

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾಗೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದ ಸ್ವರ್ಣ ಪದಕ ಉಳಿಸಿಕೊಳ್ಳಲು ಪ್ರಬಲ ಪ್ರತಿಸ್ಪರ್ಧೆ ಎದುರಾಗುವ ಸಾಧ್ಯತೆ ಕಾಣಿಸಿದೆ. ಜರ್ಮನಿಯ 19 ವರ್ಷದ ಮ್ಯಾಕ್ಸ್ ಡೆಹ್ನಿಂಗ್ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಹೊಸ ಉದಯೋನ್ಮುಖ ತಾರೆಯಾಗಿ ಮೂಡಿಬಂದಿದ್ದು, ಈಗಾಗಲೆ 90 ಮೀಟರ್ ಗಡಿಯನ್ನೂ ದಾಟಿದ್ದಾರೆ. ಹೀಗಾಗಿ ನೀರಜ್ ಪ್ಯಾರಿಸ್ನಲ್ಲಿ ಮೊದಲ ಬಾರಿಗೆ 90 ಮೀಟರ್ಗಿಂತ ಅಧಿಕ ದೂರ ಜಾವೆಲಿನ್ ಎಸೆಯದಿದ್ದರೆ ಸತತ 2ನೇ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಡುವುದು ಕಷ್ಟಕರವಾಗಲಿದೆ.
ಡೆಹ್ನಿಂಗ್ ಇತ್ತೀಚೆಗೆ ಜರ್ಮನ್ ವಿಂಟರ್ ಥ್ರೋಯಿಂಗ್ ಚಾಂಪಿಯನ್ಷಿಪ್ನಲ್ಲಿ 90.20 ಮೀಟರ್ ದೂರ ಜಾವೆಲಿನ್ ಎಸೆದಿದ್ದು, 90 ಮೀ. ಗಡಿ ದಾಟಿದ ಅತ್ಯಂತ ಕಿರಿಯರೆನಿಸಿದ್ದಾರೆ. ಅಲ್ಲದೆ ಹಾಲಿ ಒಲಿಂಪಿಕ್ಸ್ ವರ್ಷದಲ್ಲಿ 90 ಮೀಟರ್ಗಿಂತ ದೂರ ಜಾವೆಲಿನ್ ಎಸೆದ ಮೊದಲಿಗರಾಗಿದ್ದಾರೆ. ಡೆಹ್ನಿಂಗ್ ಈಗಾಗಲೆ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆಯನ್ನೂ ಸಂಪಾದಿಸಿದ್ದಾರೆ. ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಎಸೆತ ಸ್ಪರ್ಧೆಗೆ ನೇರಅರ್ಹತೆ ಸಂಪಾದಿಸಲು 83 ಮೀ. ಮಾನದಂಡವಾಗಿದೆ.
ಜಾವೆಲಿನ್ ಎಸೆತ ಸ್ಪರ್ಧೆಯ ಪವರ್ಹೌಸ್ ಎನಿಸಿದ್ದ ಜರ್ಮನಿ ಇತ್ತೀಚೆಗೆ ನೀರಜ್ ಪ್ರವರ್ಧಮಾನಕ್ಕೆ ಬಂದ ಬಳಿಕ ಆ ಖ್ಯಾತಿ ಕಳೆದುಕೊಂಡಿತ್ತು. ಇದೀಗ ಡೆಹ್ನಿಂಗ್ ಮಿಂಚುವುದರೊಂದಿಗೆ ಜರ್ಮನಿ ಮತ್ತೆ ಆ ಖ್ಯಾತಿಯನ್ನು ತನ್ನದಾಗಿಸುವ ನಿರೀಕ್ಷೆಯಲ್ಲಿದೆ.
26 ವರ್ಷದ ನೀರಜ್ ಚೋಪ್ರಾ ಈಗಾಗಲೆ ಡೈಮಂಡ್ ಲೀಗ್ ಸಹಿತ ವಿಶ್ವದ ಎಲ್ಲ ಪ್ರಮುಖ ಅಥ್ಲೆಟಿಕ್ಸ್ ಕೂಟಗಳ ಸ್ವರ್ಣ ಪದಕವನ್ನು ಸಂಪಾದಿಸಿದ್ದರೂ, ಒಮ್ಮೆಯೂ 90 ಮೀ. ಗಡಿ ದಾಟಿಲ್ಲ. 89.94 ಮೀ. ಅವರ ಗರಿಷ್ಠ ಎಸೆತವಾಗಿದೆ. ಆದರೆ ಹಾಲಿ ಋತುವಿನಲ್ಲಿ ನೀರಜ್ ಇನ್ನೂ ಸ್ಪರ್ಧೆ ಆರಂಭಿಸಿಲ್ಲ. ಸದ್ಯ ದಕ್ಷಿಣ ಆಫ್ರಿಕಾ, ಸ್ವಿರ್ಜಲೆಂಡ್ನಲ್ಲಿ ತರಬೇತಿ ಪಡೆಯುತ್ತಿರುವ ನೀರಜ್, ಮರಳಿ ಕಣಕ್ಕಿಳಿದಾಗ 90 ಮೀ. ಗಡಿ ದಾಟಿದರೆ, ಡೆಹ್ನಿಂಗ್ ಸವಾಲು ಬದಿಗೊತ್ತಿ ಒಲಿಂಪಿಕ್ಸ್ ಸ್ವರ್ಣ ಉಳಿಸಿಕೊಳ್ಳುವ ನಿರೀಕ್ಷೆಯೂ ಹೆಚ್ಚಾಗಲಿದೆ.