

ಬೆಂಗಳೂರು: ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಲವು ಕ್ರೀಡಾಸ್ಪರ್ಧೆಗಳು ನಡೆದವು. ಈ ಪೈಕಿ ಕೆಲ ಕ್ರೀಡೆಗಳು ಭಾರತೀಯರಿಗೆ ಪರಿಚಿತವಲ್ಲದವು ಆಗಿದ್ದರೆ, ಇನ್ನು ಕೆಲವು ಪರಿಚಿತವಾಗಿದ್ದರೂ ಪದಕ ಗೆಲುವು ಸುಲಭವಾಗಿರದ ಕ್ರೀಡೆಗಳಾಗಿದ್ದವು. ಈ ನಡುವೆ ಕಬಡ್ಡಿಯಂಥ ನಮ್ಮ ಮಣ್ಣಿನ ಕ್ರೀಡೆ ಒಲಿಂಪಿಕ್ಸ್‌ನಲ್ಲಿ ಯಾಕೆ ಇಲ್ಲ ಎಂಬ ಪ್ರಶ್ನೆ ಭಾರತೀಯರನ್ನು ಆಗಾಗ ಕಾಡುತ್ತಲೇ ಇರುತ್ತದೆ. ಕ್ರಿಕೆಟ್ ಆಟವನ್ನು 2028ರ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಲು ಐಸಿಸಿ ಮುಂದಾಗಿರುವ ನಡುವೆ ಕಬಡ್ಡಿ ಆಟವನ್ನು ಒಲಿಂಪಿಕ್ಸ್‌ಗೆ ಯಾಕೆ ಸೇರಿಸಬಾರದು ಎಂಬ ಪ್ರಶ್ನೆಯೂ ಹಲವರಲ್ಲಿ ಮೂಡಿದೆ. ಅದಕ್ಕೆ ಸೂಕ್ತ ಉತ್ತರ ಬೇಕಿದ್ದರೆ ಈ ಸ್ಟೋರಿ ಓದಿ...
ಕಬಡ್ಡಿ ಆಟ ಭಾರತ ಮಾತ್ರವಲ್ಲದೆ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಜನಪ್ರಿಯವಾದ ಕ್ರೀಡೆಯಾಗಿದೆ. ಇತ್ತೀಚೆಗೆ ಪ್ರೊ ಕಬಡ್ಡಿ ಲೀಗ್‌ನಿಂದಾಗಿ ಕಬಡ್ಡಿ ಆಟಗಾರರು ಸಾಕಷ್ಟು ಮೊತ್ತದ ಬಹುಮಾನ, ಸಂಭಾವನೆಗಳನ್ನೂ ಕಂಡಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲೂ ಕಬಡ್ಡಿ ಪದಕ ಸ್ಪರ್ಧೆಯಾಗಿದೆ. ಆದರೆ ಒಲಿಂಪಿಕ್ಸ್‌ನಂಥ ಜಾಗತಿಕ ಕ್ರೀಡಾಕೂಟಕ್ಕೆ ಪ್ರವೇಶ ಪಡೆಯಬೇಕಾದರೆ ಕಬಡ್ಡಿ ಆಟ ಇನ್ನಷ್ಟು ಸಮಯ ಕಾಯಬೇಕಾಗಿದೆ ಮತ್ತು ಈ ನಿಟ್ಟಿನಲ್ಲಿ ಸಾಕಷ್ಟು ಅಚ್ಚುಕಟ್ಟಾದ ಪ್ರಯತ್ನಗಳೂ ನಡೆಯಬೇಕಾದ ಅಗತ್ಯವಿದೆ.
ಒಲಿಂಪಿಕ್ಸ್‌ಗೆ ಕ್ರೀಡೆಯೊಂದು ಸೇರ್ಪಡೆಗೊಳ್ಳಬೇಕಾದರೆ ಅದರ ಜಾಗತಿಕ ಮನ್ನಣೆಯೂ ಮಾನದಂಡವೆನಿಸುತ್ತದೆ. ಅಂದರೆ ಕ್ರೀಡೆಯೊಂದು ಒಲಿಂಪಿಕ್ಸ್‌ನ ಭಾಗವಾಗಬೇಕಾದರೆ 4 ಖಂಡಗಳಲ್ಲಿ ಕನಿಷ್ಠ 75 ದೇಶಗಳಲ್ಲಿ ಜನಪ್ರಿಯವಾಗಿರಬೇಕಾಗುತ್ತದೆ. ಅಂದರೆ 75 ದೇಶಗಳು ಈ ಕ್ರೀಡೆಗೆ ಸಮರ್ಥ ಆಡಳಿತ ಸಂಸ್ಥೆಯನ್ನು ಹೊಂದಿರಬೇಕಾಗುತ್ತದೆ. ಆದರೆ ಕಬಡ್ಡಿ ಕ್ರೀಡೆ ಸದ್ಯ 4 ಖಂಡಗಳಿಗೆ ವ್ಯಾಪಿಸಿದ್ದರೂ, ಏಷ್ಯಾದಷ್ಟು ಇತರ ಖಂಡಗಳಲ್ಲಿ ಜನಪ್ರಿಯತೆ ಹೊಂದಿಲ್ಲ. ಇನ್ನು 31 ದೇಶಗಳಲ್ಲಿ ಮಾತ್ರ ಕಬಡ್ಡಿ ಆಡಳಿತ ಸಂಸ್ಥೆ ಅಸ್ತಿತ್ವದಲ್ಲಿದೆ. ಇದು ಕಬಡ್ಡಿ ಕ್ರೀಡೆಯನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಲು ಬಹುದೊಡ್ಡ ಅಡಚಣೆಯಾಗಿದೆ.
ಕಬಡ್ಡಿ ಆಟ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಬೇಕಾದರೆ ಹೆಚ್ಚಿನ ದೇಶಗಳು ಈ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಆಗಾಗ ಮಾತುಗಳು ಕೇಳಿಬರುತ್ತಿದ್ದರೂ, ಗಂಭೀರವಾಗಿ ಪ್ರಯತ್ನಗಳು ನಡೆಯದೇ ಇರುವುದು ಹಿನ್ನಡೆಯಾಗಿದೆ. ಕಬಡ್ಡಿ ಈ ಮುನ್ನ 1936ರ ಒಲಿಂಪಿಕ್ಸ್‌ನಲ್ಲಿ ಪ್ರದರ್ಶನ ಕ್ರೀಡೆಯಾಗಿತ್ತು. ಆದರೆ ಅನಂತರದಲ್ಲಿ ಈ ಸಂಬಂಧ ಸಮರ್ಥ ಪ್ರಯತ್ನಗಳು ನಡೆದಿಲ್ಲ. ಒಂದು ವೇಳೆ ನಡೆದಿದ್ದೇ ಆದರೆ 2024 ಅಲ್ಲದಿದ್ದರೂ, 2028 ಅಥವಾ 2032ರ ಒಲಿಂಪಿಕ್ಸ್‌ನಲ್ಲಾದರೂ ಕಬಡ್ಡಿ ಆಟವನ್ನು ಪದಕ ಸ್ಪರ್ಧೆಯಾಗಿ ನೋಡುವ ಸುಯೋಗ ಭಾರತೀಯರದ್ದಾಗಲಿದೆ.