

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ಹಿರಿಯ ಆಟಗಾರರಾದ ಕನ್ನಡಿಗ ದೊಡ್ಡ ಗಣೇಶ್ ಅವರು ಇದೀಗ ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆಗಸ್ಟ್ 13ರಂದು ಸಿಖ್ ಯೂನಿಯನ್ ಕ್ಲಬ್‌ನಲ್ಲಿ ಕೀನ್ಯಾ ಕ್ರಿಕೆಟ್ ಅಧಿಕಾರಿಗಳೊಂದಿಗೆ ಪರಸ್ಪರ ಕೈಮೀಲಾಯಿಸುವ ಮೂಲಕ ಒಪ್ಪಂದ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಕ್ರಿಕೆಟ್ ಬಗ್ಗೆ ಅಪಾರ ಜ್ಞಾನ ಅರಿತಿರುವ ಗಣೇಶ್, ನಿವೃತ್ತಿ ನಂತರ ತರಬೇತುದಾರರಾಗಿ ಒಳ್ಳೆಯ ಅನುಭವ ಹೊಂದಿದ್ದಾರೆ. ಅವರ ಸಾಧನೆ ಹಾಗೂ ಕ್ರಿಕೆಟ್ ವೃತ್ತಿ ಸ್ಮರಿಸಿದ ಕೀನ್ಯಾ ಕ್ರಿಕೆಟ್ ಮಂಡಳಿ, ಗಣೇಶ್ರನ್ನು ತಮ್ಮ ಹೆಡ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
"ಕೀನ್ಯಾ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕಗೊಂಡ ಬಳಿಕ ನನ್ನ ಮೊದಲ ಗುರಿಯೇ ವಿಶ್ವಕಪ್‌ಗೆ ಅರ್ಹತೆ ಪಡೆಯುವುದು. 1996, 1999, 2003, 2007 ಮತ್ತು 2011ರಲ್ಲಿ ವಿಶ್ವಕಪ್‌ನಲ್ಲಿ ಕೀನ್ಯಾ ಭಾಗವಹಿಸಿದೆ. ತಂಡದ ಕಠಿಣ ಪರಿಶ್ರಮ ಹಾಗೂ ಗುರಿಯನ್ನು ನಾನು ನೋಡಿದ್ದೇನೆ. ಆದರೆ, ಕಳೆದ 10 ವರ್ಷಗಳ ನಡುವೆ ಏನಾಯಿತು ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ನಾನು ಇತಿಹಾಸದ ಬಗ್ಗೆ ಮಾತನಾಡಲು ಬಯಸೋದಿಲ್ಲ. ಪಾಸಿಟಿವ್ ಆಗಿ ನೋಡುವ ನನಗೆ ಕೀನ್ಯಾದವರು ಚಾಂಪಿಯನ್ಸ್ ಆಗಿ ಕಾಣ್ತಾರೆ" ಎಂದು ದೊಡ್ಡ ಗಣೇಶ್ ಹೇಳಿದ್ದಾರೆ.(ಏಜೆನ್ಸೀಸ್)