ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಜೂಲಿಯನ್​ ಆಲ್ಫ್ರೆಡ್​ ವೇಗದ ಓಟಗಾರ್ತಿ; ಸೇಂಟ್​ ಲೂಸಿಯಾಗೆ ಮೊದಲ ಚಿನ್ನ

web 100 m.
Published on

ಪ್ಯಾರಿಸ್​: ಸೇಂಟ್​ ಲೂಸಿಯಾದ 23 ವರ್ಷದ ಓಟಗಾರ್ತಿ ಜೂಲಿಯನ್​ ಆಲ್ಫ್ರೆಡ್​ ಎಲ್ಲರ ಲೆಕ್ಕಾಚಾರಗಳನ್ನು ಮೀರಿಸಿ ಮಹಿಳೆಯರ 100 ಮೀ. ಓಟದಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಪ್ಯಾರಿಸ್​ ಒಲಿಂಪಿಕ್ಸ್​ನ ಅತಿವೇಗದ ಓಟಗಾರ್ತಿ ಎನಿಸಿದ್ದಾರೆ. ಸ್ಪರ್ಧೆಯ ಫೇವರಿಟ್​ ಎನಿಸಿದ್ದ ಅಮೆರಿಕದ ಶಾಕಾರಿ ರಿಚರ್ಡ್​ಸನ್​ ರಜತ ಪದಕಕ್ಕೆ ತೃಪ್ತಿಪಟ್ಟರೆ, ಅಮೆರಿಕದ ಮತ್ತೋರ್ವ ಓಟಗಾರ್ತಿ ಮೆಲಿಸ್ಸಾ ಜೆೆರ್​ಸನ್​ ಕಂಚಿನ ಪದಕ ಜಯಿಸಿದರು. 100 ಮೀ. ಓಟದಲ್ಲಿ ಸತತ 5ನೇ ಪದಕದ ನಿರೀಕ್ಷೆಯಲ್ಲಿದ್ದ ಜಮೈಕಾದ ಶೆಲ್ಲಿ-ಆ್ಯನ್​ ಫ್ರೇಸರ್​ ಪ್ರೈಸ್​ ಗಾಯದಿಂದಾಗಿ ಸೆಮಿಫೈನಲ್​ನಿಂದಲೇ ಹೊರಗುಳಿದರು.

ಸ್ಟೇಡ್​ ಡಿ ಫ್ರಾನ್ಸ್​ನಲ್ಲಿ ಶನಿವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಜೂಲಿಯನ್​ 10.72 ಸೆಕೆಂಡ್​ಗಳಲ್ಲಿ ಓಡಿ ರಾಷ್ಟ್ರೀಯ ದಾಖಲೆ ಬರೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಶಾಕಾರಿ 10.87 ಸೆಕೆಂಡ್​ ಮತ್ತು ಮೆಲಿಸ್ಸಾ 10.92 ಸೆಕೆಂಡ್​ಗಳಲ್ಲಿ ಓಟ ಮುಗಿಸಿದರು. ಬ್ರಿಟನ್​ನ ನೀಟಾ ಡ್ಯಾರಿಲ್​ (10.96 ಸೆ) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.

2 ಲಕ್ಷ ಜನಸಂಖ್ಯೆಯ ಕೆರಿಬಿಯನ್​ ದ್ವೀಪರಾಷ್ಟ್ರ ಸೇಂಟ್​ ಲೂಸಿಯಾಗೆ ಜೂಲಿಯನ್​ ಮೊಟ್ಟಮೊದಲ ಒಲಿಂಪಿಕ್ಸ್​ ಪದಕ ಗೆದ್ದುಕೊಟ್ಟರು. ಕಳೆದ 7 ಒಲಿಂಪಿಕ್ಸ್​ಗಳಿಂದ ಸೇಂಟ್​ ಲೂಸಿಯಾ ಬರಿಗೈಯಲ್ಲಿ ಮರಳಿತ್ತು. ಜೂಲಿಯನ್​ 2013ರಲ್ಲಿ ನಿಧನ ಹೊಂದಿದ ತನ್ನ ತಂದೆಗೆ ಪದಕವನ್ನು ಅರ್ಪಿಸಿದರು. ಜೂಲಿಯನ್​ 2022ರ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ರಜತ ಪದಕ ಗೆದ್ದಿದ್ದರು. ಜಮೈಕಾದ ತಾರೆ ಉಸೇನ್​ ಬೋಲ್ಟ್​ ತನಗೆ ಸ್ಫೂರ್ತಿ, ಸ್ಪರ್ಧೆಗೆ ಮುನ್ನ ಅವರ ಓಟದ ವಿಡಿಯೋ ನೋಡಿದ್ದೆ ಎಂದು ಜೂನಿಯನ್​ ಹೇಳಿದ್ದಾರೆ.

ಫ್ರೇಸರ್​ ಹೊರಬಿದ್ದ ಬಳಿಕ ಶಾಕಾರಿ ಚಿನ್ನ ಗೆಲ್ಲುವ ಫೇವರಿಟ್​ ಎನಿಸಿದ್ದರೂ, ಜೂಲಿಯನ್​ ಶಾಕ್​ ನೀಡಿದರು. 0.15 ಸೆಕೆಂಡ್​ಗಳಿಂದ ಶಾಕಾರಿಗೆ ಸೋಲುಣಿಸಿದ ಜೂಲಿಯನ್​ 2008ರ ಬಳಿಕ ಒಲಿಂಪಿಕ್ಸ್​ 100 ಮೀ. ಓಟದಲ್ಲಿ ಅತಿದೊಡ್ಡ ಅಂತರದ ಗೆಲುವಿನ ದಾಖಲೆ ಬರೆದರು. ಜೂಲಿಯನ್​ ಸೆಮೀಸ್​ ಹೀಟ್ಸ್​ನಲ್ಲೂ 10.84 ಸೆಕೆಂಡ್​ಗಳಲ್ಲಿ ಓಡಿ ಅಗ್ರಸ್ಥಾನ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net