

ಟೋಕಿಯೊ: ಭಾರತದ ಡಿಸ್ಕಸ್‌ಥ್ರೋ ಪಟು ಕಮಲ್‌ಪ್ರೀತ್ ಕೌರ್ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 3ನೇ ಯತ್ನದಲ್ಲಿ 63.70 ಮೀಟರ್ ಎಸೆದಿದ್ದೆ ಅವರ ಶ್ರೇಷ್ಠ ನಿರ್ವಹಣೆಯಾಗಿತ್ತು. ಮೊದಲ ಯತ್ನದಲ್ಲಿ 61.62 ಮೀಟರ್ ಎಸೆಯುವ ಮೂಲಕ ಉತ್ತಮ ಆರಂಭ ಕಂಡ ಕಮಲ್‌ಪ್ರೀತ್, ಎರಡನೇ ಯತ್ನವನ್ನು ಫೌಲ್ ಮಾಡಿಕೊಂಡರು. 3ನೇ ಯತ್ನದಲ್ಲಿ ಪ್ರಗತಿ ಕಂಡರೂ 4ನೇ ಯತ್ನದಲ್ಲಿ ಮತ್ತೊಮ್ಮೆ ಎಡವಿದರು. ಆದರೆ, 5ನೇ ಯತ್ನದಲ್ಲಿ ಕಮಲ್‌ಪ್ರೀತ್ ನಿರ್ವಹಣೆ 61.37 ಮೀಟರ್‌ಗೆ ಕುಸಿತ ಕಂಡಿತು. ಕಡೇ ಹಾಗೂ 6ನೇ ಯತ್ನದಲ್ಲಿ ಫೌಲ್ ಎಸೆದ ಭಾರತೀಯ ಡಿಸ್ಕಸ್ ಥ್ರೋಪಟು ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ನಿರಾಸೆ ಅನುಭವಿಸಿದರು.
25 ವರ್ಷದ ಕಮಲ್‌ಪ್ರೀತ್, 3ನೇ ಯತ್ನದಲ್ಲಿ 2010ರ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಕೃಷ್ಣ ಪೂನಿಯಾ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರ ಸಾಧನೆಯನ್ನು ಸರಿಗಟ್ಟಲಷ್ಟೇ ಶಕ್ತರಾದರು. ಸುಮಾರು ಒಂದು ಗಂಟೆಗಳ ಕಾಲ ಸ್ಪರ್ಧೆಗೆ ಮಳೆ ಅಡ್ಡಿಪಡಿಸಿತು. ವೈಯಕ್ತಿಕ ಕೋಚ್ ಸಹಾಯ ಇಲ್ಲದೆ ಸ್ಪರ್ಧಾ ಕಣಕ್ಕಿಳಿದ ಕೌರ್, ಸಾಕಷ್ಟು ಒತ್ತಡಕ್ಕೆ ಸಿಲುಕಿದಂತೆ ಕಂಡರು. 2017ರ ವಲ್ಡ್ ಯುನಿವರ್ಸಿಟಿ ಕ್ರೀಡಾಕೂಟದ ಬಳಿಕ ಕೌರ್ ಸ್ಪರ್ಧಿಸಿದ 2ನೇ ಅಂತಾರಾಷ್ಟ್ರೀಯ ಕ್ರೀಡಾಕೂಟ ಇದಾಗಿತ್ತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಅನುಭವ ಕೂಡ ಕೌರ್ ಅವರನ್ನು ಕಾಡಿತು.
ಪಂಜಾಬ್‌ನ ರೈತಾಪಿ ಕುಟುಂಬದ ಕೌರ್, ಶನಿವಾರ ಅರ್ಹತಾ ಸುತ್ತಿನಲ್ಲಿ 64 ಮೀಟರ್ ಎಸೆಯುವ ಮೂಲಕ ಪದಕದ ನಿರೀಕ್ಷೆ ಮೂಡಿಸಿದ್ದರು. ಇದೇ ವಿಭಾಗದಲ್ಲಿ ಅಮೆರಿಕದ ವಾಲರೀ ಅಲ್ಮಾನ್, ಮೊದಲ ಯತ್ನದಲ್ಲೇ 68.98 ಮೀಟರ್ ಎಸೆದು ಸ್ವರ್ಣ ಪದಕ ಜಯಿಸಿದರೆ, ಜರ್ಮನಿಯ ಕ್ರಿಸ್ಟಿನ್ ಪುಡೆನ್ (66.86ಮೀ) ಹಾಗೂ ಹಾಲಿ ವಿಶ್ವ ಚಾಂಪಿಯನ್ ಕ್ಯೂಬಾದ ಯೈಮಿ ಪೆರೆಜ್ (65.72 ಮೀ) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 2 ಬಾರಿ ಚಾಂಪಿಯನ್ ಕ್ರೊವೇಷಿಯಾದ ಸಾಂದ್ರ ಪೆರ್ಕೊವಿಕ್ (65.01ಮೀ) 4ನೇ ಸ್ಥಾನಕ್ಕೆ ಕುಸಿದರು.