

ಬೆಂಗಳೂರು: ಗ್ರೀನ್‌ವುಡ್ ಹೈ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವ ಬೆಂಗಳೂರಿನ 16 ವರ್ಷದ ವಿದ್ಯಾರ್ಥಿ ಕರಣ್ ಗೋಕುಲ್ ಶೇಷಾದ್ರಿ ಅವರು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಹೇಬಾಲ್ ಚಾಂಪಿಯನ್‌ಷಿಪ್‌ನ 19 ವಯೋಮಿತಿಯ ಬಾಲಕರ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಕರಣ್ ಕಳೆದ ಒಂದು ವರ್ಷದಿಂದ ಬೆಂಗಳೂರು ಹೇಬಾಲ್ ಅಕಾಡೆಮಿ ಮುಖ್ಯ ಕೋಚ್ ಮತ್ತು ಸಂಸ್ಥಾಪಕ ಪ್ರಣೀತ್ ಜೆ ರಾಮಚಂದಾನಿ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈಗ ಕರಣ್ 2026ರ ವಿಶ್ವ ಜೂನಿಯರ್ ಹೇಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಮತ್ತು ವೃತ್ತಿಪರ ಹೇಬಾಲ್ ಆಟಗಾರನಾಗಲು ಶ್ರಮಿಸುತ್ತಿದ್ದಾರೆ.
ಒಂದು ವರ್ಷದಲ್ಲಿ ಮಹತ್ತರ ಬೆಳವಣಿಗೆ
ಕಳೆದ ಒಂದು ವರ್ಷದಲ್ಲಿ ಕರಣ್ ಬೆಂಗಳೂರಿನ ಹೇಬಾಲ್ ಅಕಾಡೆಮಿಯಲ್ಲಿ ತನ್ನ ಆಟದ ಕೌಶಲ್ಯವನ್ನು ಸಾಣೆ ಹಿಡಿದಿದ್ದಾರೆ. ತಂತ್ರಗಳ ಸುಧಾರಣೆ, ಕಾರ್ಯತಂತ್ರದ ಆಟ ಮತ್ತು ಮಾನಸಿಕವಾಗಿ ಆಟ ಗೆಲ್ಲುವ ವಿಧಾನ ಕರಗತಗೊಳಿಸುವುದರ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ. ಬೆಲ್ಜಿಯಂನಲ್ಲಿ ಲೆವೆಲ್ 2 ಕೋಚಿಂಗ್ ಸರ್ಟಿಫಿಕೇಶನ್ ಪೂರ್ಣಗೊಳಿಸಿರುವ ಪ್ರಣೀತ್ ಜೆ ರಾಮಚಂದಾನಿ ಕೋಚಿಂಗ್ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಅವರು ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸ್ಪರ್ಧಾತ್ಮಕ ದಾಖಲೆ ಹೊಂದಿದ್ದಾರೆ.
ಈ ಕುರಿತು ಮಾತನಾಡಿರುವ ಕರಣ್ ಗೋಕುಲ್ ಶೇಷಾದ್ರಿ, “ಪ್ರಣೀತ್ ಸರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರಿಂದ ನನ್ನ ಆಟ ಸುಧಾರಿಸಿದೆ. ಈಗ ಬೆಳ್ಳಿ ಪದಕ ಗೆದ್ದಿರುವುದು 2026ರ ವಿಶ್ವ ಜೂನಿಯರ್ ಹೇಬಾಲ್ ಚಾಂಪಿಯನ್‌ಷಿಪ್‌ಗೆ ತಯಾರಾಗಲು ಸ್ಫೂರ್ತಿ ವಿಶ್ವಾಸ ನೀಡಿದೆ” ಎಂದು ಹೇಳಿದರು.
ಜನಪ್ರಿಯವಾಗುತ್ತಿರುವ ಕ್ರೀಡೆ
ಹೇಬಾಲ್ ವಿಶ್ವಾದ್ಯಂತ ವೇಗವಾಗಿ ಜನಪ್ರಿಯವಾಗುತ್ತಿದೆ. ಅದಕ್ಕೆ ಪೂರಕವಾಗಿ ಈ ವರ್ಷ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸುಮಾರು 10 ದಶಲಕ್ಷ ಯುಎಸ್ ಡಾಲರ್ ಗಳಷ್ಟು ಬಹುಮಾನವನ್ನು ನೀಡಲಾಗುತ್ತಿದೆ. ಅಲ್ಲದೇ ಈ ಕ್ರೀಡೆಯು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸೇರ್ಪಡೆಗೊಳ್ಳಲು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೇಬಾಲ್ ಅಕಾಡೆಮಿ ಯುವ ಆಟಗಾರರಿಗೆ ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿಯನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ನೆರವಾಗುತ್ತದೆ.
ಈ ಕುರಿತು ಪ್ರಣೀತ್ ಜೆ ರಾಮಚಂದಾನಿ ಅವರು, “ ಕರಣ್ ಅವರ ಕಳೆದ ಒಂದು ವರ್ಷದ ಬೆಳವಣಿಗೆಯು ಆಕರ್ಷಕವಾಗಿದೆ. ರಚನಾತ್ಮಕ ತರಬೇತಿ ಮತ್ತು ಕೌಶಲ್ಯಗಳು ಮತ್ತು ಕಾರ್ಯತಂತ್ರದ ಮೇಲೆ ಗಮನ ಹರಿಸಿದ್ದರಿಂದ ಯುವ ಆಟಗಾರರಿಗೆ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಹಾಯವಾಗುತ್ತಿದೆ” ಎಂದು ಹೇಳಿದರು.