2019ರ ವಿಶ್ವಕಪ್​ನಲ್ಲಿ ಆಡಿದ ಬ್ಯಾಟ್ ಹರಾಜಿಗಿಟ್ಟ ರಾಹುಲ್!

page 10 5
Published on

ಮುಂಬೈ: ಭಾರತ ತಂಡದ ಬ್ಯಾಟ್ಸ್​ಮನ್ ಕೆಎಲ್ ರಾಹುಲ್, 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಳಸಿದ ಬ್ಯಾಟ್ ಸೇರಿದಂತೆ ಇನ್ನಿತರ ಕೆಲ ಕ್ರಿಕೆಟ್ ಪರಿಕರಗಳನ್ನು ಹರಾಜಿ ಗಿಟ್ಟಿದ್ದಾರೆ. ಇದರಿಂದ ಬಂದ ಹಣವನ್ನು ‘ಅವೇರ್ ಫೌಂಡೇಷನ್’ ಸಂಸ್ಥೆಗಾಗಿ ದೇಣಿಗೆ ನೀಡಲಿದ್ದಾರೆ. ‘ನನ್ನ ಪಾಲಿಗೆ ಇದೊಂದು ವಿಶೇಷವಾದ ದಿನ, ನಾನು, ನನ್ನ ಬ್ರಾ್ಯಂಡ್ ‘ಗಲ್ಲಿ’ ಜತೆಗೂಡಿ ವಿಶೇಷವಾದ ಉಡುಗೊರೆ ನೀಡಬೇಕೆಂದು ನಿರ್ಧರಿಸಿದೆ’ ಎಂದು ಇತ್ತೀಚೆಗಷ್ಟೇ 28ನೇ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

‘ನಾನು ಕ್ರಿಕೆಟ್ ಪ್ಯಾಡ್ಸ್, ಗ್ಲೌಸ್, ಹೆಲ್ಮೆಟ್ಸ್, ಜೆರ್ಸಿಗಳನ್ನು ಹರಾಜಿಗೆ ಇಟ್ಟಿದ್ದೇನೆ. ಇದರಿಂದ ಬರುವ ಮೊತ್ತವನ್ನು ಅವೇರ್ ಫೌಂಡೇಷನ್​ಗೆ ನೀಡುವೆ’ ಎಂದಿದ್ದಾರೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಈ ಫೌಂಡೇಷನ್ ದುಡಿಯುತ್ತಿದೆ. ಇಂಥ ಸಂಸ್ಥೆಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದರು. ಇದಕ್ಕೂ ಮೊದಲು ರಾಹುಲ್, ಹಲವು ಬಾರಿ ಪ್ರಾಣಿಗಳ ಕಲ್ಯಾಣ ಸಂಸ್ಥೆಗಳಿಗೆ ಸಹಾಯ ಧನ ನೀಡಿದ್ದಾರೆ. ಜತೆಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದ್ದರು. ಇದೀಗ ಆ ಮಗು ಸಂಪೂರ್ಣ ಚೇತರಿಸಿಕೊಂಡಿದೆ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾರಿಟಿಗಳಿಗೆ ಬೆಂಬಲ ನೀಡುವಂತೆ ರಾಹುಲ್ ಮನವಿ ಮಾಡುತ್ತಾರೆ. ಲಾಕ್​ಡೌನ್ ವೇಳೆಗೆ ನೆರವು ನೀಡುತ್ತಿರುವ ಎನ್​ಜಿಎ ಸಂಸ್ಥೆಯೊಂದಕ್ಕೆ ನೆರವು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net