ರಾಂಚಿಯಲ್ಲಿ ಭಾರತವನ್ನು ಕಾಡಿದ ಜೋ ರೂಟ್​ ಶತಕ

root web
Published on

ರಾಂಚಿ: ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ಆಕಾಶ್​ ದೀಪ್​ (70ಕ್ಕೆ 3) ಭರ್ಜರಿ ಆರಂಭ ಒದಗಿಸಿದರೂ, ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್​ ಜೋ ರೂಟ್​ (106*ರನ್​, 226 ಎಸೆತ, 9 ಬೌಂಡರಿ) ಸಿಡಿಸಿದ ಜವಾಬ್ದಾರಿಯುತ ಶತಕದ ಪ್ರತಿರೋಧದಿಂದ ಭಾರತ ತಂಡ ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಪ್ರವಾಸಿ ಇಂಗ್ಲೆಂಡ್​ ತಂಡಕ್ಕೆ ಉತ್ತಮ ಮೊತ್ತ ಬಿಟ್ಟುಕೊಟ್ಟಿದೆ. ಆಕ್ರಮಣಕಾರಿ ಬಾಜ್​ಬಾಲ್​ ಕಾರ್ಯತಂತ್ರಕ್ಕೆ ಬದಲಾಗಿ ಎಂದಿನ ಟೆಸ್ಟ್​ ಮಾದರಿಯ ತಾಳ್ಮೆಯ ಬ್ಯಾಟಿಂಗ್​ ಪ್ರದರ್ಶಿಸುವ ಮೂಲಕ ರೂಟ್​ ಆಂಗ್ಲರಿಗೆ ಆಸರೆಯಾಗಿ ನಿಂತರು. ಇದರಿಂದಾಗಿ ರೋಹಿತ್​ ಶರ್ಮ ಬಳಗ ಮೊದಲ ದಿನವೇ ಆಂಗ್ಲರ ಇನಿಂಗ್ಸ್​ ಮುಗಿಸುವ ಪ್ರಯತ್ನದಲ್ಲಿ ಯಶ ಕಾಣಲಿಲ್ಲ.

ಜೆಎಸ್​ಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಇಂಗ್ಲೆಂಡ್​ ತಂಡ ದಿನದಂತ್ಯಕ್ಕೆ 90 ಓವರ್​ಗಳಲ್ಲಿ 7 ವಿಕೆಟ್​ಗೆ 302 ರನ್​ ಪೇರಿಸಿದೆ. ಶತಕವೀರ ರೂಟ್​ ಜತೆಗೆ ಬಾಲಂಗೋಚಿ ಒಲಿ ರಾಬಿನ್​ಸನ್​ (31*) ಕ್ರೀಸ್​ನಲ್ಲಿದ್ದಾರೆ. ಮುರಿಯದ 8ನೇ ವಿಕೆಟ್​ಗೆ ಇವರಿಬ್ಬರು ಈಗಾಗಲೆ 57 ರನ್​ ಸೇರಿಸಿದ್ದಾರೆ.

ಆಘಾತಕಾರಿ ಆರಂಭದ ಬಳಿಕ ಬಾಜ್​ಬಾಲ್​ ಕಾರ್ಯತಂತ್ರವನ್ನು ಬಹುತೇಕ ಮರೆತಂತೆ ಆಡಿದ ಇಂಗ್ಲೆಂಡ್​ ತಂಡ ಉತ್ತಮ ಮೊತ್ತ ಪೇರಿಸುವತ್ತ ಗಮನಹರಿಸಿತು. ಹೀಗಾಗಿ ಭಾರತೀಯ ಬೌಲರ್​ಗಳಿಗೆ ಸುಲಭವಾಗಿ ವಿಕೆಟ್​ ಒಪ್ಪಿಸಲಿಲ್ಲ. ಹೀಗಾಗಿ ವಿಕೆಟ್​ಗಾಗಿ ಪದೇಪದೆ ಡಿಆರ್​ಎಸ್​ ಮೊರೆ ಹೋದ ಭಾರತ 2 ಯಶಸ್ಸು ಕಂಡ ನಡುವೆ, ಮೊದಲ 60 ಓವರ್​ಗಳಲ್ಲೇ ತನ್ನ ಎಲ್ಲ 3 ರಿವೀವ್​ಗಳನ್ನು ಕಳೆದುಕೊಂಡಿತು. ಮೊದಲ ದಿನ ಇಂಗ್ಲೆಂಡ್​ ಪ್ರತಿ ಓವರ್​ಗೆ 3.35ರ ಸರಾಸರಿಯಲ್ಲಿ ರನ್​ ಗಳಿಸಿದ್ದು, ಸರಣಿ ಸಮಬಲಕ್ಕಾಗಿ ಎಂದಿನ "ಟೆಸ್ಟ್​ ಕ್ರಿಕೆಟ್​' ಆಟಕ್ಕೆ ಮೊರೆ ಹೋಗಿದೆ.

ಆಂಗ್ಲರ ಎದುರು ಅಶ್ವಿನ್​ ವಿಕೆಟ್​ ಶತಕ

ಜಾನಿ ಬೇರ್​ಸ್ಟೋ ವಿಕೆಟ್​ ಕಬಳಿಸುವ ಮೂಲಕ ಆರ್​. ಅಶ್ವಿನ್​ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ನಲ್ಲಿ 100 ವಿಕೆಟ್​ ಕಬಳಿಸಿದ ಮೊದಲ ಭಾರತೀಯ ಬೌಲರ್​ ಎನಿಸಿದರು. ಅಶ್ವಿನ್​ ಈ ಮುನ್ನ ಆಸ್ಟ್ರೆಲಿಯಾ (114) ವಿರುದ್ಧವೂ 100 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ದರು. ಇಂಗ್ಲೆಂಡ್​ ವಿರುದ್ಧ 1085 ರನ್​ ಕೂಡ ಬಾರಿಸಿರುವ ಅಶ್ವಿನ್​, ಆಂಗ್ಲರ ಎದುರು 100 ವಿಕೆಟ್​ ಮತ್ತು ಸಾವಿರ ರನ್​ ಗಳಿಸಿದ 4ನೇ ಆಟಗಾರ ಎನಿಸಿದರು. ಗ್ಯಾರಿ ಸೋಬರ್ಸ್​, ಮಾಂಟಿ ನೋಬಲ್​ ಮತ್ತು ಜಾರ್ಜ್​ ಗಿಫೆನ್​ ಮೊದಲ ಮೂವರು. ಕಳೆದ ಟೆಸ್ಟ್​ನಲ್ಲಿ 500 ವಿಕೆಟ್​ ಪೂರೈಸಿದ್ದ ಅಶ್ವಿನ್​, ಸರಣಿಯ ಕೊನೇ ಪಂದ್ಯದ ವೇಳೆ 100 ಟೆಸ್ಟ್​ ಆಡಿದ ಸಾಧನೆಯನ್ನೂ ಮಾಡಲಿದ್ದಾರೆ.

ಆಕಾಶ್​ದೀಪ್​ ಯಶಸ್ವಿ ಪದಾರ್ಪಣೆ

ದೇಶೀಯ ಕ್ರಿಕೆಟ್​ನಲ್ಲಿ ಬಂಗಾಳ ಪರ ಆಡುತ್ತಿರುವ ಬಿಹಾರ ಮೂಲದ 27 ವರ್ಷದ ವೇಗಿ ಆಕಾಶ್​ ದೀಪ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಕನಸಿನ ಆರಂಭ ಕಂಡರು. ತನ್ನ 2ನೇ ಓವರ್​ನಲ್ಲೇ ಜಾಕ್​ ಕ್ರೌಲಿ ಅವರನ್ನು ಬೌಲ್ಡ್​ ಮಾಡಿದರೂ, ಅದು ನೋಬಾಲ್​ ಆಗಿದ್ದ ಕಾರಣ ಚೊಚ್ಚಲ ವಿಕೆಟ್​ಗಾಗಿ ಇನ್ನೂ ಕೆಲ ಓವರ್​ ಕಾಯಬೇಕಾಯಿತು. ನಂತರದಲ್ಲಿ ಅವರು 10 ಎಸೆತಗಳ ಅಂತರದಲ್ಲಿ ಬೆನ್​ ಡಕೆಟ್​ (11), ಒಲಿ ಪೋಪ್​ (0) ಮತ್ತು ಜಾಕ್​ ಕ್ರೌಲಿ (42) ವಿಕೆಟ್​ ಕಬಳಿಸಿದರು. ಇದರಿಂದ ಇಂಗ್ಲೆಂಡ್​ 57 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ಆಂಗ್ಲರಿಗೆ ರೂಟ್​ ಶತಕದಾಸರೆ

ಸರಣಿಯ ಮೊದಲ 6 ಇನಿಂಗ್ಸ್​ಗಳಲ್ಲಿ ಕೇವಲ 77 ರನ್​ ಗಳಿಸಿದ್ದ 33 ವರ್ಷದ ಜೋ ರೂಟ್​, ಅದಕ್ಕಿಂತ ಹೆಚ್ಚು ಓವರ್​ಗಳನ್ನು (107) ಎಸೆದು ಬೌಲಿಂಗ್​ನಲ್ಲೇ ಹೆಚ್ಚು ನೆರವಾಗಿದ್ದರು. ಆದರೆ ಈ ಬಾರಿ ಕೊನೆಗೂ ಲಯಕ್ಕೆ ಮರಳಿದ ರೂಟ್​ ಸರಣಿಯಲ್ಲಿ ಮೊದಲ ಬಾರಿ 40ರ ಗಡಿ ದಾಟಿದರು ಮತ್ತು ಅದನ್ನು 31ನೇ ಟೆಸ್ಟ್​ ಶತಕವಾಗಿ ಪರಿವರ್ತಿಸಿಕೊಂಡರು. ಕಳೆದ ಇನಿಂಗ್ಸ್​ಗಳಲ್ಲಿ ಬಾಜ್​ಬಾಲ್​ ಆಕ್ರಮಣದ ಒತ್ತಡದಲ್ಲಿ ಕೆಟ್ಟ ಹೊಡೆತಗಳನ್ನು ಆಡಿ ವಿಕೆಟ್​ ಒಪ್ಪಿಸಿದ್ದ ರೂಟ್​, ಈ ಬಾರಿ ಕ್ಲಾಸಿಕಲ್​ ಟೆಸ್ಟ್​ ಇನಿಂಗ್ಸ್​ನೊಂದಿಗೆ ಭಾರತೀಯ ಬೌಲರ್​ಗಳನ್ನು ಕಾಡಿದರು. 4ನೇ ವಿಕೆಟ್​ಗೆ ಜಾನಿ ಬೇರ್​ಸ್ಟೋ (38) ಜತೆಗೆ 52 ರನ್​ ಸೇರಿಸಿ ಆರಂಭಿಕ ಆಘಾತದಿಂದ ತಂಡವನ್ನು ಹೊರತಂದ ರೂಟ್​, 6ನೇ ವಿಕೆಟ್​ಗೆ ವಿಕೆಟ್​ ಕೀಪರ್​-ಬ್ಯಾಟರ್​ ಬೆನ್​ ಫೋಕ್ಸ್​ (47) ಜತೆಗೆ 261 ಎಸೆತಗಳಲ್ಲಿ 113 ರನ್​ ಸೇರಿಸಿ ಸುಸ್ಥಿತಿಯತ್ತ ಕೊಂಡೊಯ್ದರು. ಬಾಜ್​ಬಾಲ್​ ಮೂಡ್​ನಲ್ಲೇ ಇದ್ದ ಬೇರ್​ಸ್ಟೋ, ಅಶ್ವಿನ್​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದಾಗ ಅಂಪೈರ್​ ನಾಟೌಟ್​ ಎಂದರೂ ಡಿಆರ್​ಎಸ್​ ಮೂಲಕ ಭಾರತ ಯಶ ಸಾಧಿಸಿತು. ಚಹಾ ವಿರಾಮದ ನಂತರ ಸಿರಾಜ್​, ರೂಟ್​-ಫೋಕ್ಸ್​ ಜತೆಯಾಟ ಮುರಿದು ಭಾರತಕ್ಕೆ ಸಮಾಧಾನ ತಂದರು.

*10: ಜೋ ರೂಟ್​ ಅವರ 31 ಟೆಸ್ಟ್​ ಶತಕಗಳಲ್ಲಿ 10 ಭಾರತದ ವಿರುದ್ಧವೇ ದಾಖಲಾಗಿವೆ.

*313: ಆಕಾಶ್​ ದೀಪ್​ ಭಾರತ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ 313ನೇ ಆಟಗಾರ ಎನಿಸಿದರು.

*219: ಜೋ ರೂಟ್​ 219 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟೆಸ್ಟ್​ ಕ್ರಿಕೆಟ್​ನಲ್ಲಿ ಅವರ 3ನೇ ಅತ್ಯಂತ ನಿಧಾನಗತಿಯ ಶತಕವಾಗಿದೆ. 2019ರಲ್ಲಿ 259 ಮತ್ತು 2013ರಲ್ಲಿ 247 ಎಸೆತಗಳಲ್ಲಿ ಶತಕ ಸಿಡಿಸಿದ್ದು ಮೊದಲೆರಡು ನಿಧಾನಗತಿ ಶತಕಗಳಾಗಿವೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net