ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಂಗಳೂರಿನ 15ರ ಬಾಲಕ ಜೊನಾಥನ್​ ಚಿನ್ನಕ್ಕೆ ಗುರಿ!

web shoot
Published on

ಡೆಹ್ರಾಡೂನ್: ಬೆಂಗಳೂರಿನ 15 ವರ್ಷದ ಬಾಲಕ ಜೊನಾಥನ್​ ಆಂಥೋನಿ ಶೂಟಿಂಗ್​ ಸ್ಪರ್ಧೆಯ 10 ಮೀ. ಏರ್​ ಪಿಸ್ತೂಲ್​ ವಿಭಾಗದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಕಂಚು ವಿಜೇತ ಸರಬ್ಜೋತ್​ ಸಿಂಗ್​ ಮತ್ತು ಸೌರಭ್​ ಚೌಧರಿಯಂಥ ಪ್ರಮುಖ ಶೂಟರ್​ಗಳಿಗೆ ಆಘಾತ ನೀಡುವ ಮೂಲಕ ಸ್ವರ್ಣ ಪದಕ ಗೆದ್ದು ಗಮನಸೆಳೆದಿದ್ದಾರೆ.

2022ರಲ್ಲಿ 8ನೇ ತರಗತಿಯಲ್ಲಿದ್ದಾಗ ಸಿಬಿಎಸ್​ಸಿ ದಣ ವಲಯ ರೈಲ್​ ಶೂಟಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶೂಟಿಂಗ್​ ವೃತ್ತೀಜಿವನವನ್ನು ಆರಂಭಿಸಿದ್ದ ಜೊನಾಥನ್​, ಫೈನಲ್​ ಸ್ಪರ್ಧೆಯಲ್ಲಿ 240.7 ಅಂಕ ಕಲೆಹಾಕುವ ಮೂಲಕ ಅಗ್ರಸ್ಥಾನ ಅಲಂಕರಿಸಿದರು. ಇದು ಸೀನಿಯರ್​ ವಿಭಾಗದಲ್ಲಿ ಅವರ ಅತಿದೊಡ್ಡ ಸಾಧನೆ ಎನಿಸಿದೆ. ಸರ್ವೀಸಸ್​ನ ಅನುಭವಿಗಳಾದ ರವಿಂದರ್​ ಸಿಂಗ್​ (240.3) ಮತ್ತು ಗುರುಪ್ರೀತ್​ ಸಿಂಗ್​ (220.1) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದುಕೊಂಡರು. ಪ್ಯಾರಿಸ್​ನಲ್ಲಿ ಮನುಭಾಕರ್​ ಜತೆಗೆ ಮಿಶ್ರ ವಿಭಾಗದಲ್ಲಿ ಪದಕ ಗೆದ್ದಿದ್ದ ಸರಬ್ಜೋತ್​ ಸಿಂಗ್​ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಒಲಿಂಪಿಯನ್​ ಹಾಗೂ ರಾಷ್ಟ್ರೀಯ ದಾಖಲೆ ವೀರ ಸೌರಭ್​ ಚೌಧರಿ ೈನಲ್​ಗೇರಲು ವಿಫಲರಾದರು.

"ಈ ಗೆಲುವು ನನಗೆ ರೋಮಾಂಚನ ತಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರತಿಭಾವಂತ ಶೂಟರ್​ಗಳ ಎದುರು ಬಂದಿರುವ ಈ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಇಂದು ನನ್ನ ದಿನವಾಗಿತ್ತು' ಎಂದು ಜೊನಾಥನ್​ ಆಂಥೋನಿ ಸ್ವರ್ಣ ಸಾಧನೆಯ ಬಳಿಕ ಹೇಳಿದರು.

ಒಲಿಂಪಿಯನ್​ ಸಿಫ್ಟ್​ ಕೌರ್​ಗೆ ಸ್ವರ್ಣ

ಒಲಿಂಪಿಯನ್​ ಹಾಗೂ ಏಷ್ಯನ್​ ಗೇಮ್ಸ್​ ಸ್ವರ್ಣ ವಿಜೇತೆ ಪಂಜಾಬ್​ನ 23 ವರ್ಷದ ಸಿಫ್ಟ್​ ಕೌರ್​ ಸಮ್ರಾ ಮಹಿಳೆಯರ 50 ಮೀ. ರೈಲ್​ 3 ಪೊಸಿಷನ್​ ಶೂಟಿಂಗ್​ ಸ್ಪರ್ಧೆಯಲ್ಲಿ 461.2 ಅಂಕ ಕಲೆಹಾಕುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಮತ್ತೋರ್ವ ಒಲಿಂಪಿಯನ್​ ಅಂಜುಮ್​ ಮೌಡ್ಗಿಲ್​ (458.7) ಬೆಳ್ಳಿ ಪದಕ ಗಳಿಸಿದರು. ತೆಲಂಗಾಣದ ಸೌರಭಿ ಭಾರಾಧ್ವಾಜ್​ ಕಂಚು ಪಡೆದರು.

ಸೈಕ್ಲಿಂಗ್​ನಲ್ಲಿ ಕೀರ್ತಿಗೆ ಚಿನ್ನ

ಕರ್ನಾಟಕದ ಸೈಕ್ಲಿಸ್ಟ್​ ಕೀರ್ತಿ ರಂಗಸ್ವಾಮಿ ಮಹಿಳೆಯರ 10 ಕಿಲೋಮೀಟರ್​ ಎಲೈಟ್​ ಸ್ಕ್ರಾಚ್​ ರೇಸ್​ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು. ಇದು ಕೂಟದ ಸೈಕ್ಲಿಂಗ್​ ಸ್ಪರ್ಧೆಯಲ್ಲಿ ರಾಜ್ಯಕ್ಕೆ 2ನೇ ದಿನದ ಪದಕವಾಗಿದೆ. ಅಸ್ಸಾಂನ ಚಾಯನಿಕಾ ಗೊಗೋಯಿ ಬೆಳ್ಳಿ ಮತ್ತು ಹರಿಯಾಣದ ಮೀನಾ ಕಂಚಿನ ಪದಕ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net