

ಮ್ಯಾಂಚೆಸ್ಟರ್: ಇಂಗ್ಲೆಂಡ್ನಲ್ಲಿ ಕರೊನಾ ಭೀತಿಯಿಂದ ಮುಕ್ತವಾಗಿ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಂಡು ಟೆಸ್ಟ್ ಕ್ರಿಕೆಟ್ ಆಡಲಾಗುತ್ತಿದೆ. ಇದರ ನಡುವೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಜೈವಿಕ-ಸುರಕ್ಷೆಯ ನಿಯಮವನ್ನು ಉಲ್ಲಂಘಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಜತೆಗೆ ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದಿದ್ದರು. ಅವರಿಂದ ಇಂಥದ್ದೊಂದು ಎಡವಟ್ಟು ಆಗಲು ಅವರ ಗೆಳತಿ ಕಾರಣ ಎಂದು ದೂರಲಾಗುತ್ತಿದೆ!
ಮೊದಲ ಟೆಸ್ಟ್ ಪಂದ್ಯ ನಡೆದ ಸೌಥಾಂಪ್ಟನ್ನಿಂದ 2ನೇ ಟೆಸ್ಟ್ ಪಂದ್ಯಕ್ಕಾಗಿ ಮ್ಯಾಂಚೆಸ್ಟರ್ಗೆ ಬರುವ ನಡುವೆ ಆರ್ಚರ್, ಜೈವಿಕ-ಸುರಕ್ಷಾ ವಾತಾವರಣದಿಂದ ಹೊರಗಿನವರನ್ನು ಅಂದರೆ ತಮ್ಮ ಗೆಳತಿಯನ್ನು ಭೇಟಿಯಾಗಿದ್ದೇ ಅವರನ್ನು ಮತ್ತೆ ಐಸೋಲೇಷನ್ನಲ್ಲಿಡಲು ಕಾರಣವಾಗಿದೆ ಎಂದು ವರದಿಯಾಗುತ್ತಿದೆ. ಜೈವಿಕ ಸುರಕ್ಷಾ ವಾತಾವರಣದ ನಿಯಮದ ಅನ್ವಯ, ಕರೊನಾ ಪರೀಕ್ಷೆಗಳನ್ನು ಮುಗಿಸಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಒಗ್ಗೂಡಿದ ಬಳಿಕ ಯಾರೂ, ಹೊರಗಿನವರನ್ನು ಭೇಟಿಯಾಗುವಂತಿಲ್ಲ. ಜೈವಿಕ-ಸುರಕ್ಷಾ ವಾತಾವರಣದಿಂದ ಒಳಗಿನವರು ಹೊರಹೋಗುವಂತಿಲ್ಲ. ಹೊರಗಿನವರು ಒಳಬರುವಂತಿಲ್ಲ.
ಇದನ್ನೂ ಓದಿ: 3ಟಿ ಕ್ರಿಕೆಟ್ ಪಂದ್ಯದಲ್ಲಿ ಚಿನ್ನ ಗೆದ್ದ ಈಗಲ್ಸ್
ಸೌಥಾಂಪ್ಟನ್ನಿಂದ ಮ್ಯಾಚೆಂಸ್ಟರ್ಗೆ 362 ಕಿಲೋಮೀಟರ್ಗಳ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಬರುವ ವೇಳೆ ಅವರು ಬ್ರಿಗ್ಟನ್ನ ತಮ್ಮ ಮನೆಗೆ ತೆರಳಿದ್ದರು. ನಿಯಮ ಪ್ರಕಾರ ಅವರು ನಡುವೆ ಬೇರೆಲ್ಲೂ ಹೋಗದೆ ನೇರವಾಗಿ ಮ್ಯಾಂಚೆಸ್ಟರ್ ತಲುಪಬೇಕಾಗಿತ್ತು. ಗೆಳತಿಯನ್ನು ನೋಡುವ ಸಲುವಾಗಿ ಆರ್ಚರ್ ಮನೆಗೆ ಹೋಗಿದ್ದರು ಎಂದು ಬ್ರಿಟನ್ನ ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ 25 ವರ್ಷದ ಆರ್ಚರ್ ಅವರ ಗೆಳೆಯನೊಬ್ಬ, ಅವರು ತಮ್ಮ ಮನೆಯ ನಾಯಿಯನ್ನು ಮುದ್ದಿಸಲು ಹೋಗಿದ್ದರು ಎಂದಿದ್ದಾನೆ. ವೆಸ್ಟ್ ಇಂಡೀಸ್ ಮೂಲದ ಆರ್ಚರ್ ಕಳೆದ ಕೆಲ ಸಮಯದಿಂದ ಗೆಳತಿ ಜತೆ ಸುತ್ತಾಡುತ್ತಿದ್ದು, ಐಪಿಎಲ್ ವೇಳೆ ಭಾರತಕ್ಕೂ ಕರೆತಂದಿದ್ದರು. ಆದರೆ ಆಕೆಯ ಹೆಸರು ಇನ್ನೂ ಬಹಿರಂಗಗೊಂಡಿಲ್ಲ.
ಆರ್ಚರ್ಗೆ ದಂಡ ವಿಧಿಸಿದ ಇಸಿಬಿ
ಜೈವಿಕ-ಸುರಕ್ಷಾ ವಾತಾವರಣದ ನಿರ್ಬಂಧವನ್ನು ಉಲ್ಲಂಸಿ ಹೊರನಡೆದಿದ್ದ ಜೋಫ್ರಾ ಆರ್ಚರ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಬಹಿರಂಗಪಡಿಸದ ಮೊತ್ತದ ದಂಡ ವಿಧಿಸಿದೆ. 3ನೇ ಟೆಸ್ಟ್ಗೆ ಅವರು ಲಭ್ಯರಿದ್ದಾರೆ ಎಂದು ಇಸಿಬಿ ತಿಳಿಸಿದೆ. ಆರ್ಚರ್ ಮಾಡಿದ ತಪ್ಪಿನಿಂದ ನಮಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಾಧ್ಯತೆ ಇತ್ತು ಎಂದು ಇಸಿಬಿ ತಿಳಿಸಿತ್ತು. ಘಟನೆಗೆ ಸಂಬಂಧಿಸಿ ಆರ್ಚರ್ ಈಗಾಗಲೆ ಕ್ಷಮೆಯಾಚಿಸಿದ್ದಾರೆ.