವಾರ 23 ವರ್ಷದ ಮ್ಯಾಕ್ನೀಲ್​ ನೊರೊನ್ಹಾ 348 ಎಸೆತಗಳಲ್ಲಿ 23 ಬೌಂಡರಿ ಮತ್ತು 25 ಸಿಕ್ಸರ್​ಗಳ ಸಹಿತ 345 ರನ್​ ಸಿಡಿಸಿದರು. ಪ್ರಖರ್​ ಚತುರ್ವೇದಿ (91) ಜತೆಗೂಡಿ ಮೊದಲ ವಿಕೆಟ್​ಗೆ 289 ಎಸೆತಗಳಲ್ಲಿ 195 ರನ್​ ಸೇರಿಸಿದ ಮ್ಯಾಕ್ನೀಲ್​, ನಂತರ 2ನೇ ವಿಕೆಟ್​ಗೆ ವಿಶಾನ್​ ಓನತ್​ (106) ಜತೆಗೂಡಿ 262 ರನ್​ ಜತೆಯಾಟವಾಡಿದರು. ಮ್ಯಾಕ್ನೀಲ್​ 335 ಎಸೆತಗಳಲ್ಲೇ ತ್ರಿಶತಕ ಪೂರೈಸಿದರು.

ಈ ಮೂಲಕ ಕರ್ನಾಟಕ ತಂಡ 119.3 ಓವರ್​ಗಳಲ್ಲಿ 5 ವಿಕೆಟ್​ಗೆ 580 ರನ್​ ಪೇರಿಸಿತು. ಪ್ರತಿಯಾಗಿ ಸ್ಪಿನ್ನರ್​ ಕೆ. ಶಶಿಕುಮಾರ್​ (20ಕ್ಕೆ 7) ಮಾರಕ ದಾಳಿಗೆ ಕುಸಿದ ತ್ರಿಪುರ ತಂಡ ಕೇವಲ 104 ರನ್​ಗಳಿಗೆ ಆಲೌಟ್​ ಆಗಿ ಫಾಲೋಆನ್​ಗೆ ಸಿಲುಕಿತು. ದಿನದಂತ್ಯಕ್ಕೆ ತ್ರಿಪುರ 2ನೇ ಇನಿಂಗ್ಸ್​ನಲ್ಲಿ 1 ವಿಕೆಟ್​ಗೆ 40 ರನ್​ ಗಳಿಸಿದ್ದು, ಇನ್ನೂ 436 ರನ್​ ಹಿನ್ನಡೆಯಲ್ಲಿದೆ.

ಆಫ್​ ಸ್ಪಿನ್​ ಬೌಲಿಂಗ್​ ಕೂಡ ಮಾಡುವ ಆಲ್ರೌಂಡರ್​ ಎನಿಸಿರುವ ಮ್ಯಾಕ್ನೀಲ್​ ಕಳೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರಾಗನ್ಸ್​ ಪರ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net