

ಲಿಸ್ಬನ್: ಪೋರ್ಚುಗಲ್‌ನ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಕರೊನಾ ಸೋಂಕಿತರಾಗಿದ್ದಾರೆ. ಕರೊನಾ ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಅವರು ಬುಧವಾರ ನಡೆಯಲಿರುವ ಸ್ವೀಡನ್ ವಿರುದ್ಧದ ನೇಷನ್ಸ್ ಲೀಗ್ ಪಂದ್ಯಕ್ಕೆ ರಾಷ್ಟ್ರೀಯ ತಂಡದಿಂದ ಹೊರಗುಳಿಯಲಿದ್ದಾರೆ.
ಜುವೆಂಟಸ್ ಕ್ಲಬ್‌ನ ಸ್ಟಾರ್ ಸ್ಟ್ರೈಕರ್ ರೊನಾಲ್ಡೊ ಲಕ್ಷಣರಹಿತವಾಗಿದ್ದು, ಐಸೋಲೇಷನ್‌ನಲ್ಲಿದ್ದಾರೆ ಎಂದು ಪೋರ್ಚುಗಲ್ ಫುಟ್‌ಬಾಲ್ ಫೆಡರೇಷನ್ ಮಂಗಳವಾರ ತಿಳಿಸಿದೆ.
ಪೋರ್ಚುಗಲ್ ತಂಡದ ಇತರೆಲ್ಲ ಆಟಗಾರರ ಕರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದು, ಅವರೆಲ್ಲರೂ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ರೊನಾಲ್ಡೊ ಸೋಮವಾರವಷ್ಟೇ ತಂಡದ ಸದಸ್ಯರೊಂದಿಗೆ ಊಟ ಮಾಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಬಳಿಕ ಮಂಗಳವಾರ ತಂಡದ ಇತರ ಆಟಗಾರರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿತ್ತು.