ಸಿರಾಜ್​ ಸ್ಮಾರ್ಟ್​ವಾಚ್​ ಚೂರು ಮಾಡಿದ ಜೋ ರೂಟ್​! ವಿಡಿಯೋ ವೈರಲ್​ | IND vs ENG

ವಿಜಯವಾಣಿ (85)
Published on

IND v ENG: ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್‌ನ ಸ್ಟಾರ್​ ಆಟಗಾರ ಜೋ ರೂಟ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಏಕಾಂಗಿಯಾಗಿ 150 ರನ್ ಸಿಡಿಸಿದ ರೂಟ್​, ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಲ್ಲದೇ ಹಲವು ಹಿಂದಿನ ದಾಖಲೆಗಳನ್ನು ಸರಿಗಟ್ಟಿದರು.

ದಾಖಲೆಗಳನ್ನು ನಿರ್ಮಿಸುವ ಭರದಲ್ಲಿ ಟೀಮ್ ಇಂಡಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಜೋ ರೂಟ್​, ಆಕಸ್ಮಿಕವಾಗಿ ಮೊಹಮ್ಮದ್ ಸಿರಾಜ್‌ಗೆ ಡಿಕ್ಕಿ ಹೊಡೆದರು. ಈ ವೇಳೆ ಸಿರಾಜ್​ ಧರಿಸಿದ್ದ ಸ್ಮಾರ್ಟ್​ವಾಚ್​ ಚೂರಾದ ದೃಶ್ಯ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ. ಈ ಘಟನೆ ಇಂಗ್ಲೆಂಡ್ ಇನ್ನಿಂಗ್ಸ್‌ನ 52ನೇ ಓವರ್‌ನಲ್ಲಿ ಸಂಭವಿಸಿತು. ಸಿರಾಜ್​ ಬೌಲಿಂಗ್ ಮಾಡುತ್ತಿದ್ದ ಓವರ್‌ನ 5ನೇ ಎಸೆತದಲ್ಲಿ ರೂಟ್ ಬಲವಾಗಿ ಬೀಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಬದಲಿಗೆ ಬಾಲ್​ ಲೆಗ್​ ಪ್ಯಾಡ್​ಗೆ ಬಿದ್ದಿತು.

ಈ ವೇಳೆ ಸಿರಾಜ್, ಕೂಡಲೇ ಅಂಪೈರ್ ಕಡೆಗೆ ತಿರುಗಿ ಎಲ್‌ಬಿಡಬ್ಲ್ಯೂಗಾಗಿ ಮನವಿ ಮಾಡಿದರು. ಅದೇ ಸಮಯದಲ್ಲಿ, ಸಿಂಗಲ್ ತೆಗೆದುಕೊಳ್ಳಲು ರೂಟ್​ ಓಡುವಾಗ ಅವರ ಬ್ಯಾಟ್ ಆಕಸ್ಮಿಕವಾಗಿ ಸಿರಾಜ್ ಕೈಯಲ್ಲಿದ್ದ ವಾಚ್​ಗೆ ತಗುಲಿತು. ಇದರ ಪರಿಣಾಮವಾಗಿ, ವಾಚ್​ ಡಿಕ್ಕಿಯಾದ ರಭಸಕ್ಕೆ ಚೂರಾಗಿದೆ ಎಂಬುದು ದೃಶ್ಯದಲ್ಲಿ ಸೆರೆಯಾಗಿದೆ.

ಇನ್ನು ಪಂದ್ಯದ ವಿವರ

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್ ಗಳಿಸಿದರೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್‌ಗೆ ಆಲೌಟ್ ಆಯಿತು. ಇದು ಆಂಗ್ಲರಿಗೆ 311 ರನ್‌ಗಳ ನಿರ್ಣಾಯಕ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ನೀಡಿದೆ. ಇನ್ನು ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ, ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ಗಳಿಗೆ 174 ರನ್ ಗಳಿಸಿತು. ನಾಯಕ ಶುಭಮನ್ ಗಿಲ್ (78) ಮತ್ತು ಕೆ.ಎಲ್. ರಾಹುಲ್ (87) ಬಾರಿಸಿ, ಅಜೇಯರಾಗಿ ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಸ್ಕೋರ್‌ಗಿಂತ ಭಾರತ ಇನ್ನೂ 137 ರನ್‌ಗಳ ಹಿಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net