ಲೆಜೆಂಡ್ಸ್ ಕ್ರಿಕೆಟ್ ಲೀಗ್; ಇಂಡಿಯಾ ಮಹಾರಾಜ ತಂಡಕ್ಕೆ ಕರ್ನಾಟಕದ ಮಾಜಿ ಆಲ್ರೌಂಡರ್ ಸೇರ್ಪಡೆ

kaif and binny news for web
Published on

ನವದೆಹಲಿ: ಮಾಜಿ ಆಟಗಾರರಾದ ಮೊಹಮದ್ ಕೈಫ್, ಹಾಗೂ ಸ್ಟುವರ್ಟ್ ಬಿನ್ನಿ ಜನವರಿ 20ರಿಂದ ಒಮನ್‌ನಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ಗೆ (ಎಲ್‌ಎಲ್‌ಸಿ) ಭಾರತದ ಇಂಡಿಯಾ ಮಹಾರಾಜ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ನಿವೃತ್ತ ಕ್ರಿಕೆಟಿಗರ ವೃತ್ತಿಪರ ಕ್ರಿಕೆಟ್ ಲೀಗ್ ಇದಾಗಿದ್ದು, ಈಗಾಗಲೇ ಭಾರತ ತಂಡ ಪ್ರಕಟಿಸಲಾಗಿತ್ತು. ಇದೀಗ ಇಬ್ಬರು ಮಾಜಿ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಸ್ಟುವರ್ಟ್ ಬಿನ್ನಿ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಏಕೈಕ ಆಟಗಾರ ಎನಿಸಿದ್ದಾರೆ.

ಮೊಹಮದ್ ಕೈಫ್, ಹಾಗೂ ಸ್ಟುವರ್ಟ್ ಬಿನ್ನಿ ಭಾರತೀಯ ಕ್ರಿಕೆಟ್‌ಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಈ ಲೀಗ್‌ನಲ್ಲಿ ಅಂಥ ಆಟಗಾರರು ಆಡಬೇಕು. ಕೈಫ್ ಹಾಗೂ ಬಿನ್ನಿ ಲೀಗ್‌ನಲ್ಲಿ ಉತ್ತಮ ನಿರ್ವಹಣೆ ತೋರುವ ವಿಶ್ವಾಸವಿದೆ ಎಂದು ಲೀಗ್ ಕಮಿಷನರ್ ರವಿ ಶಾಸ್ತ್ರಿ ತಿಳಿಸಿದ್ದಾರೆ. ಈಗಾಗಲೇ ಪ್ರಕಟಿಸಲಾಗಿರುವ ತಂಡದಲ್ಲಿ ಮಾಜಿ ಸ್ಟಾರ್ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಸ್ಥಾನ ಪಡೆದಿದ್ದಾರೆ.

ನಿವೃತ್ತ ಕ್ರಿಕೆಟಿಗರ ವೃತ್ತಿಪರ ಕ್ರಿಕೆಟ್ ಲೀಗ್ ಇದಾಗಿದ್ದು, ಏಷ್ಯಾ ಇಲೆವೆನ್ ಮತ್ತು ಶೇಷ ವಿಶ್ವ ಸಹಿತ ಒಟ್ಟು 3 ತಂಡಗಳು ಸ್ಪರ್ಧಿಸಲಿವೆ. ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಎಸ್. ಬದ್ರಿನಾಥ್, ಆರ್‌ಪಿ ಸಿಂಗ್, ಪ್ರಜ್ಞಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಂಗ್ ಬದಾನಿ, ಮುನಾಫ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ತಂಡದ ಇತರ ಆಟಗಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net