

ನವದೆಹಲಿ: ಕ್ರಿಕೆಟ್ನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್ಮನ್ನ ಆಟದ ಶೈಲಿ ವಿಭಿನ್ನವಾಗಿರುತ್ತದೆ. ಎಲ್ಲರೂ ಒಂದೇ ರೀತಿ ಆಡುವುದಿಲ್ಲ. ಕೆಲವರು ಮೊದಲ ಎಸೆತದಿಂದಲೇ ಸ್ಪೋಟಕ ಆಟವಾಡಲು ಆರಂಭಿಸುತ್ತಾರೆ. ಇನ್ನೂ ಕೆಲವರು ನಿಧಾನವಾಗಿ ಆಡುತ್ತಾರೆ. ಕೆಲವರು ಆರಂಭದಲ್ಲಿ ನಿಧಾನವಾಗಿ ಆಡಿದರೂ ಗೇರ್ ಬದಲಾಯಿಸಿ ಅಗತ್ಯಕ್ಕೆ ತಕ್ಕಂತೆ ವೇಗ ಹೆಚ್ಚಿಸುತ್ತಾರೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೂಡ ಹೀಗೆ ಆಡುತ್ತಾರೆ.
ಅಂದಹಾಗೆ ರಕ್ಷಣಾತ್ಮಕ ಆಟವಾಡುವುದು ತಂಡ ದೊಡ್ಡ ಸ್ಕೋರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಮಾತ್ರ ಇದು ಸೂಕ್ತವಾಗಿದೆ. ಆದರೆ, ಟಿ20 ಪಂದ್ಯಗಳು ಕೊಂಚ ವಿಭಿನ್ನವಾಗಿದೆ. ಇಲ್ಲಿ ಬ್ಯಾಟ್ಸ್ಮನ್ ಸ್ಟ್ರೈಕ್ ರೇಟ್ ತುಂಬಾ ಪ್ರಮುಖವಾಗಿರುತ್ತದೆ. ಸ್ಟ್ರೈಕ್ ರೇಟ್ ಅಂದಕೊಡಲೇ ಇತ್ತೀಚೆಗೆ ವಿರಾಟ್ ಕೊಹ್ಲಿ ನೆನಪಾಗುತ್ತಾರೆ. ಏಕೆಂದರೆ, ಐಪಿಎಲ್-2024ರಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ನೀಡಿರುವ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪ್ರಸಕ್ತ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 10 ಪಂದ್ಯಗಳಲ್ಲಿ 509 ರನ್ ಗಳಿಸುವ ಮೂಲಕ ಟಾಪ್ ಸ್ಕೋರರ್ ಆಗಿದ್ದಾರೆ. ಆದರೆ, ಕೊಹ್ಲಿ ಸ್ಟ್ರೈಕ್ ರೇಟ್ ಮಾತ್ರ 146. ಹೀಗಾಗಿ ಎಲ್ಲರೂ ಕೊಹ್ಲಿಯನ್ನು ಟೀಕೆ ಮಾಡುತ್ತಿದ್ದಾರೆ. ಇಷ್ಟು ನಿಧಾನವಾಗಿ ಆಡಿದರೆ ವಿಶ್ವಕಪ್ ಗೆಲ್ಲಲು ಕಷ್ಟವಾಗಬಹುದು, ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳುವಂತೆ ಕೊಹ್ಲಿಗೆ ಸೂಚಿಸುತ್ತಿದ್ದಾರೆ. ಇದು ಕೊಹ್ಲಿಗೂ ಸಹ ಅರಿವಾಗಿದ್ದು, ಕಳೆದ ಕೆಲವು ಪಂದ್ಯಗಳಲ್ಲಿ ವೇಗವಾಗಿ ಆಟವಾಡಲು ಆರಂಭಿಸಿದ್ದಾರೆ. ಇದೀಗ ಕೊಹ್ಲಿ ಸ್ಟ್ರೈಕ್ ರೇಟ್ ಈ ಬಗ್ಗೆ ರೋಹಿತ್ ಪ್ರತಿಕ್ರಿಯಿಸಿದ್ದಾರೆ. ಟಿ20 ವಿಶ್ವಕಪ್ ತಂಡದ ಆಯ್ಕೆ ಕುರಿತು ಬಿಸಿಸಿಐ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಹಿಟ್ಮ್ಯಾನ್ ರೋಹಿತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಎಲ್ಲ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರಿಸಿದ ರೋಹಿತ್, ಪತ್ರಕರ್ತರು ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಕೇಳಿದಾಗ ಜೋರಾಗಿ ನಕ್ಕರು. ಹಿಟ್ಮ್ಯಾನ್ನ ಪಕ್ಕದಲ್ಲಿದ್ದ ಅಗರ್ಕರ್ಗೆ ನಗು ತಡೆಯಲಾಗಲಿಲ್ಲ. ವಿರಾಟ್ ಸ್ಟ್ರೈಕ್ ರೇಟ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ನಗುವನ್ನು ನಿಯಂತ್ರಿಸಿಕೊಂಡು ಅಗರ್ಕರ್ ಹೇಳಿದರು. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಕೊಹ್ಲಿ ಉತ್ತಮವಾಗಿ ಆಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕೆಎಲ್ ರಾಹುಲ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ತೆಗೆದುಕೊಂಡ ಕಾರಣವನ್ನು ಅಗರ್ಕರ್ ಬಹಿರಂಗಪಡಿಸಿದರು. ಕೆಎಲ್ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್, ಆದರೆ ಸಂಜು ಮಧ್ಯಮ ಕ್ರಮಾಂಕದಲ್ಲಿಯೂ ಆಡಬಲ್ಲರು, ಅದಕ್ಕಾಗಿಯೇ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ಅಗರ್ಕರ್ ಹೇಳಿದರು. (ಏಜೆನ್ಸೀಸ್)