

ಕಿಂಬರ್ಲಿ: ಭವಿಷ್ಯದ ಕ್ರಿಕೆಟ್ ತಾರೆಯರ ಮಹಾಟೂರ್ನಿ ಎಂದೇ ಪರಿಗಣಿಸಲ್ಪಡುವ 19 ವಯೋಮಿತಿಯ ಏಕದಿನ ವಿಶ್ವಕಪ್ ಟೂರ್ನಿಯ 13ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಎ ಗುಂಪಿನಲ್ಲಿರುವ ಹಾಲಿ ಚಾಂಪಿಯನ್ ಭಾರತ ತಂಡ ಬ್ಲೋಮ್ಾಂಟೇನ್ನಲ್ಲಿ ಭಾನುವಾರ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 9ರಂದು ಫೈನಲ್ ಪಂದ್ಯ ನಡೆಯಲಿದೆ. 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, 2 ಬಾರಿಯ ಚಾಂಪಿಯನ್ ಪಾಕಿಸ್ತಾನ, ಮಾಜಿ ಚಾಂಪಿಯನ್ಗಳಾದ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಫೇವರಿಟ್ ತಂಡಗಳ ಪಟ್ಟಿಯಲ್ಲಿವೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿವೆ. ಯುವ ಆಟಗಾರರಿಗೆ ರಾಷ್ಟ್ರೀಯ ತಂಡದ ಬಾಗಿಲು ತಟ್ಟಲು ಈ ಟೂರ್ನಿ ಪ್ರಮುಖ ವೇದಿಕೆಯಾಗಿದೆ.
ಭಾರತ ಹಾಟ್ ಫೇವರಿಟ್: ದಾಖಲೆಯ ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡ ಈ ಬಾರಿ ಪ್ರಿಯಂ ಗಾರ್ಗ್ ಸಾರಥ್ಯದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಹೋರಾಟ ನಡೆಸಲಿದೆ. ಈಗಾಗಲೆ ದಕ್ಷಿಣ ಆಫ್ರಿಕಾ ನೆಲದಲ್ಲಿ ವಿಶ್ವಕಪ್ ಪೂರ್ವಭಾವಿಯಾಗಿ ಆತಿಥೇಯರೆದುರು ಆಡಿದ ದ್ವಿಪಕ್ಷೀಯ ಸರಣಿ ಮತ್ತು ಚತುಷ್ಕೋನ ಸರಣಿಗಳಲ್ಲಿ ಗೆದ್ದ ವಿಶ್ವಾಸ ಭಾರತ ತಂಡಕ್ಕಿದೆ. ಕನ್ನಡಿಗರಾದ ಶುಭಾಂಗ್ ಹೆಗ್ಡೆ ಮತ್ತು ವಿದ್ಯಾಧರ್ ಪಾಟೀಲ್ ತಂಡದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯಿ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ಧ್ರುವಚಂದ್ ಜುರೆಲ್, ಅಥರ್ವ ಅಂಕೋಲ್ಕರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. -ಏಜೆನ್ಸೀಸ್
ಸ್ಟಾರ್ ಕ್ರಿಕೆಟಿಗರನ್ನು ನೀಡಿರುವ ಟೂರ್ನಿ
ವಿಶ್ವ ಕ್ರಿಕೆಟ್ನಲ್ಲಿ ಕಳೆದೆರಡು ದಶಕದಲ್ಲಿ ಮಿಂಚಿರುವ ಬಹುತೇಕ ಸ್ಟಾರ್ ಆಟಗಾರರು, ಕಿರಿಯರ ವಿಶ್ವಕಪ್ನಲ್ಲಿ ಆಡಿ ಬೆಳಕಿಗೆ ಬಂದವರಾಗಿದ್ದಾರೆ. ವಿಂಡೀಸ್ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 1998ರ ಆವೃತ್ತಿಯಲ್ಲಿ ಆಡಿದ್ದರೆ, ಯುವರಾಜ್ ಸಿಂಗ್ 2000ದ ವಿಶ್ವಕಪ್ನಲ್ಲಿ ಸರಣಿಶ್ರೇಷ್ಠರಾಗಿದ್ದರು. ಶಿಖರ್ ಧವನ್ 2004, ಚೇತೇಶ್ವರ ಪೂಜಾರ 2006ರಲ್ಲಿ ಆಡಿದ್ದರೆ, ವಿರಾಟ್ ಕೊಹ್ಲಿ 2008ರ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ನಾಯಕರಾಗಿದ್ದರು. ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್ ಕೂಡ ಈ ವಿಶ್ವಕಪ್ನಲ್ಲಿ ಆಡಿದ್ದರು.
ಚಾಂಪಿಯನ್ಸ್
1988: ಆಸ್ಟ್ರೇಲಿಯಾ
1998: ಇಂಗ್ಲೆಂಡ್
2000: ಭಾರತ
2002: ಆಸ್ಟ್ರೇಲಿಯಾ
2004: ಪಾಕಿಸ್ತಾನ
2006: ಪಾಕಿಸ್ತಾನ
2008: ಭಾರತ
2010: ಆಸ್ಟ್ರೇಲಿಯಾ
2012: ಭಾರತ
2014: ದಕ್ಷಿಣ ಆಫ್ರಿಕಾ
2016: ವೆಸ್ಟ್ ಇಂಡೀಸ್
2018: ಭಾರತ
ಗುಂಪುಗಳು
ಎ: ಭಾರತ, ಜಪಾನ್, ನ್ಯೂಜಿಲೆಂಡ್, ಶ್ರೀಲಂಕಾ.
ಬಿ: ಆಸ್ಟ್ರೇಲಿಯಾ, ಇಂಗ್ಲೆಂಡ್, ನೈಜೀರಿಯಾ, ವೆಸ್ಟ್ ಇಂಡೀಸ್.
ಸಿ: ಬಾಂಗ್ಲಾದೇಶ, ಪಾಕಿಸ್ತಾನ, ಸ್ಕಾಟ್ಲೆಂಡ್, ಜಿಂಬಾಬ್ವೆ.
ಡಿ: ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಕೆನಡ, ಯುಎಇ.
ಭಾರತದ ವೇಳಾಪಟ್ಟಿ
ದಿನಾಂಕ: ಎದುರಾಳಿ
ಜನವರಿ 19: ಶ್ರೀಲಂಕಾ
ಜನವರಿ 21: ಜಪಾನ್
ಜನವರಿ 24: ನ್ಯೂಜಿಲೆಂಡ್
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1
ಟೂರ್ನಿ ಸ್ವರೂಪ
ಲೀಗ್ ಹಂತದಲ್ಲಿ 16 ತಂಡಗಳನ್ನು ತಲಾ 4 ತಂಡಗಳಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ ಲೀಗ್ ಕ್ವಾರ್ಟರ್ಫೈನಲ್ಗೇರಲಿವೆ. ನಂತರ ಸೆಮಿಫೈನಲ್ಸ್, ಫೈನಲ್ ಅಲ್ಲದೆ, 3, 5 ಮತ್ತು 7ನೇ ಸ್ಥಾನ ನಿರ್ಣಯಕ್ಕಾಗಿಯೂ ಪಂದ್ಯ ನಡೆಯಲಿವೆ. ಇನ್ನು ಲೀಗ್ ಹಂತದಲ್ಲಿ ಹೊರಬಿದ್ದ 8 ತಂಡಗಳು ಪ್ಲೇಟ್ ಲೀಗ್ನಲ್ಲಿ ಆಡಲಿದ್ದು, ಇಲ್ಲೂ ಕ್ವಾರ್ಟರ್ಫೈನಲ್ಸ್, ಸೆಮಿಫೈನಲ್ಸ್, ಫೈನಲ್ಸ್ ಅಲ್ಲದೆ, 11, 13 ಮತ್ತು 15ನೇ ಸ್ಥಾನ ನಿರ್ಣಯಕ್ಕೂ ಪಂದ್ಯಗಳು ನಡೆಯಲಿವೆ.