ಬಾಂಗ್ಲಾ ಕ್ರಿಕೆಟಿಗ ಶಕೀಬ್ ವಿರುದ್ಧ ಬಾಲಿವುಡ್ ನಟಿ ಕಂಗನಾ ಹರಿಹಾಯ್ದಿದ್ದೇಕೆ?

kangana web
Published on

ನವದೆಹಲಿ: ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಇತ್ತೀಚೆಗೆ ಕೋಲ್ಕತದಲ್ಲಿ ಕಾಳಿ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಯಾಗಿ ಮೂಲಭೂತವಾದಿಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಅದರ ಬೆನ್ನಲ್ಲೇ ಶಕೀಬ್ ಕ್ಷಮೆಯಾಚಿಸಿದ್ದರು. ಶಕೀಬ್ ಅವರ ಈ ನಡೆಯ ಬಗ್ಗೆ ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ಹರಿಹಾಯ್ದಿದ್ದಾರೆ.

ಶಕೀಬ್ ಉಲ್ ಹಸನ್ ಹೆಸರು ಹೇಳದೆ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, ದೇವಸ್ಥಾನಗಳ ಬಗ್ಗೆ ಜನರು ಯಾಕೆ ಹೆದರುತ್ತಾರೆ? ಹಿಂದುಗಳು ಮಸೀದಿಯಲ್ಲಿ ಜೀವಿಸಿದರೂ, ರಾಮನ ಹೆಸರನ್ನು ಅವರ ಹೃದಯದಿಂದ ತೆಗೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಶಕೀಬ್ ಕ್ಷಮೆಯಾಚಿಸಿದ್ದಾರೆ ಎಂಬ ಸುದ್ದಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಂಗನಾ, ಅವರ ನಂಬಿಕೆಯನ್ನೇ ಪ್ರಶ್ನಿಸಿದ್ದಾರೆ. ಹಿಂದುಗಳ ಆಚರಣೆಗಳು ಮುಸ್ಲಿಮರನ್ನು ದೇವಸ್ಥಾನಗಳಿಗೆ ಆಕರ್ಷಿಸುತ್ತಿವೆಯೇ ಎಂದೂ ಪ್ರಶ್ನಿಸಿದ್ದಾರೆ.

ಶಕೀಬ್ ಅಲ್ ಹಸನ್ ನವೆಂಬರ್ 12ರಂದು ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸಿ ಕೋಲ್ಕತದಲ್ಲಿ ಕಾಳಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಜೀವಬೆದರಿಕೆಗಳನ್ನು ಒಡ್ಡಲಾಗಿತ್ತು. ಓರ್ವ ವ್ಯಕ್ತಿಯಂತೂ ಫೇಸ್‌ಬುಕ್ ಲೈವ್‌ನಲ್ಲಿ ದೊಡ್ಡ ಕತ್ತಿಯೊಂದನ್ನು ತೋರಿಸಿ ಶಕೀಬ್‌ಗೆ ಬೆದರಿಕೆ ಒಡ್ಡಿದ್ದ. ಬಳಿಕ ಬಾಂಗ್ಲಾ ಪೊಲೀಸರು ಆತನನ್ನು ಬಂಧಿಸಿದ್ದರು. ಈ ನಡುವೆ ಶಕೀಬ್, ತನ್ನ ವರ್ತನೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದರು. ಜತೆಗೆ ತಮ್ಮ ರಕ್ಷಣೆಗೆ ಗನ್‌ಮ್ಯಾನ್ ನೇಮಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net