

ಮೆಲ್ಬೋರ್ನ್: ಮಹಿಳಾ ಸಿಂಗಲ್ಸ್ನಲ್ಲಿ ಹೊಸತಾರೆ ಉದಯಿಸಿದ್ದರೂ, ಪುರುಷರ ಸಿಂಗಲ್ಸ್ನಲ್ಲಿ 2020ರಲ್ಲೂ ದಿಗ್ಗಜರ ಪ್ರಾಬಲ್ಯ ಮುಂದುವರಿದಿದೆ. ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ ದಾಖಲೆಯ 8ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಹಾರ್ಡ್ಕೋರ್ಟ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಆಸ್ಟ್ರಿಯಾದ ಆಟಗಾರ ಡೊಮಿನಿಕ್ ಥೀಮ್ ಅವರಿಂದ ಎದುರಾದ ಕಠಿಣ ಸವಾಲನ್ನು ಮೆಟ್ಟಿನಿಂತ ಜೋಕೊವಿಕ್ 5 ಸೆಟ್ಗಳ ಮ್ಯಾರಥಾನ್ ಹೋರಾಟದಲ್ಲಿ 17ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮೆಲ್ಬೋರ್ನ್ ಪಾರ್ಕ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ 2ನೇ ಶ್ರೇಯಾಂಕಿತ ಜೋಕೊವಿಕ್ 6-4, 4-6, 2-6, 6-3, 6-4ರಿಂದ ಥೀಮ್ ವಿರುದ್ಧ ಗೆಲುವು ದಾಖಲಿಸಿದರು. ಈ ಮೂಲಕ ಸತತ 2ನೇ ವರ್ಷ, ವರ್ಷಾರಂಭದ ಗ್ರಾಂಡ್ ಸ್ಲಾಂ ಟೂರ್ನಿಯನ್ನು ಜಯಿಸಿದ ಸಾಧನೆ ಮಾಡಿದರು.
ಈ ಮೂಲಕ ಮೆಲ್ಬೋರ್ನ್ನಲ್ಲಿ ಫೈನಲ್ ಪ್ರವೇಶಿಸಿದಾಗಲೆಲ್ಲಾ ಪ್ರಶಸ್ತಿ ಗೆದ್ದಿರುವ ಅಜೇಯ ದಾಖಲೆಯನ್ನು ಜೋಕೊವಿಕ್ ಉಳಿಸಿಕೊಂಡರು. ಅಲ್ಲದೆ ಮೆಲ್ಬೋರ್ನ್ನಲ್ಲಿ ಅವರು ಸೆಮಿಫೈನಲ್ನಲ್ಲೂ 8-0 ಅಜೇಯ ದಾಖಲೆ ಹೊಂದಿದ್ದಾರೆ. ಹೀಗಾಗಿ ಇನ್ನು ಜೋಕೋ ಸೆಮಿಫೈನಲ್ಗೇರಿದರೆ ಪ್ರಶಸ್ತಿ ಖಚಿತ ಎನ್ನಬಹುದಾಗಿದೆ. ಮೆಲ್ಬೋರ್ನ್ ನಲ್ಲಿ ಬೇರಾರೂ 6ಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದಿಲ್ಲ.
6 ತಿಂಗಳ ಹಿಂದೆ ವಿಂಬಲ್ಡನ್ ಫೈನಲ್ನಲ್ಲಿ ರೋಜರ್ ಫೆಡರರ್ ವಿರುದ್ಧ 2 ಬಾರಿ ಚಾಂಪಿಯನ್ಷಿಪ್ ಪಾಯಿಂಟ್ ರಕ್ಷಿಸಿಕೊಂಡು ಪ್ರಶಸ್ತಿ ಜಯಿಸಿದ್ದ 32 ವರ್ಷದ ಜೋಕೊವಿಕ್ ಮೆಲ್ಬೋರ್ನ್ನಲ್ಲಿ ಮತ್ತೊಮ್ಮೆ ಅಂಥದ್ದೇ ಛಲ ಪ್ರದರ್ಶಿಸಿದರು. ಕಳೆದ ವರ್ಷದ ಫೈನಲ್ನಲ್ಲಿ ನಡಾಲ್ ವಿರುದ್ಧ ನೇರಸೆಟ್ಗಳಿಂದ ಜಯಿಸಿದ್ದ ಜೋಕೋ, ಈ ಬಾರಿ ಪ್ರಶಸ್ತಿಗಾಗಿ ಸಾಕಷ್ಟು ಬೆವರು ಹರಿಸಬೇಕಾಯಿತು.
ಒಟ್ಟಾರೆ 3 ಗಂಟೆ 59 ನಿಮಿಷಗಳ ಪ್ರಶಸ್ತಿ ಹೋರಾಟದಲ್ಲಿ ಜೋಕೋ 2 ಮತ್ತು 3ನೇ ಸೆಟ್ ಸೋತು ಹಿನ್ನಡೆ ಎದುರಿಸಿದರು. ಈ ವೇಳೆ ಜೋಕೋ, 26 ವರ್ಷದ ಥೀಮ್ ಎದುರು ಸತತ 6 ಗೇಮ್ಳನ್ನು ಕೈಚೆಲ್ಲಿದರು. 3ನೇ ಸೆಟ್ನಲ್ಲಿ ಜೋಕೋ ವೈದ್ಯಕೀಯ ನೆರವನ್ನೂ ಪಡೆದರು.
ಬಳಿಕ 4ನೇ ಸೆಟ್ ಗೆದ್ದು ಪಂದ್ಯಕ್ಕೆ ಮರಳಿದ ಜೋಕೋ, ನಿರ್ಣಾಯಕ ಸೆಟ್ನ 3ನೇ ಗೇಮ್ಲ್ಲೇ 5ನೇ ಶ್ರೇಯಾಂಕಿತ ಥೀಮ್ ಸರ್ವ್ ಬ್ರೇಕ್ ಮಾಡಿ 2-1 ಮುನ್ನಡೆ ಸಂಪಾದಿಸಿದರು. ಬಳಿಕ ಕೊನೆಯವರೆಗೂ ಮುನ್ನಡೆ ಉಳಿಸಿಕೊಂಡ ಜೋಕೋ ಆಸ್ಟ್ರೇಲಿಯನ್ ಓಪನ್ ಟ್ರೋಫಿಗೆ 8ನೇ ಬಾರಿ ಮುತ್ತಿಕ್ಕಿ ಬೀಗಿದರು.
ಥೀಮ್ ಜಯಿಸಿದ್ದರೆ, 1990ರ ನಂತರ ಜನಿಸಿದ ಆಟಗಾರರ ಪೈಕಿ ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತರಾಗುತ್ತಿದ್ದರು. ಜತೆಗೆ ‘ಬಿಗ್ ತ್ರಿ’ ಪ್ರಾಬಲ್ಯವನ್ನು ಮುರಿದ ಹೆಗ್ಗಳಿಕೆಗೂ ಪಾತ್ರರಾಗುತ್ತಿದ್ದರು.
ಫೈನಲ್ ಪಂದ್ಯದ ಬಳಿಕ ಥೀಮ್ ಆಟವನ್ನು ಶ್ಲಾಘಿಸಿದ ಜೋಕೊವಿಕ್, ‘ನಿಮ್ಮ ವೃತ್ತಿಜೀವನದಲ್ಲಿ ಇನ್ನೂ ಸಾಕಷ್ಟು ಸಮಯ ವಿದೆ ಮತ್ತು ಖಂಡಿತವಾಗಿಯೂ ಒಂದಕ್ಕಿಂತ ಹೆಚ್ಚು ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಲಿದ್ದೀರಿ’ ಎಂದರು.
ಮುಂದಿನ ಗ್ರಾಂಡ್ ಸ್ಲಾಂ
ರಾಮ್ಸಲಿಸ್ಬರಿಗೆ ಡಬಲ್ಸ್ ಪ್ರಶಸ್ತಿ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ನ ಜೋಯಿ ಸಲಿಸ್ಬರಿ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ. 11ನೇ ಶ್ರೇಯಾಂಕಿತ ರಾಮ್ಸಲಿಸ್ಬರಿ ಜೋಡಿ ಫೈನಲ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾದ ವೈಲ್ಡ್ ಕಾರ್ಡ್ ಪ್ರವೇಶದ ಜೋಡಿಯಾದ ಮ್ಯಾಕ್ಸ್ ಪುರ್ಸೆಲ್ ಮತ್ತು ಲ್ಯೂಕ್ ಸ್ಯಾವಿಲ್ ಜೋಡಿಯನ್ನು 6-4, 6-2 ನೇರಸೆಟ್ಗಳಿಂದ ಪರಾಭವಗೊಳಿಸಿತು.
ನನ್ನ ಆಟದ ಗುಣಮಟ್ಟ ಸುಧಾರಿಸಲು ನಿಮ್ಮ (ಜೋಕೋ) ಆಟ ನೆರವಾಗಿದೆ. ನನ್ನ ಆಟದ ಬಗ್ಗೆ ಹೆಮ್ಮೆ ಇದೆ. ನಾನಿಂದು ಸ್ವಲ್ಪದರಲ್ಲಿಯೇ ಸೋಲು ಕಂಡಿರಬಹುದು. ಅತಿ ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳಲಿದ್ದೇನೆ. | ಡೊಮಿನಿಕ್ ಥೀಮ್ ಇದು ಖಂಡಿತವಾಗಿಯೂ ನನ್ನ ನೆಚ್ಚಿನ ಕೋರ್ಟ್. ವಿಶ್ವದಲ್ಲಿಯೇ ನೆಚ್ಚಿನ ಕ್ರೀಡಾಂಗಣ. ನಾನು ಇಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯುವ ಭಾಗ್ಯಶಾಲಿಯಾಗಿದ್ದೇನೆ. | ನೊವಾಕ್ ಜೋಕೊವಿಕ್ ಚಾಂಪಿಯನ್