

ಮಂಗಳೂರು: ಕಂಬಳದ ಬೋಲ್ಟ್ ಎಂದೇ ದೇಶಾದ್ಯಂತ ಸುದ್ದಿಯಾಗಿರುವ ಶ್ರೀನಿವಾಸ ಗೌಡ ತಮ್ಮ ಬಿಡುವಿಲ್ಲದ ಕಂಬಳ ಓಟದ ನಡುವೆಯೇ ಬೆಂಗಳೂರಿನಲ್ಲಿ ಅಥ್ಲೆಟಿಕ್ಸ್ ಟ್ರಯಲ್ಸ್‌ಗೆ ದೌಡಾಯಿಸುತ್ತಿದ್ದಾರೆ.
ಶನಿವಾರ, ಭಾನುವಾರ ಎರಡೂ ದಿನ ಕಂಬಳದಲ್ಲಿ ಬ್ಯುಸಿ ಇದ್ದ ಅವರು ಭಾನುವಾರ ರಾತ್ರಿವರೆಗೂ ಅದರಲ್ಲೇ ತೊಡಗಿಸಿಕೊಂಡಿದ್ದರು. ರೈಲ್ವೆ ಟಿಕೆಟ್ ಇದ್ದರೂ ಅದರಲ್ಲಿ ಹೋಗುತ್ತಿಲ್ಲ, ಬದಲಾಗಿ ಸೋಮವಾರ ಬೆಳಗ್ಗೆ 5 ಗಂಟೆಗೆ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತೇವೆ. ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆದ ಬಳಿಕ ಸಿಎಂ ಭೇಟಿ ಅಥವಾ ಯಾವುದೇ ಅಧೀಕಾರಿಗಳ ಭೇಟಿ ಮಾಡಲಿದ್ದೇವೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳೇ ನಮಗೆ ಮಾಹಿತಿ ನೀಡಬೇಕು ಎಂದು ಕಂಬಳ ಅಕಾಡೆಮಿ ಅಧ್ಯಕ್ಷ ಗುಣಪಾಲ ಕಡಂಬ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 10.30ಕ್ಕೆ ಓಟದ ಟ್ರಯಲ್ಸ್ ನೀಡುವಂತೆ ಸಾಯ್(ಭಾರತೀಯ ಕ್ರೀಡಾ ಪ್ರಾಧಿಕಾರ) ಅಧಿಕಾರಿಗಳು ಹೇಳಿದ್ದರು. ಅದು ಅಸಾಧ್ಯ ಎಂದು ತಿಳಿಸಿದ್ದೇವೆ. ಮಂಗಳವಾರ ನೀಡುವುದಾದರೆ ಸಿದ್ಧವಿರುವುದಾಗಿಯೂ ತಿಳಿಸಲಾಗಿದೆ.
ಉಪರಾಷ್ಟ್ರಪತಿ ಶ್ಲಾಘನೆ
ಶ್ರೀನಿವಾಸ ಗೌಡ ಅವರಿಗೆ ನಾಡಿನೆಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡಾ ಟ್ವೀಟ್ ಮಾಡಿ, ಶ್ರೀನಿವಾಸ ಗೌಡ ಸಾಧನೆಯನ್ನು ಹೊಗಳಿದ್ದಾರೆ. ಸಾಧನೆ ಗುರುತಿಸಿ, ಸಾಯ್ ತರಬೇತಿ ನೀಡಲು ಆಹ್ವಾನಿಸಿದ್ದಕ್ಕಾಗಿ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೇಣೂರಿನಲ್ಲೂ ಸಾಧನೆ
ವೇಣೂರು ಪೆರ್ಮುಡದಲ್ಲಿ ಭಾನುವಾರ ಸಮಾಪನಗೊಂಡ 27ನೇ ವರ್ಷದ ಸೂರ್ಯಚಂದ್ರ ಜೋಡುಕರೆ ಕಂಬಳದಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಮೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡರು.