

ಮೆಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಪಾಲಿಗೆ ಸ್ಮರಣೀಯ ಕ್ಷಣವಾಗಿದೆ. ಗುರುವಾರ ಈ ಪಂದ್ಯದ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ವರ್ಷಗಳನ್ನು ಪೂರೈಸಲಿದ್ದಾರೆ.
2014ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲೇ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ದೇಶೀಯ ಕ್ರಿಕೆಟ್ನಲ್ಲಿ ತೋರಿದ ಅಮೋ ನಿರ್ವಹಣೆಯಿಂದಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ರಾಹುಲ್, ಡಿಸೆಂಬರ್ 26ರಿಂದ 30ರವರೆಗೆ ಆಡಿದ ಚೊಚ್ಚಲ ಟೆಸ್ಟ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ 3, 1 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು. ನಂತರ ಸಿಡ್ನಿಯಲ್ಲಿ ಆಡಿದ 2ನೇ ಟೆಸ್ಟ್ನಲ್ಲಿ ಶತಕ ಸಿಡಿಸುವ ಮೂಲಕ ಸಾಮರ್ಥ್ಯ ನಿರೂಪಿಸಿದ್ದರು.
ಎರಡು ವರ್ಷಗಳ ನಂತರ 2016ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೂಲಕ ರಾಹುಲ್ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ಸದ್ಯಕ್ಕೆ ಟಿ20 ತಂಡದಿಂದ ಅವರು ಕಡೆಗಣಿಸಲ್ಪಟ್ಟಿದ್ದಾರೆ. ಇದುವರೆಗೆ ಆಡಿರುವ 205 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆ 17 ಶತಕಗಳ ಸಹಿತ 8 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಗಾಯ, ಅಸ್ಥಿರ ನಿರ್ವಹಣೆಯ ನಡುವೆ ವೃತ್ತೀಜಿವನದಲ್ಲಿ ಹಲವಾರು ಏರುಪೇರುಗಳನ್ನೂ ಕಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಾಧನೆ
ಪ್ರಕಾರ ಪಂದ್ಯ ಇನಿಂಗ್ಸ್ ರನ್ ಸರಾಸರಿ ಗರಿಷ್ಠ 100/50 ಸಿಕ್ಸರ್
ಟೆಸ್ಟ್ 56 97 3,216 34.58 199 8/17 26
ಏಕದಿನ 77 72 2,851 49.15 112 7/18 61
ಟಿ20 72 68 2,265 37.75 110* 2/22 99
ಯಾವ ಪಾತ್ರಕ್ಕೂ ಸೈ
ರಾಹುಲ್ ಭಾರತ ತಂಡದಲ್ಲಿ 10 ವರ್ಷಗಳ ಅವಧಿಯಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಆರಂಭಿಕ, ವನ್ಡೌನ್ನಿಂದ ಮಧ್ಯಮ ಕ್ರಮಾಂಕದವರೆಗೆ ಇವರ ಬ್ಯಾಟಿಂಗ್ ಕ್ರಮಾಂಕ ಆಗಾಗ ಬದಲಾವಣೆ ಕಂಡಿದೆ. ಜತೆಗೆ ತಂಡಕ್ಕೆ ಅಗತ್ಯ ಬಿದ್ದಾಗ, ಪ್ರಮುಖವಾಗಿ ರಿಷಭ್ ಪಂತ್ ಗಾಯಗೊಂಡಾಗ 2023ರ ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಕೀಪರ್ ಪಾತ್ರದಲ್ಲೂ ಗಮನಾರ್ಹ ನಿರ್ವಹಣೆ ತೋರಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಹ್ಯಾಟ್ರಿಕ್ ಶತಕದ ಚಾನ್ಸ್
ಬಾಕ್ಸಿಂಗ್ ಡೇ ಟೆಸ್ಟ್ನಲ್ಲೇ ಪದಾರ್ಪಣೆ ಮಾಡಿರುವ ಕಾರಣದಿಂದಲೋ ಏನೋ, ರಾಹುಲ್ಗೆ ನಂತರದಲ್ಲೂ ಬಾಕ್ಸಿಂಗ್ ಡೇ ಟೆಸ್ಟ್ಗಳು ಸ್ಮರಣೀಯವೆನಿಸಿವೆ. ಇದೀಗ ಅವರು ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಹ್ಯಾಟ್ರಿಕ್ ಶತಕ ಸಾಧನೆ ಮಾಡಿದ ಮೊದಲ ಭಾರತೀಯರೆನಿಸುವ ಅವಕಾಶ ಹೊಂದಿದ್ದಾರೆ. ಈ ಮುನ್ನ 2021ರಲ್ಲಿ ದ. ಆಫ್ರಿಕಾದ ಸೆಂಚುರಿಯನ್ನಲ್ಲಿ ಆಡಿದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 123 ರನ್ ಸಿಡಿಸಿದ್ದ ರಾಹುಲ್ ನಂತರ 2023ರಲ್ಲೂ ಅಲ್ಲೇ ಆಡಿದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲೂ ಶತಕ ಬಾರಿಸಿದ್ದರು. ಸಚಿನ್ ತೆಂಡುಲ್ಕರ್ ಮತ್ತು ಅಜಿಂಕ್ಯ ರಹಾನೆ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಸತತ 2 ಶತಕ ಬಾರಿಸಿರುವ ಇನ್ನಿಬ್ಬರು ಭಾರತೀಯರಾಗಿದ್ದು, ಎಂಸಿಜಿಯಲ್ಲೂ ಶತಕ ಬಾರಿಸಿದರೆ ರಾಹುಲ್ ಈ ದಾಖಲೆ ಮುರಿಯಲಿದ್ದಾರೆ.
ದಶಕ ಕಂಡ 8ನೇ ಕನ್ನಡಿಗ
ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ವರ್ಷಗಳ ಕಾಲ ಆಡಿದ 8ನೇ ಕನ್ನಡಿಗ ಎನಿಸಲಿದ್ದಾರೆ. ಎರಾಪಳ್ಳಿ ಪ್ರಸನ್ನ (16 ವರ್ಷ), ಬಿಎಸ್ ಚಂದ್ರಶೇಖರ್ (15 ವರ್ಷ), ಜಿಆರ್ ವಿಶ್ವನಾಥ್ (14 ವರ್ಷ), ಸಯ್ಯದ್ ಕಿರ್ಮಾನಿ (10 ವರ್ಷ), ಅನಿಲ್ ಕುಂಬ್ಳೆ (18 ವರ್ಷ), ಜಾವಗಲ್ ಶ್ರೀನಾಥ್ (12 ವರ್ಷ), ರಾಹುಲ್ ದ್ರಾವಿಡ್ (16 ವರ್ಷ) ಹಿಂದಿನ ಸಾಧಕರು.